ADVERTISEMENT

‘ಆರು ತಿಂಗಳಿನಿಂದ ಪಡಿತರ ಸಿಕ್ಕಿಲ್ಲ’

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 7:17 IST
Last Updated 26 ಜನವರಿ 2018, 7:17 IST

ಗುಂಡ್ಲುಪೇಟೆ: ವೃದ್ಧರು ಮತ್ತು ಮಹಿಳೆಯರ ಬೆರಳಚ್ಚು ಮುದ್ರೆ ತೆಗೆದುಕೊಳ್ಳದ ಕಾರಣ ತಾಲ್ಲೂಕಿನ ತೆರಕಣಾಂಬಿ ಗ್ರಾಮದ ಗೌರಿಶಂಕರ ಮತ್ತು ಶ್ರೀ ಸಿದ್ಧಿವಿನಾಯಕ ನ್ಯಾಯಬೆಲೆ ಅಂಗಡಿಗಳಲ್ಲಿ ಅನೇಕರಿಗೆ ಆರು ತಿಂಗಳಿಂದ ಪಡಿತರ ವಿತರಿಸಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಶಾಂತಮಲ್ಲಪ್ಪ ಅವರು ಆರೋಪಿಸಿದ್ದಾರೆ.

ಕೆಲ ವೃದ್ಧರಿಗೆ ಬೆರಳಚ್ಚು ಯಂತ್ರ ಸ್ಪಂದಿಸುತ್ತಿಲ್ಲ. ಅಂತಹ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ರಿಯಾಯಿತಿ ನೀಡಬೇಕು. ತೀರಾ ಕಡು ಬಡವರಾಗಿರುವ ಗ್ರಾಮದ ಮಹದೇವಮ್ಮ ಅವರಿಗೆ ಬೆರಳಚ್ಚು ನೀಡದ ಕಾರಣ 6 ತಿಂಗಳಿಂದ ಪಡಿತರ ನೀಡಿಲ್ಲ. ಅಂತಹ ಬಡಜನರು ಏನು ಮಾಡಬೇಕು. ಇವರಿಗೆ ನ್ಯಾಯ ಕೊಡಿಸಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಎರಡು ನ್ಯಾಯಬೆಲೆ ಅಂಗಡಿಗಳಲ್ಲಿ 1,031 ಫಲಾನುಭವಿಗಳಿದ್ದು, ಇವರು ಪಡಿತರ ಪಡೆದುಕೊಳ್ಳಬೇಕಾದರೆ ಅಂಗಡಿಯವರಿಗೆ ತಲಾ ₹10  ನೀಡಬೇಕು. ಇಲ್ಲದಿದ್ದರೆ ಪಡಿತರ ನೀಡದೆ ಸತಾಯಿಸುತ್ತಾರೆ ಎಂದು ದೂರಿದರು.

ADVERTISEMENT

ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ ನ್ಯಾಯ ಒದಗಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ನಾಮಫಲಕ ಮತ್ತು ಬೆಲೆಯನ್ನು ಅಳವಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರಿಂದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಸಂಘದ ಮಹೇಶ್‌ ನಾಯ್ಕ, ನಾಗರಾಜು, ಮಹದೇವು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.