ಕೊಳ್ಳೇಗಾಲ: ತಾಲ್ಲೂಕಿನ ಹರಳೆ ಗ್ರಾಮ ಪಂಚಾಯಿತಿಯಲ್ಲಿ 2011-12ನೇ ಸಾಲಿಗೆ 62 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆಗೆ ಬುಧವಾರ ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದ ಗ್ರಾಮ ಸಭೆ ಅನುಮೋದನೆ ನೀಡಲಾಯಿತು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸಲು ಪಂಚಾಯಿತಿ ಆವರಣದಲ್ಲಿ ಕರೆಯಲಾಗಿದ್ದ ಗ್ರಾಮಸಭೆ ಅಧ್ಯಕ್ಷತೆ ಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್. ತಾಯಮ್ಮ ವಹಿಸಿದ್ದರು.
ಪಂಚಾಯಿತಿ ವ್ಯಾಪ್ತಿಯ ಹಳೇ ಹಂಪಾಪುರ, ಹೊಸಹಂಪಾಪುರ, ಹರಳೆ, ಹಳೇ ಅಣಗಳ್ಳಿ, ದಾಸನಪುರಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಲು ನಿರ್ಣಯಿಸಲಾಯಿತು. ಪ್ರಮುಖವಾಗಿ ಹಂಪಾಪುರ ಕೆರೆ ಅಭಿವೃದ್ಧಿ, ಹೊಸಹಂಪಾಪುರ ಹಾಗೂ ಹರಳೆ ಗ್ರಾಮಗಳಲ್ಲಿ ಶಾಲಾ ಸುತ್ತುಗೋಡೆ ನಿರ್ಮಾಣ ಹಾಗೂ ಎಲ್ಲಾ ಗ್ರಾಮಗಳಲ್ಲೂ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳನ್ನು 62 ಲಕ್ಷ ರೂ. ಅಂದಾಜಿನಲ್ಲಿ ಕೈಗೊಳ್ಳಲು ಕ್ರಿಯೋಯೋಜನೆಗೆ ಸಭೆ ಒಪ್ಪಿಗೆ ನೀಡಿತು.
ನೋಡೆಲ್ ಅಧಿಕಾರಿ ಡಾ. ಪ್ರಕಾಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್. ಸುರೇಶ್, ಬಿಲ್ ಕಲೆಕ್ಟರ್ ನಂಜಪ್ಪ, ಸದಸ್ಯ ಸಿದ್ದರಾಜು, ಶಾಂತ ರಾಜು, ದೇವಮ್ಮ, ಕೃಷ್ಣಯ್ಯ, ಮಹಾದೇವಸ್ವಾಮಿ ಮತ್ತಿತರರು ಇದ್ದರು.
ಮಾ.13ರಂದು ಮಾಜಿ ಸೈನಿಕರ ರ್ಯಾಲಿ
ಮಾಜಿ ಸೈನಿಕರು,ಆವಲಂಬಿತರ ಕಲ್ಯಾಣದ ಬಗ್ಗೆ ಮಾ.13ರಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕೊಳ್ಳೇಗಾಲ ಪಟ್ಟಣದಲ್ಲಿ ಮಾಜಿ ಸೈನಿಕರ ರ್ಯಾಲಿ ಏರ್ಪಡಿಸಿದೆ.
ಪಟ್ಟಣದ ಸಿಡಿಎಸ್ ಸಮುದಾಯ ಭವನದಲ್ಲಿ ಈ ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು, ಜಿಲ್ಲಾಧಿಕಾರಿ ಕೆ. ಅಮರನಾರಾಯಣ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸೈನಿಕರು, ಆವಲಂಬಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ರ್ಯಾಲಿಯನ್ನು ಯಶಸ್ವಿಗೊಳಿಸಬೇಕೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಆರ್.ಎಸ್. ವಿಶ್ವನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೆಡಿಎಸ್ ಕಚೇರಿ ಉದ್ಘಾಟನೆ
ಜೆಡಿಎಸ್ ಪಕ್ಷದ ವತಿಯಿಂದ ಮಾ.13ರಂದು ಪಕ್ಷದ ಕಚೇರಿ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ. ಪಟ್ಟಣದ ವಾಸವಿ ಮಹಲ್ ರಸ್ತೆ, ತುಳಸಿ ನರ್ಸಿಂಹೋಂ ಎದುರು ಜೆಡಿಎಸ್ ಪಕ್ಷದ ಕಚೇರಿ ಉದ್ಘಾಟನೆ ಬೆಳಿಗ್ಗೆ 11.30 ಗಂಟೆಗೆ ನಡೆಯಲಿದೆ. ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಂ. ಮಹಾದೇವು ಉದ್ಘಾಟನೆ ನೆರವೇರಿಸಲಿದ್ದಾರೆ. ಜಿಲ್ಲಾಧ್ಯಕ್ಷ ಪಂಚಾಕ್ಷರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಎಂ. ಶಿವಣ್ಣ, ಮಾಜಿ ಶಾಸಕ ಎಸ್. ಬಾಲರಾಜ್, ಪೊನ್ನಾಚಿ ಮಹಾದೇವಸ್ವಾಮಿ, ಶಿವಮೂರ್ತಿ, ವಿಷ್ಣುಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.