ADVERTISEMENT

ಕೆರೆ ಒತ್ತುವರಿ: 263ಮಂದಿ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 9:33 IST
Last Updated 23 ಜನವರಿ 2018, 9:33 IST
ಕೆರೆ ಒತ್ತುವರಿ: 263ಮಂದಿ ವಿರುದ್ಧ ಪ್ರಕರಣ
ಕೆರೆ ಒತ್ತುವರಿ: 263ಮಂದಿ ವಿರುದ್ಧ ಪ್ರಕರಣ   

ಚಾಮರಾಜನಗರ: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಮಾರು 239 ಕೆರೆಗಳ ಅಳತೆ ನಡೆಸಿರುವ ಜಿಲ್ಲಾಡಳಿತ, ಒತ್ತುವರಿ ಮಾಡಿಕೊಂಡಿರುವ 263 ಮಂದಿ ವಿರುದ್ಧ ಪ್ರಕರಣ ದಾಖಲಿಸಿದೆ.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾವಾರು ಕಾರ್ಯಪಡೆಗಳನ್ನು ರಚಿಸಿ ರಾಜ್ಯದಾದ್ಯಂತ 36,323 ಕೆರೆಗಳನ್ನು ಅಳತೆ ಮಾಡಿ, ವ್ಯಾಪ್ತಿ ಗುರುತಿಸುವಂತೆ ಸರ್ಕಾರ ಸೂಚನೆ ಹೊರಡಿಸಿತ್ತು. 2018ರ ಅಂತ್ಯದೊಳಗೆ ಆಯಾ ಜಿಲ್ಲೆಯ ಕೆರೆಗಳ ಅಳತೆ ಕಾರ್ಯ ಪೂರ್ಣಗೊಳಿಸುವಂತೆ ನಿರ್ದೇಶಿಸಿತ್ತು. ಅದರಂತೆ, ಕ್ಷಿಪ್ರ ಅಳತೆ ಕಾರ್ಯ ನಡೆಸಿರುವ ಜಿಲ್ಲಾಡಳಿತ, ಒತ್ತುವರಿದಾರರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

ರಾಜ್ಯ ಸಾರ್ವಜನಿಕ ಜಮೀನುಗಳ ನಿಗಮದ ನಿರ್ದೇಶನದಂತೆ, ಜಿಲ್ಲೆಯಲ್ಲಿ ಒಟ್ಟು 38 ಭೂಮಾಪನ ವೃತ್ತಗಳನ್ನು ರಚಿಸಲಾಗಿದ್ದು, ಅದರ ವ್ಯಾಪ್ತಿಯಲ್ಲಿನ 619 ಕೆರೆಗಳನ್ನು ಅಳತೆ ಮಾಡಿ ಗಡಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಡಿಸೆಂಬರ್‌ವರೆಗೆ ಪ್ರತಿ ತಿಂಗಳೂ ಅಳತೆ ಮಾಡಬೇಕಾದ ಕೆರೆಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ.

ADVERTISEMENT

ಕಾರ್ಯಪಡೆಯ ಕರ್ತವ್ಯಗಳು: ಎಲ್ಲ ಕೆರೆಗಳನ್ನು ನಿಯಮಾನುಸಾರ ಅಳತೆ ಮಾಡಿ, ಗಡಿ ರೇಖೆಗಳನ್ನು ಗುರುತಿಸಿ ಬಾಂದು ಕಲ್ಲುಗಳನ್ನು ನಿಗದಿ ಮಾಡುವ ಕೆಲಸವನ್ನು ಕಾರ್ಯಪಡೆ ಮಾಡುತ್ತಿದೆ.

ಕೆರೆಯ ಗಡಿ ರೇಖೆಯಲ್ಲಿ ಪ್ರತಿ ಮೂರು ಮೀಟರ್‌ಗೆ ಒಂದು ಜಿಪಿಎಸ್‌ ರೀಡಿಂಗ್ ದಾಖಲಿಸಿ ನಕ್ಷೆ ಸಿದ್ಧಪಡಿಸುವುದು, ಜಿಪಿಎಸ್‌ ರೀಡಿಂಗ್ಅನ್ನು ಕೆಪಿಎಲ್‌ಸಿ ವೆಬ್‌ಸೈಟ್‌ ತಂತ್ರಾಂಶದಲ್ಲಿ ದಾಖಲಿಸುವುದು, ಒತ್ತುವರಿಗಳನ್ನು ತೆರವುಗೊಳಿಸಲು ನಿಯಮಾನುಸಾರ ಕ್ರಮ ಜರುಗಿಸುವುದು, ಒತ್ತುವರಿ ತೆರವುಗೊಳಿಸಿದ ಬಳಿಕ ಗಡಿ ರೇಖೆಯಲ್ಲಿ ಜೆಸಿಬಿ ಬಳಸಿ ಟ್ರೆಂಚ್ ಮಾಡುವುದು ಮತ್ತು ಅಗತ್ಯ ಇರುವಲ್ಲಿ ತಂತಿ ಬೇಲಿ ಹಾಗೂ ನಾಮಫಲಕ ಹಾಕುವುದು ಮುಂತಾದ ಕರ್ತವ್ಯಗಳನ್ನು ಕಾರ್ಯಪಡೆ ನಿರ್ವಹಿಸುತ್ತಿದೆ.

‘ಕೆರೆಗಳ ಅಳತೆ ಮಾಡುವ ಕಾರ್ಯವನ್ನು ಇಲಾಖೆ ಡಿಸೆಂಬರ್‌ನಲ್ಲಿ ಆರಂಭಿಸಿದೆ. ಸರ್ಕಾರದ ಸೂಚನೆಯಂತೆ ಜಿಲ್ಲೆಯಾದ್ಯಂತ ವೇಗವಾಗಿ ಗಡಿ ಗುರುತಿಸುವ ಕೆಲಸ ತ್ವರಿತವಾಗಿ ನಡೆಯುತ್ತಿದೆ’ ಎಂದು ಭೂಮಾಪನ ಇಲಾಖೆ ಉಪನಿರ್ದೇಶಕ ಸೋಮಸುಂದರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಡಿಸೆಂಬರ್‌ನಿಂದ ಜನವರಿಯ ಅವಧಿಯಲ್ಲಿ 38 ಕೆರೆಗಳ ಅಳತೆಗೆ ನಿಗದಿಪಡಿಸಲಾಗಿದ್ದರೂ, 239 ಕೆರೆಗಳ ಅಳತೆ ಮಾಡಲಾಗಿದೆ. ಇನ್ನು ಹಂತ ಹಂತವಾಗಿ ಉಳಿದ ಕೆರೆಗಳ ಅಳತೆ ನಡೆಸಲಾಗುವುದು. ಎಲ್ಲೆಲ್ಲಿ ಒತ್ತುವರಿಯಾಗಿದೆಯೋ ಅದರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಕೆರೆಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಅಳತೆ ಮಾಡುವ ಕಾರ್ಯ ಪ್ರಾರಂಭಿಸಲಾಗಿದೆ. ಡಿಸೆಂಬರ್ ಅಂತ್ಯದವರೆಗೂ ಅಳತೆ ಕೆಲಸ ನಡೆಯಲಿದ್ದು, ಒತ್ತುವರಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುತ್ತದೆ. ಒತ್ತುವರಿ ಮಾಡಿರುವ ವ್ಯಕ್ತಿಗಳ ವಿರುದ್ಧ ಸೆಕ್ಷನ್‌ 192 (ಎ) ಮತ್ತು ಅದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಸೆಕ್ಷನ್ 192 (ಬಿ) ಅಡಿ ಪ್ರಕರಣ ದಾಖಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದರು.

* * 

ಹಂತ ಹಂತವಾಗಿ ಕೆರೆಗಳ ಅಳತೆ ನಡೆಸಲಾಗುವುದು. ಎಲ್ಲೆಲ್ಲಿ ಒತ್ತುವರಿಯಾಗಿದೆಯೋ ಅದರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಲಾಗುತ್ತಿದೆ ಸೋಮಸುಂದರ್‌ ಭೂಮಾಪನ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.