ADVERTISEMENT

19ರಂದು ಪಲ್ಸ್ ಪೋಲಿಯೊ ಯಶಸ್ವಿಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 7:55 IST
Last Updated 15 ಫೆಬ್ರುವರಿ 2012, 7:55 IST

ಚಾಮರಾಜನಗರ: `ಜಿಲ್ಲೆಯಲ್ಲಿ ಫೆ. 19ರಂದು ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಅಧಿಕಾರಿಗಳು ಈ ರಾಷ್ಟ್ರೀಯ ಅಭಿಯಾನದ ಯಶಸ್ವಿಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು~ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಟಿ. ಚಂದ್ರಶೇಖರ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪಲ್ಸ್ ಪೋಲಿಯೊ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಆಗತಾನೇ ಹುಟ್ಟಿದ ಮಗುವಿನಿಂದ ಹಿಡಿದು ಐದು ವರ್ಷದವರೆಗಿನ ಎಲ್ಲ ಮಕ್ಕಳಿಗೆ ಪೋಲಿಯೊ ಹನಿ ಹಾಕಬೇಕು. ಲಸಿಕಾ ಕೇಂದ್ರ ತೆರೆಯಲು ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಬೇಕು.

ಶಾಲೆಗಳ ಪ್ರಾರ್ಥನಾ ಸಮಯದಲ್ಲಿ ಪೋಲಿಯೊ ಅಭಿಯಾನದ ಬಗ್ಗೆ ಶಿಕ್ಷಕರು ಮಕ್ಕಳಿಗೆ ಮಾಹಿತಿ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 614 ಲಸಿಕಾ ಕೇಂದ್ರ ತೆರೆಯಲಾಗುತ್ತದೆ. ಬಸ್ಸು, ರೈಲು ನಿಲ್ದಾಣ ಸೇರಿದಂತೆ ಜನಸಂದಣಿ ಸ್ಥಳಗಳಲ್ಲಿ ಟ್ರಾನ್ಸಿಟ್ ಬೂತ್ ತೆರೆಯಲಾಗುತ್ತಿದೆ. ಶಿವರಾತ್ರಿ ಜಾತ್ರೆಗಾಗಿ ಮಲೆಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಜನರು ಬರಲಿದ್ದಾರೆ. ಹೊರ ಜಿಲ್ಲೆ ಹಾಗೂ ನೆರೆಯ ರಾಜ್ಯದ ಭಕ್ತರು ಆಗಮಿಸಲಿದ್ದಾರೆ. ಹೀಗಾಗಿ, ದೇವಸ್ಥಾನದ ಮಾರ್ಗಗಳಲ್ಲಿ ಹೆಚ್ಚುವರಿ ಲಸಿಕಾ ಕೇಂದ್ರ ತೆರೆಯಬೇಕು ಎಂದು ಹೇಳಿದರು.

ಪೋಲಿಯೊ ಹನಿ ಶೇಖರಣೆಗೆ ನಿರಂತರ ವಿದ್ಯುತ್ ಅಗತ್ಯವಿದೆ. ಸೆಸ್ಕ್ ಅಧಿಕಾರಿಗಳು ಕಾರ್ಯಕ್ರಮ ಆರಂಭದ 36 ಗಂಟೆವರೆಗೆ ವಿದ್ಯುತ್ ಕಡಿತಗೊಳಿಸಬಾರದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್. ರಮೇಶ್‌ಬಾಬು ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಮಗು ಪೋಲಿಯೊ ಹನಿಯಿಂದ ವಂಚಿತವಾಗದಂತೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ತಹಶೀಲ್ದಾರ್‌ಗಳಾದ ಮಂಜುನಾಥ್, ಶಿವನಾಗಯ್ಯ, ಎನ್‌ಆರ್‌ಎಚ್‌ಎಂ ನಿರ್ವಹಣಾಧಿಕಾರಿ ಡಾ.ಕೆ.ಎಚ್. ಪ್ರಸಾದ್, ಜಿಲ್ಲಾ ಲಸಿಕಾ ಅಧಿಕಾರಿ ಡಾ.ಗಿರಿಜಾಂಬ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.