ADVERTISEMENT

‘ಜೀವನದಿ ಕಾವೇರಿ’ ಸಾಕ್ಷ್ಯಚಿತ್ರ | ಕೌತುಕಗಳ ಹೂರಣ; ಅದ್ಭುತ ದೃಶ್ಯ ಅನಾವರಣ

‘ಜೀವನದಿ ಕಾವೇರಿ’ ಸಾಕ್ಷ್ಯಚಿತ್ರ ಬಿಡುಗಡೆ ಮೇ 5ರಂದು; ಮಲೆ ಮಹದೇಶ್ವರ, ಕಾವೇರಿ ವನ್ಯಧಾಮಗಳ ವಿಭಿನ್ನ ಮುಖ ಪರಿಚಯ

ಬಾಲಚಂದ್ರ ಎಚ್.
Published 4 ಮೇ 2025, 5:59 IST
Last Updated 4 ಮೇ 2025, 5:59 IST
‘ಜೀವನದಿ ಕಾವೇರಿ’ ಸಾಕ್ಷ್ಯಚಿತ್ರದ ಪೋಸ್ಟರ್
‘ಜೀವನದಿ ಕಾವೇರಿ’ ಸಾಕ್ಷ್ಯಚಿತ್ರದ ಪೋಸ್ಟರ್   

ಚಾಮರಾಜನಗರ: ಅಸಂಖ್ಯಾತ ವನ್ಯಜೀವಿಗಳನ್ನು ಪೋಷಿಸುತ್ತಿರುವ, ಅಪೂರ್ವ, ವಿಸ್ಮಯಕಾರಿ ಜೀವವೈವಿಧ್ಯಗಳನ್ನು ಒಳಗೊಂಡಿರುವ ಜಿಲ್ಲೆಯ ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿದಾಮಗಳ ಕುರಿತು ‘ಜೀವನದಿ ಕಾವೇರಿ’ ಎಂಬ ಸಾಕ್ಷ್ಯಚಿತ್ರ ನಿರ್ಮಾಣವಾಗಿದೆ.

ಸರವಣ ಕುಮಾರ್ ನಿರ್ದೇಶಿಸಿರುವ 58 ನಿಮಿಷಗಳ ಸಾಕ್ಷ್ಯಚಿತ್ರಕ್ಕೆ ಖ್ಯಾತ ವನ್ಯಜೀವಿ ತಜ್ಞ ಡಾ.ಸಂಜಯ್‌ ಗುಬ್ಬಿ ಕಾರ್ಯನಿರ್ವಾಹಕ ನಿರ್ಮಾಪಕ ಹಾಗೂ ವೈಜ್ಞಾನಿಕ ಸಲಹೆಗಾರರಾಗಿ ದುಡಿದಿದ್ದಾರೆ. ಅರುಣ್ ಸುರಾಧ ಸಂಗೀತ ನೀಡಿದ್ದು, ಬೆನ್ ಸರತ್ ಸಂಕಲನ, ಶ್ರೀಪದ್ ಶ್ರೀಧರ್, ಅರವಿಂದ್ ಮೋಹನ್‌ರಾಜ್ ಛಾಯಾಗ್ರಹಣ ಇದೆ. ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಿರ್ಮಿಸಿರುವ ಸಾಕ್ಷ್ಯಚಿತ್ರ ಮೇ 5ರಂದು ಯೂಟ್ಯೂಬ್‌ನಲ್ಲಿ ಸಾಕ್ಷ್ಯಚಿತ್ರ ಬಿಡುಗಡೆಯಾಗಲಿದೆ.

ಏನಿದೆ ಸಾಕ್ಷ್ಯಚಿತ್ರದಲ್ಲಿ

ADVERTISEMENT

ಹೆಚ್ಚು ಪ್ರಚಲಿತದಲ್ಲಿಲ್ಲದ ಪ್ರವಾಸಿತಾಣವಾಗಿ ತೆರೆದುಕೊಳ್ಳದ ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ಧಾಮಗಳ ಸುಂದರ ಭೂಸದೃಶ್ಯ, ಋತುಮಾನಗಳ ಬದಲಾವಣೆಯ ಕೌತುಕವನ್ನು ಕಟ್ಟಿಕೊಡಲಾಗಿದೆ. ಜೀವನದಿ ಕಾವೇರಿಯು ಎರಡೂ ವನ್ಯಜೀವಿದಾಮಗಳನ್ನು ಹೇಗೆ ಪೊರೆಯುತ್ತಾ ಬಂದಿದೆ, ಅರಣ್ಯದೊಳಗಿರುವ ಸಣ್ಣ ಜೀವಿಗಳಿಂದ ದೊಡ್ಡ ಜೀವಿಗಳವರೆಗೂ ಉಳಿವಿಗಾಗಿ ನಡೆಸುವ ಹೋರಾಟದ ಸನ್ನಿವೇಶಗಳನ್ನು ಚಿತ್ರಿಸಲಾಗಿದೆ.

ಹಿಂದೆಂದೂ ದಾಖಲಾಗದ ಸನ್ನಿವೇಶಗಳು, ನಿಸರ್ಗದ ನಿಗೂಢ ವಿಸ್ಮಯಗಳು, ವನ್ಯಜೀವಿಗಳ ನಡುವಿನ ಸಂಕೀರ್ಣ ಸಂವಹನ ಪ್ರಕ್ರಿಯೆ ಚಿತ್ರದ ಪ್ರಧಾನ ಆಕರ್ಷಣೆಯಾಗಿದೆ. ಎರಡೂ ವನ್ಯಜೀವಿಧಾಮಗಳಲ್ಲಿ ಪ್ರಾಣಿಗಳ ಸಾಂಧ್ರತೆ ತೀರಾ ಕಡಿಮೆ ಇರುವುದರಿಂದ ಸಾಕ್ಷ್ಯಚಿತ್ರ ಚಿತ್ರೀಕರಣಕ್ಕೆ ನಾಲ್ಕು ವರ್ಷಗಳು ಹಿಡಿದಿದ್ದು, ಪ್ರತಿ ಋತುಮಾನದಲ್ಲೂ ಬದಲಾಗುವ ಕಾಡಿನ ಚಿತ್ರಣವನ್ನು ತೆರೆಯ ಮೇಲೆ ಅತ್ಯಾಕರ್ಷಕವಾಗಿ ತರಲಾಗಿದೆ ಎನ್ನುತ್ತಾರೆ ಕಾರ್ಯನಿರ್ವಾಹಕ ನಿರ್ಮಾಪಕ ಡಾ.ಸಂಜಯ್‌ ಗುಬ್ಬಿ.

ಮಳೆಯಾಶ್ರಿತ ಅರಣ್ಯಭಾಗವಾಗಿರುವ ಎಂ.ಎಂ.ಹಿಲ್ಸ್ ಹಾಗೂ ಕಾವೇರಿ ವನ್ಯಜೀವಿದಾಮಗಳಲ್ಲಿ ಹೆಚ್ಚು ನೀರಿನ ಸೆಲೆಗಳಿಲ್ಲ. ಆದರೂ ಸಾವಿರಾರು ವರ್ಷಗಳಿಂದ ಇಲ್ಲಿ ವನ್ಯಜೀವಿಗಳು ಪ್ರಕೃತಿಗೆ ಹೊಂದಿಕೊಂಡು ಬದುಕುಳಿದಿವೆ. ಪ್ರತಿವರ್ಷ ಋತುಮಾನಗಳು ಒಡ್ಡುವ ಸವಾಲು, ಆಹಾರದ ಕೊರತೆಯನ್ನೂ ಎದುರಿಸಿ ಜೀವಿಸುತ್ತಿವೆ.

ಕಾಡಿನ ಮರ, ಮಣ್ಣು, ನೀರಿನ ಸೆಲೆಗಳ ಜೊತೆಗೆ ವನ್ಯಜೀವಿಗಳು ಹೊಂದಿರುವ ಅವಿನಾಭಾವ ಸಂಬಂಧ, ಅರಣ್ಯದೊಳಗೆ ಮಾನವನ ಹಸ್ತಕ್ಷೇಪ, ಪ್ರಾಣಿ–ಮಾನವ ಸಂಘರ್ಷ ತಡೆಯ ವಿಚಾರವನ್ನು ಸೂಕ್ಷ್ಮವಾಗಿ ತೋರಿಸಲಾಗಿದ್ದು ಕಾಡು ಹಾಗೂ ವನ್ಯಜೀವಿಗಳ ಬಗ್ಗೆ ಇರುವ ತಪ್ಪುಗ್ರಹಿಕೆಯನ್ನು ದೂರಮಾಡುವ ಪ್ರಯತ್ನ ಮಾಡಲಾಗಿದೆ ಎನ್ನುತ್ತಾರೆ ಸಂಜಯ್ ಗುಬ್ಬಿ.

ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಯ ಪ್ರಜ್ಞೆ ಬೆಳೆಸುವ ಉದ್ದೇಶದಿಂದ ಸಾಕ್ಷ್ಯಚಿತ್ರವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡದೆ ಪ್ರತಿಯೊಬ್ಬರೂ ಉಚಿತವಾಗಿ ವೀಕ್ಷಸಲು ಅನುಕೂಲವಾಗುವಂತೆ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಪ್ರತಿಯೊಬ್ಬರನ್ನು ತಲುಪುವ ಉದ್ದೇಶದಿಂದ ಇಂಗ್ಲೀಷ್ ಭಾಷೆಯಲ್ಲೂ ನಿರ್ಮಿಸಲಾಗಿದೆ.

ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿಧಾಮಗಳ ಆಸುಪಾಸಿನ ಶಾಲಾ ಕಾಲೇಜುಗಳಲ್ಲಿ, ಗ್ರಾಮಗಳಲ್ಲಿ ಚಿತ್ರವನ್ನು ಪ್ರದರ್ಶಿಲಾಗುವುದು. ಮೇ 5ರಂದು ಸಂಜೆ 5.30ಕ್ಕೆ ಚಾರಾಜನಗರದ ಸಿಂಹ ಚಿತ್ರಮಂದಿರದಲ್ಲಿ ಸಾಕ್ಷ್ಯಚಿತ್ರವನ್ನು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಬಿಡುಗಡೆ ಮಾಡಲಿದ್ದಾರೆ ಎಂದು ಸಂಜಯ್ ಗುಬ್ಬಿ ಮಾಹಿತಿ ನೀಡಿದರು. 

ಯೂಟ್ಯೂಬ್‌ನಲ್ಲಿ ಟ್ರೇಲರ್ ಬಿಡುಗಡೆ ಪರಿಸರಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸಾಕ್ಷ್ಯಚಿತ್ರ ನಿರ್ಮಾಣ

ಸಾಮಾನ್ಯವಾಗಿ ವನ್ಯಜೀವಿಗಳ ಸಾಕ್ಷ್ಯಚಿತ್ರದಲ್ಲಿ ಹುಲಿ ಚಿರತೆಗಳು ಪ್ರಧಾನವಾಗಿರುತ್ತವೆ. ಆದರೆ ಜೀವನದಿ ಕಾವೇರಿ ಸಾಕ್ಷ್ಯಚಿತ್ರದಲ್ಲಿ ಹುಲಿ ಚಿರತೆ ಹೊರತಾದ ಪ್ರಾಣಿಗಳನ್ನು ವಿಭಿನ್ನವಾಗಿ ತೋರಿಸಲಾಗಿದ್ದು ವನ್ಯಜೀವಿಗಳಿಗೂ ಕಾಡಿಗೂ ಇರುವ ಸೂಕ್ಷ್ಮ್ಯನಂಟನ್ನು ತಿಳಿಸಲಾಗಿದೆ.
–ಸಂಜಯ್‌ ಗುಬ್ಬಿ ಕಾರ್ಯ ನಿರ್ವಾಹಕ ನಿರ್ಮಾಪಕ

‘ಕುತೂಹಲಕಾರಿ ವಿದ್ಯಮಾನಗಳ ಹೂರಣ’ ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ ಬಿಳಿಗಿರಿರಂಗನಬೆಟ್ಟ ಮಲೆ ಮಹದೇಶ್ವರ ಉಮ್ಮ‌ತ್ತೂರು ಕಾವೇರಿ ವನ್ಯದಾಮಗಳು ಎರಡು ಹುಲಿ ರಕ್ಷಿತಾರಣ್ಯಗಳಿದ್ದು ಅಪರೂಪದ ಜೀವವೈವಿಧ್ಯಗಳ ಆವಾಸಸ್ಥಾನವಾಗಿದೆ. ಬಂಡೀಪುರ ಹಾಗೂ ಬಿಳಿಗಿರಿ ರಂಗನಬೆಟ್ಟ ಅರಣ್ಯ ಹೆಚ್ಚು ಜನರಿಗೆ ಪರಿಚಿತವಾಗಿದ್ದು ಎಂಎಂ ಹಿಲ್ಸ್ ಹಾಗೂ ಕಾವೇರಿ ವನ್ಯಧಾಮಗಳು ಹೆಚ್ಚು ಪ್ರಚಲಿತವಾಗಿಲ್ಲ. ಹಾಗಾಗಿ ಉಭಯ ವನ್ಯಜೀವಿದಾಮಗಳ ಕುತೂಹಲಕಾರಿ ವಿದ್ಯಮಾನಗಳನ್ನು ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ. –ಸಂಜಯ್‌ ಗುಬ್ಬಿ ಸಾಕ್ಷ್ಯಚಿತ್ರದ ಕಾರ್ಯ ನಿರ್ವಾಹಕ ನಿರ್ಮಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.