ADVERTISEMENT

‘ಫಲಿತಾಂಶ ಸುಧಾರಣೆಗೆ ಶ್ರಮಿಸಿ’

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 10:30 IST
Last Updated 24 ಜನವರಿ 2018, 10:30 IST

ಗುಂಡ್ಲುಪೇಟೆ: ‘ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸುಧಾರಣೆ ತರಲು ಶಿಕ್ಷಕರು ಶ್ರಮಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಎಂ.ಸಿ ಮೋಹನಕುಮಾರಿ ಸಲಹೆ ನೀಡಿದರು.

ಪಟ್ಟಣದ ಗುರುಭವನದಲ್ಲಿ ಮಂಗಳವಾರ ತಾಲ್ಲೂಕು ಶಿಕ್ಷಣ ಇಲಾಖೆ ಮತ್ತು ವರ್ಲ್ಡ್‌ ವಿಷನ್ ಸಂಸ್ಥೆಯಿಂದ ಎಸ್‍ಎಸ್‍ಎಲ್‌ಸಿ ವಿದ್ಯಾರ್ಥಿಗಳಿಗಾಗಿ ತಯಾರಿಸಿರುವ ಪರೀಕ್ಷಾ ಕೈಪಿಡಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಳೆದ ಶೈಕ್ಷಣಿಕ ವರ್ಷದ ಫಲಿತಾಂಶದಲ್ಲಿ ತಾಲ್ಲೂಕಿನ ಸಾಧನೆ ತೃಪ್ತಿದಾಯಕವಾಗಿರಲಿಲ್ಲ. ಹಾಗಾಗಿ, ಈ ಬಾರಿ ಉತ್ತಮ ಫಲಿತಾಂಶ ತರಲು ಶಿಕ್ಷಕರು ಶ್ರಮಿಸಬೇಕು. ಶಾಲೆಯಲ್ಲಿ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವ ಮೂಲಕ ಮಕ್ಕಳಿಗೆ ಉತೇಜನ ನೀಡಬೇಕು ಎಂದು ತಿಳಿಸಿದರು.

ADVERTISEMENT

ಪರೀಕ್ಷಾ ಕೈಪಿಡಿ ಮಕ್ಕಳಿಗೆ ಹೆಚ್ಚು ಅನುಕೂಲವಾಗಿದೆ. ವಿದ್ಯಾರ್ಥಿಗಳು ನಿರಂತರ ಅಭ್ಯಾಸ ನಡೆಸಬೇಕು. ರಾಜ್ಯಕ್ಕೆ 203ನೇ ಸ್ಥಾನಗಳಿಸಿರುವ ತಾಲ್ಲೂಕನ್ನು 10ನೇ ಸ್ಥಾನಕ್ಕೇರಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ ಮಾತನಾಡಿ, ಸರ್ಕಾರವು ಉತ್ತಮ ಶಿಕ್ಷಣಕ್ಕಾಗಿ ಶಾಲಾ ಮಕ್ಕಳಿಗೆ ಉಚಿತ ಸೈಕಲ್, ಸಮವಸ್ತ್ರ, ಶೂ, ಮಧ್ಯಾಹ್ನದ ಬಿಸಿಯೂಟ ನೀಡುತ್ತಿದ್ದರೂ ಇದರ ಸದುಪಯೋಗ ಪಡಿಸಿಕೊಳ್ಳಲು ಜಿಲ್ಲೆಯ ಶಿಕ್ಷಣ ಇಲಾಖೆ ವಿಫಲವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆಯು 12ನೇ ಸ್ಥಾನದಲ್ಲಿದ್ದು ಹಿಂದುಳಿದಿದೆ. ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ಮುಖಾಂತರ ಪ್ರಥಮ ಸ್ಥಾನಕ್ಕೆ ಬಂದು ನಿಲ್ಲಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಎಚ್.ಎಸ್. ನಂಜಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಕೆ. ಬೊಮ್ಮಯ್ಯ, ಚನ್ನಪ್ಪ, ಕೆ.ಎಸ್. ಮಹೇಶ್, ಅಶ್ವಿನಿ ವಿಶ್ವನಾಥ್, ಕೆ.ಪಿ. ಸದಾಶಿವಮೂರ್ತಿ, ಸಂಸ್ಥೆಯ ಜಯಸೂರ್ಯ, ಸುಪ್ರಿತಾ, ಶಿಕ್ಷಕರ ಸಂಘದ ಮಹೇಶ್, ಕಿರಣ್, ಕ್ಷೇತ್ರ ಶಿಕ್ಷಣಾಧಿಕಾರಿ ಹಾಲತಿ ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.