ADVERTISEMENT

ಕನ್ನಡದ ಹಿನ್ನಡೆಗೆ ಇಚ್ಛಾಶಕ್ತಿ ಕೊರತೆ ಕಾರಣ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 9:36 IST
Last Updated 9 ಫೆಬ್ರುವರಿ 2018, 9:36 IST
ಚಾಮರಾಜನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಗುರುವಾರ ನಡೆದ ಅಖಿಲ ಭಾರತ ಕನ್ನಡ ಸಮ್ಮೇಳನವನ್ನು ಕಾವೇರಿ ನೀರಾವರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಉದ್ಘಾಟಿಸಿದರು
ಚಾಮರಾಜನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಗುರುವಾರ ನಡೆದ ಅಖಿಲ ಭಾರತ ಕನ್ನಡ ಸಮ್ಮೇಳನವನ್ನು ಕಾವೇರಿ ನೀರಾವರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಉದ್ಘಾಟಿಸಿದರು   

ಚಾಮರಾಜನಗರ: ‘ಪರಭಾಷೆಗಳ ಹಾವಳಿಯ ನಡುವೆ ಕನ್ನಡ ಹಿಂದುಳಿಯಲು ರಾಜಕಾರಣಿಗಳಲ್ಲಿನ ಇಚ್ಛಾಶಕ್ತಿ ಮತ್ತು ಜನರಲ್ಲಿನ ಸ್ವಾಭಿಮಾನದ ಕೊರತೆ ಕಾರಣ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ ಹೇಳಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಗುರುವಾರ ಅಖಿಲ ಕರ್ನಾಟಕ ಮಹಾಸಭಾದಿಂದ ಆಯೋಜಿಸಲಾದ ಮೂರು ದಿನಗಳ ಪ್ರಥಮ ಅಖಿಲ ಭಾರತ ಕನ್ನಡ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಗಳಲ್ಲಿ ಕನ್ನಡ ಬೋಧನೆ ಕಡ್ಡಾಯ ಮಾಡಲು ನಮಗೆ ಇಂದಿಗೂ ಸಾಧ್ಯವಾಗಿಲ್ಲ. ತಮಿಳುನಾಡು ಸರ್ಕಾರ ಪ್ರತಿ ಶಾಲೆಯಲ್ಲಿಯೂ ಪ್ರಥಮ ಭಾಷೆಯನ್ನಾಗಿ ತಮಿಳು ಕಲಿಸುವಂತೆ 10 ವರ್ಷಗಳ ಹಿಂದೆಯೇ ಆದೇಶ ಹೊರಡಿಸಿತ್ತು. ಅಲ್ಲಿ ಭಾಷೆ, ನೆಲದ ವಿಚಾರದಲ್ಲಿ ರಾಜಕಾರಣಿಗಳು ಪಕ್ಷಾತೀತವಾಗಿ ಜತೆಗೂಡುತ್ತಾರೆ. ಇಲ್ಲದಿದ್ದರೆ ಅವರಗೆ ರಾಜಕೀಯವಾಗಿ ಉಳಿಗಾಲವೇ ಇರುವುದಿಲ್ಲ. ಆದರೆ, ಕನ್ನಡಿಗರಲ್ಲಿನ ಇಚ್ಛಾಶಕ್ತಿ ದುರ್ಬಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಎಲ್ಲ ಶಾಲೆಗಳಲ್ಲಿಯೂ ಕನ್ನಡವನ್ನು ಪ್ರಥಮ ಅಥವಾ ಎರಡನೆಯ ಭಾಷೆಯನ್ನಾಗಿ ಕಲಿಸಬೇಕು ಎಂಬ ಆದೇಶವನ್ನು ಐಎಎಸ್‌ ಅಧಿಕಾರಿಯೊಬ್ಬರು 2015ರಿಂದಲೂ ತಮ್ಮ ಬಳಿಯೇ ಇರಿಸಿಕೊಂಡಿದ್ದರು. ಕೊನೆಗೂ ಅದು ಈ ಸಾಲಿನಿಂದ ಜಾರಿಯಾಗಲಿದೆ ಎಂದು ಹೇಳಿದರು.

ತಮಿಳುನಾಡಿನಲ್ಲಿ ಇನ್ನೊಂದು ಭಾಷೆಗೆ ಅವಕಾಶವಿಲ್ಲದಂತೆ ಎಲ್ಲ ವ್ಯವಹಾರಗಳು ನಡೆಯುತ್ತಿವೆ. ನಾವು ಈಗಾಗಲೇ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡಿದ್ದೇವೆ. ಭಾಷಾವಾರು ಪ್ರಾಂತ್ಯ ರಚನೆಯ ಸಂವಿಧಾನದ ಆಶಯವೇ ಇದರಿಂದ ಈಡೇರುತ್ತಿಲ್ಲ. ಸ್ಥಳೀಯತೆ ಮತ್ತು ಬಹುತ್ವವನ್ನು ರಕ್ಷಿಸುವುದೇ ಭಾಷಾವಾರು ಪ್ರಾಂತ್ಯ ರಚನೆಯ ಉದ್ದೇಶ. ಆದರೆ, ಏಕದೇಶ, ಏಕ ಭಾಷೆ, ಏಕ ಆಡಳಿತ ಎಂಬ ನೀತಿಯನ್ನು ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಸಮ್ಮೇಳನ ಉದ್ಘಾಟಿಸಿದ ಕಾವೇರಿ ನೀರಾವರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಅಧಿಕಾರದ ದುರುಪಯೋಗ ಆಗುತ್ತಿದೆ. ರಾಜಕಾರಣಿಗಳಿಗೆ ಕಿತ್ತಾಟವೇ ಮುಖ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಿಮ್ಮಂತಹ ಆಳುವ ಪ್ರಭುಗಳು ದೇಶದೆಲ್ಲೆಡೆ ಇದ್ದರೆ ಸ್ವಾತಂತ್ರ್ಯಕ್ಕಾಗಿ ನಾನು ಹೋರಾಡುವ ಪ್ರಮೇಯವೇ ಬರುತ್ತಿರಲಿಲ್ಲ’ ಎಂದು ಮಹಾತ್ಮ ಗಾಂಧಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಹೇಳಿದ ಮಾತುಗಳನ್ನು ಸ್ಮರಿಸಿಕೊಂಡ ಮಾದೇಗೌಡ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಸ್ಥಿತಿ ನೋಡಿದಾಗ ರಾಜರ ಆಡಳಿತವೇ ಒಳ್ಳೆಯದಿತ್ತು ಎಂದೆನಿಸುತ್ತದೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ಈಗಿರುವ ನಾಡಧ್ವಜವನ್ನು ಬದಲಿಸಿ, ಮೂರು ಬಣ್ಣದ ಧ್ವಜವನ್ನು ರೂಪಿಸಲು ಸಿದ್ಧತೆ ನಡೆದಿದೆ. ಇದು ಜಾರಿಯಾದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು. ಈಗಿರುವ ಧ್ವಜವನ್ನೇ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು, ದೂರದರ್ಶನದ ಮಾಜಿ ನಿರ್ದೇಶಕ ಡಾ. ಮಹೇಶ್‌ ಜೋಷಿ, ಡಾ. ಟಿ.ಸಿ. ಪೂರ್ಣಿಮಾ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಮಲೆಯೂರು ಗುರುಸ್ವಾಮಿ, ಬನ್ನೂರು ಕೆ. ರಾಜು, ಎ.ಎಂ. ನಾಗಮಲ್ಲಪ್ಪ, ಸೋಮಶೇಖರ ಬಿಸಲ್ವಾಡಿ, ಕನ್ನಡ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಿರೀಶ್‌ಗೌಡ, ಮಹಾಸಭಾದ ಗೌರವಾಧ್ಯಕ್ಷ ಶಾ. ಮುರಳಿ ಇತರರು ಇದ್ದರು.

ಕನ್ನಡ ಚಳವಳಿ ಮತ್ತು ಮಾಧ್ಯಮ, ಮಹಾಜನ್‌ ವರದಿ ಮತ್ತು ಪರಿಹಾರಗಳು ಕುರಿತ ವಿಚಾರಗೋಷ್ಠಿಗಳು ನಡೆದವು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರಧ್ವಜ ಮತ್ತು ನಾಡಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ಜಿಲ್ಲಾಡಳಿತ ಭವನದ ಪ್ರವೇಶದ್ವಾರದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.