ADVERTISEMENT

ಜಿಲ್ಲೆಯಲ್ಲಿ ಸಡಗರದಿಂದ ಸಂಕ್ರಾಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 8:57 IST
Last Updated 16 ಜನವರಿ 2018, 8:57 IST
ಎತ್ತಿನ ಮೈ ತೊಳೆಯುತ್ತಿರುವ ರೈತ
ಎತ್ತಿನ ಮೈ ತೊಳೆಯುತ್ತಿರುವ ರೈತ   

ಚಾಮರಾಜನಗರ: ಮಕರ ಸಂಕ್ರಮಣ ಹಬ್ಬವನ್ನು ಸೋಮವಾರ ನಗರದಾದ್ಯಂತ ಜನತೆ ಸಂಭ್ರಮ ಸಡಗರದಿಂದ ಆಚರಿಸಿದರು. ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಕಾಣುತ್ತಿತ್ತು. ಚಾಮರಾಜೇಶ್ವರಸ್ವಾಮಿ, ಆಂಜನೇಯ ಸ್ವಾಮಿ, ಕೊಳದ ಗಣಪತಿ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಕಂರ್ಯಗಳು ನಡೆದವು.

ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸುಗ್ಗಿ ಹಬ್ಬ ಎಂದೇ ಆಚರಿಸಲ್ಪಡುವ ಸಂಕ್ರಾಂತಿ ಹಬ್ಬಕ್ಕೆ ಬಹಳ ಮಹತ್ವವಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಿಶೇಷ ಸಂಪ್ರದಾಯಗಳಿಂದ ಆಚರಿಸಲಾಯಿತು.

ಹಬ್ಬದ ಅಂಗವಾಗಿ ಮನೆಗಳಲ್ಲಿ ಪೊಂಗಲ್‌ ಸೇರಿದಂತೆ ವಿವಿಧ ಬಗೆಯ ಖಾದ್ಯ ತಯಾರಿಸಿದ್ದರು. ಬಣ್ಣದ ಸಕ್ಕರೆ ಅಚ್ಚು, ಎಳ್ಳು, ಬೆಲ್ಲ ಮಿಶ್ರಣ ಮಾಡಿದ ಪಟ್ಟಣಗಳ ಚೀಲವನ್ನು ಕೈಯಲ್ಲಿ ಹಿಡಿದ ಚಿಣ್ಣರು, ಯುವತಿಯರು ತಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಎಳ್ಳು, ಬೆಲ್ಲ ಬೀರುವ ದೃಶ್ಯ ಸಾಮಾನ್ಯವಾಗಿತ್ತು.

ADVERTISEMENT

ಗ್ರಾಮಾಂತರ ಪ್ರದೇಶದಲ್ಲಿ ಸಂಕ್ರಾಂತಿ ಹಬ್ಬದ ಸಡಗರ ಮೇಳೈಸಿತ್ತು. ರೈತರು ಬೆಳಿಗ್ಗೆಯಿಂದಲೇ ಹಸು, ಎತ್ತುಗಳ ಮೈತೊಳೆದು ಅಲಂಕಾರ ಮಾಡಿದ್ದರು. ಸಂಜೆಯಾಗುತ್ತಲೇ ಹಸು, ಎತ್ತು, ಅಲಂಕರಿಸಿದ್ದ ಎತ್ತಿನಗಾಡಿ, ನೇಗಿಲು, ನೊಗಗಳಿಗೆ ಪೂಜೆ ಸಲ್ಲಿಸಲಾಯಿತು. ಕೆಲವು ಗ್ರಾಮಗಳಲ್ಲಿ ಎತ್ತುಗಳನ್ನು ಕಿಚ್ಚು ಹಾಯಿಸಲಾಯಿತು.

‘ಸಂಕ್ರಾಂತಿ ಹಬ್ಬವನ್ನು ಕುಟುಂಬ ಪರಂಪರೆಯಿಂದ ಆಚರಿಸಲಾಗುತ್ತಿದೆ. ಹಬ್ಬದ ದಿನದಂದು ಎತ್ತುಗಳ ಮೈತೊಳೆದು ಅವುಗಳಿಗೆ ವಿಶೇಷ ಅಲಂಕಾರ ಮಾಡುತ್ತೇವೆ. ಬಳಿಕ, ಮನೆಯಲ್ಲಿ ಹಬ್ಬದ ಅಡುಗೆ ಮಾಡಿ ಎತ್ತುಗಳಿಗೆ ಪೂಜೆ ಸಲ್ಲಿಸಿ ಅವುಗಳಿಗೆ ಮೊದಲು ಎಡೆಕೊಡುವುದು ವಾಡಿಕೆ’ ಎಂದು ರಾಮಸಮುದ್ರ ರೈತ ಗುರುಸಿದ್ದಯ್ಯ ತಿಳಿಸಿದರು.

ಯಳಂದೂರಿನಲ್ಲಿ ಸಂಭ್ರಮ

ಯಳಂದೂರು: ತಾಲ್ಲೂಕಿನಲ್ಲಿ ಸೋಮವಾರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಹೆಂಗಸರು ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ, ಸೆಗಣಿಯಿಂದ ಮಾಡಿದ ಗೊಂಬೆ ದೇವರಿಗೆ ಪುಷ್ಪಗಳಿಂದ ಅಲಂಕರಿಸಿ, ಗೋವುಗ ಳನ್ನು ಪೂಜಿಸುವ ಮೂಲಕ ಭಕ್ತಿ ಮೆರೆದರು.

ಚಿಣ್ಣರು ಹಾಗೂ ಹೆಂಗಸರು ಮನೆಮನೆಗಳಿಗೆ ತೆರಳಿ ಎಳ್ಳುಬೆಲ್ಲವನ್ನು ಬೀರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪಟ್ಟಣದ ಭೂಲಕ್ಷ್ಮಿ ವರಾಹಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಸಂಜೆ ನಡೆಯುವ ಸ್ವರ್ಗದ ಬಾಗಿಲು ಪ್ರವೇಶಕ್ಕೆ ಸಿದ್ಧತೆ ನಡೆದಿತ್ತು. ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇಗುಲದ ಬಾಲಾಲಯ, ಕಂಹದಳ್ಳಿ ಗ್ರಾಮದ ಉದ್ಭವ ಮಹದೇಶ್ವರ ಸ್ವಾಮಿ, ಎಳೆಪಿಳ್ಳಾರಿ ವಿನಾಯಕ ದೇಗುಲ ಸೇರಿದಂತೆ ವಿವಿಧೆಡೆ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು

ಕಿಚ್ಚು ಹಾಯಿಸುವುದಕ್ಕೆ ತಿಲಾಂಜಲಿ!

ಜಿಲ್ಲಾಕೇಂದ್ರ ಪ್ರತಿವರ್ಷ ನಡೆಯುತ್ತಿದ್ದ ಕಿಚ್ಚು ಹಾಯಿಸುವ ಸಂಪ್ರದಾಯಕ್ಕೆ ಪ್ರಸ್ತಕ ವರ್ಷ ತಿಲಾಂಜಲಿ ಹಾಡಲಾಗಿದೆ. ಚಾಮರಾಜೇಶ್ವರಸ್ವಾಮಿ ದೇವಸ್ಥಾದ ಬದಿಯಲ್ಲಿ ಒಂಟಿ ಎತ್ತಿನಗಾಡಿಯ ಕಾರ್ಮಿಕರು ಸಂಕ್ರಾಂತಿ ಹಬ್ಬದಂದು ಶಾಮಿಯಾನ ಹಾಕಿಸಿ ಎತ್ತುಗಳ ಮೈತೊಳೆದು ಅಲಂಕರಿಸಿ ಮಧ್ಯಾಹ್ನದ ವೇಳೆಯಲ್ಲಿ ಕಿಚ್ಚು ಹಾಯಿಸುತ್ತಿದ್ದರು.

ಆದರೆ, ಪ್ರಸ್ತಕ ವರ್ಷ ನಗರದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಚಾಮರಾಜೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಯಿಂದ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿದ್ದ ಕಿಚ್ಚು ಹಾಯಿಸುವ ಸಂಪ್ರದಾಯ ನಿಲ್ಲಿಸಲಾಗಿದೆ.

‘ಪ್ರತಿವರ್ಷ ದೇವಸ್ಥಾನದ ಬದಿಯಲ್ಲಿ ಎತ್ತುಗಳನ್ನು ಅಲಂಕರಿಸಿ ಕಿಚ್ಚು ಹಾಯಿಸುತ್ತಿದ್ದೇವು. ಆದರೆ, ಈ ಬಾರಿ ಅಭಿವೃದ್ಧಿ ಕಾಮಗಾರಿಯಿಂದ ದೇವಸ್ಥಾನ ಬದಿಯ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಇದರಿಂದ ಈ ವರ್ಷ ಕಿಚ್ಚು ಹಾಯಿಸುತ್ತಿಲ್ಲ. ಮುಂದಿನ ವರ್ಷ ಸಂಪ್ರದಾಯದಂತೆ ಕಿಚ್ಚು ಹಾಯಿಸುತ್ತೇವೆ’ ಎಂದು ಒಂಟಿ ಎತ್ತಿನ ಗಾಡಿ ಕಾರ್ಮಿಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.