ADVERTISEMENT

‘ಡೋಲು’ ಬಾರಿಸುವುದೇ ಕಾಯಕ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 9:14 IST
Last Updated 3 ಜನವರಿ 2018, 9:14 IST

ಚಾಮರಾಜನಗರ: ಜನಪದ ಕಲಾವಿದರು ಉಳಿದರೆ ಮಾತ್ರ ಜನಪದ ಸಂಪತ್ತು ಉಳಿಯಲಿದೆ ಎಂಬ ಮಾತು ಜನಜನಿತ. ಜನಪದ ಕಲಾ ಪ್ರಕಾರದಲ್ಲಿ ಒಂದಾದ ಡೋಲು ಬಾರಿಸುವ ಕಲೆಯನ್ನು ವೃತ್ತಿಯನ್ನಾಗಿಸಿಕೊಂಡು ಬೆಳೆಸುತ್ತಿರುವವರಲ್ಲಿ ನಗರದ ರಾಮಸಮುದ್ರ ಬಡಾವಣೆಯ ಕಲಾವಿದ ಆರ್‌. ನಾಗೇಶ್‌ ಒಬ್ಬರು. ಹುಟ್ಟಿದ ಒಂದು ವರ್ಷದಲ್ಲಿಯೇ ಅವರು ಪೋಲಿಯೊ ಪೀಡಿತರಾದರು. ಕುಟುಂಬದಿಂದ ಬಂದ ಡೋಲು ಬಾರಿಸುವ ಕಲೆಯನ್ನು ಮುಂದುವರಿಸಿ ಕೊಂಡು ಹೋಗುತ್ತಿದ್ದಾರೆ.

ಅವರಿಗೀಗ 43 ವರ್ಷ. ಅವರಲ್ಲಿರುವ ಕಲಾವಿದನಿಗೆ ಮೂವತ್ತು ವಸಂತ ತುಂಬಿದೆ. ಬಾಲ್ಯದಿಂದಲೇ ತಮ್ಮ ತಂದೆಯೊಂದಿಗೆ ಶುಭ ಸಮಾರಂಭಗಳು ಹಾಗೂ ವಾದ್ಯಗೋಷ್ಠಿಗಳಿಗೆ ಹೋಗು ತ್ತಿದ್ದ ಅವರು ಈ ಕಲೆಗೆ ಮನಸೋತರು.

ಜಿಲ್ಲಾ ಕೇಂದ್ರದಲ್ಲಿ ನಡೆಯುವ ದಾರ್ಶನಿಕರ ಜಯಂತಿ, ಚಾಮರಾಜೇಶ್ವರ ಸ್ವಾಮಿ ರಥೋತ್ಸವ, ಗಣಪತಿ ವಿಸರ್ಜನಾ ಮಹೋತ್ಸವ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುವ ಶುಭ ಸಮಾರಂಭಗಳಲ್ಲಿ ಹಾಗೂ ಸಾವಿರಾರು ಮದುವೆಗಳಲ್ಲಿ ಗಟ್ಟಿಮೇಳ ಬಾರಿಸಿದ್ದಾರೆ.

ADVERTISEMENT

ರಾಜ್ಯದ ವಿವಿಧ ಸ್ಥಳಗಳಲ್ಲಿ ನಡೆದ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದಾರೆ. ಅಲ್ಲದೆ ತಮಿಳುನಾಡು, ಕೇರಳ, ಪುತ್ತೂರು ಸೇರಿದಂತೆ ಇತರೆಡೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡೋಲು ಬಾರಿಸಿದ್ದಾರೆ. ಪ್ರಸ್ತುತ ಮೈಸೂರು ಆಕಾಶವಾಣಿಯಲ್ಲೂ ವಿಶೇಷ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

‘ಪ್ರದರ್ಶನದ ವೇಳೆ ನೀಡುವ ಸಂಭಾವನೆಯೇ ನನ್ನ ಜೀವನಕ್ಕೆ ಆಧಾರ. ಇದನ್ನು ಬಿಟ್ಟರೆ ಬೇರೆ ಯಾವುದೇ ವೃತ್ತಿಯನ್ನು ನಾನು ಮಾಡುವುದಿಲ್ಲ. 25ಕ್ಕೂ ಹೆಚ್ಚು ಆಸಕ್ತ ಯುವಕರಿಗೆ ಡೋಲು ಬಾರಿಸುವ ಕಲೆಯನ್ನು ಕಲಿಸುತ್ತಿದ್ದೇನೆ. ಈ ಮೂಲಕ ಕುಟುಂಬದ ಕಲೆಯನ್ನು ಉಳಿಸುತ್ತಿರುವ ತೃಪ್ತಿಯಿದೆ’ ಎಂದು ಕಲಾವಿದ ನಾಗೇಶ್‌ ಹೆಮ್ಮೆಯಿಂದ ನುಡಿದರು.

‘ರಂಗಸ್ವಾಮಿ ಅವರಿಗೆ 4 ಮಕ್ಕಳು. ಈ ಪೈಕಿ ನಾನು ಕೊನೆಯವನು. 3ನೇ ತರಗತಿಯವರೆಗೆ ಓದಿ ಶಿಕ್ಷಣಕ್ಕೆ ವಿದಾಯ ಹೇಳಿದೆ. ಅಂಗವಿಕಲನಾಗಿದ್ದರಿಂದ ನನ್ನ ತಂದೆ ವಿಶೇಷ ಕಾಳಜಿವಹಿಸಿ ಕಲೆಯ ಆರಂಭಿಕ ಪಾಠ ಕಲಿಸಿದರು. ಬಳಿಕ, ಪಾಂಡವಪುರ, ಕೊಯಮತ್ತೂರುಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಕಲಿತು ವಿವಿಧೆಡೆ ಗೋಷ್ಠಿಗಳನ್ನು ನೀಡುತ್ತಿದ್ದೇನೆ’ ಎಂದು ತಿಳಿಸಿದರು.

‘ಅಂಗವೈಕಲ್ಯವು ಜಾತ್ರೆ, ಮೆರವಣಿಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಉತ್ಸಾಹಕ್ಕೆ ಎಂದಿಗೂ ಅಡ್ಡಿಯಾಗಿಲ್ಲ. ಡೋಲು ಹೊತ್ತುಕೊಂಡು ಎಷ್ಟು ದೂರವಾದರೂ ನಡೆದು ಪ್ರದರ್ಶನ ನೀಡುತ್ತೇನೆ. ಆದರೆ, 2 ವರ್ಷದಿಂದ ಮಧುಮೇಹ ಕಾಯಿಲೆ ಇರುವುದರಿಂದ ಮೆರವಣಿಗೆಯಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿಲ್ಲ’ ಎಂದರು.

‘ಪಾಶ್ಚಿಮಾತ್ಯ ಸಂಸ್ಕೃತಿಯ ಹಾವಳಿಯಿಂದ ಜನಪದ ಕಲೆಗಳು ಕಣ್ಮರೆಯಾಗುತ್ತಿವೆ. ಸರ್ಕಾರ ಮೂಲ ಜನಪದ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಮೂಲಕ ಕಲೆಯ ಉಳಿವಿಗೆ ಕ್ರಮವಹಿಸಬೇಕು’ ಎನ್ನುವುದು ಅವರ ಒತ್ತಾಯ.

ಎಸ್‌. ಪ್ರತಾಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.