ADVERTISEMENT

20 ಕೆರೆಗಳಿಗೆ ನೀರು ತುಂಬಿಸಲು ಶೀಘ್ರ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2011, 10:50 IST
Last Updated 16 ಆಗಸ್ಟ್ 2011, 10:50 IST
20 ಕೆರೆಗಳಿಗೆ ನೀರು ತುಂಬಿಸಲು ಶೀಘ್ರ ಚಾಲನೆ
20 ಕೆರೆಗಳಿಗೆ ನೀರು ತುಂಬಿಸಲು ಶೀಘ್ರ ಚಾಲನೆ   

ಚಾಮರಾಜನಗರ: `ಜಿಲ್ಲೆಯ 20 ಕೆರೆಗಳಿಗೆ ಕಬಿನಿ ನದಿಯಿಂದ ನೀರು ತುಂಬಿಸುವ ಯೋಜನೆಗೆ ಶೀಘ್ರವೇ ಚಾಲನೆ ನೀಡಲಾಗುವುದು~ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೃಷಿಗೆ ಪ್ರೋತ್ಸಾಹ ನೀಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ 16 ಕೆರೆಗಳ ಹೂಳೆತ್ತುವ ಕಾರ್ಯ ಪೂರ್ಣಗೊಂಡಿದೆ. 56 ಕೆರೆಗಳ ಪುನರುಜ್ಜೀವನ ಕಾಮಗಾರಿಗೆ ಒತ್ತು ನೀಡಲಾಗಿದೆ. ಲೋಕಶಿಕ್ಷಣ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 36.86 ಲಕ್ಷ ರೂ ಬಿಡುಗಡೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 227.80 ಲಕ್ಷ ರೂ ಬಿಡುಗಡೆಯಾಗಿದ್ದು, ಕಾರ್ಯಕ್ರಮಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದರು.

ಕುಡಿಯುವ ನೀರು ಪೂರೈಕೆ ಸಂಬಂಧ ಈ ವರ್ಷ 1,184.68 ಲಕ್ಷ ರೂ ಬಿಡುಗಡೆಯಾಗಿದ್ದು, ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿವೆ. ರಸ್ತೆ ಅಭಿವೃದ್ಧಿಗೆ 159.76 ಲಕ್ಷ ರೂ ಬಿಡುಗಡೆಯಾಗಿದ್ದು, ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸುವರ್ಣ ಗ್ರಾಮೋದಯ ಯೋಜನೆಯಡಿ 249.22 ಲಕ್ಷ ರೂ ಬಿಡುಗಡೆ ಯಾಗಿದ್ದು, ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.

ಜಿಲ್ಲೆಯ 1,800 ಗಿರಿಜನ ಕುಟುಂಬಗಳಿಗೆ ಸೌರಶಕ್ತಿ ದೀಪ ಅಳವಡಿಸಲು ಕ್ರಮಕೈಗೊಳ್ಳಲಾಗಿದೆ. ಸುವರ್ಣ ಭೂಮಿ ಯೋಜನೆಯಡಿ ಸಣ್ಣ ಮತ್ತು ಅತಿಸಣ್ಣ ರೈತರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು.

ಪ್ರವಾಸೋದ್ಯಮ ಇಲಾಖೆಗೆ 15 ಕೋಟಿ ರೂ ಅನುದಾನ ಕಾಯ್ದಿರಿ ಸಲಾಗಿದೆ. 13 ಪ್ರವಾಸೋದ್ಯಮ ಯೋಜನೆಗಳಿಗೆ ಹಂತ ಹಂತವಾಗಿ 8.53 ಕೋಟಿ ರೂ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 4.88 ಕೋಟಿ ರೂ ವೆಚ್ಚವಾಗಿದೆ. ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಮಧ್ಯರಂಗ, ಬಿಆರ್‌ಟಿ ಬೆಟ್ಟ, ಮಲೆ ಮಹದೇಶ್ವರ ಬೆಟ್ಟದಲ್ಲಿ ತಲಾ 1 ಕೋಟಿ ರೂ ವೆಚ್ಚದಡಿ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು.

ಪ್ರತಿ ತಿಂಗಳ 3ನೇ ಶನಿವಾರ ನೇರ ಫೋನ್ ಇನ್ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಸಮಸ್ಯೆ ಬಗೆಹರಿಸಲಾಗುತ್ತಿದೆ. ಜನಸ್ಪಂದನ ಸಭೆಗಳ ಮೂಲಕವೂ ನಾಗರಿಕರ ಕುಂದುಕೊರತೆ ಆಲಿಸಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಜಿ.ಪಂ. ಅಧ್ಯಕ್ಷೆ ಕೆ. ರಾಜೇಶ್ವರಿ, ಉಪಾಧ್ಯಕ್ಷ ಎಂ. ಸಿದ್ದರಾಜು, ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯ ಶಿವಣ್ಣ, ನಗರಸಭೆ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಸೆಲ್ವಿಬಾಬು, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ, ತಾ.ಪಂ. ಅಧ್ಯಕ್ಷೆ ಪದ್ಮಾ ಚಂದ್ರು, ಉಪಾಧ್ಯಕ್ಷ ಮಹಾಲಿಂಗಸ್ವಾಮಿ, ಚೂಡಾ ಅಧ್ಯಕ್ಷ ಆರ್. ಸುಂದರ್, ಜಿಲ್ಲಾಧಿಕಾರಿ ಕೆ. ಅಮರನಾರಾಯಣ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಟಿ. ಚಂದ್ರಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಚ್. ಚಂದ್ರಶೇಖರ್, ಜಿ.ಪಂ. ಸಿಇಒ ಕೆ. ಸುಂದರನಾಯ್ಕ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.