ADVERTISEMENT

ದಾಸನಪುರ ಗ್ರಾಮದ ಕಾವೇರಿ ನದಿಗೆ ಉಪವಿಭಾಗಾಧಿಕಾರಿ ಮಹೇಶ್ ಭೇಟಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 15:22 IST
Last Updated 26 ಜೂನ್ 2025, 15:22 IST
ಕೊಳ್ಳೇಗಾಲ ತಾಲ್ಲೂಕಿನ ದಾಸನಪುರ ಗ್ರಾಮದ ಕಾವೇರಿ ನದಿ ತೀರಕ್ಕೆ ಗುರುವಾರ ಉಪವಿಭಾಗಾಧಿಕಾರಿ ಮಹೇಶ್ ಭೇಟಿ ನೀಡಿ ವೀಕ್ಷಿಸಿದರು 
ಕೊಳ್ಳೇಗಾಲ ತಾಲ್ಲೂಕಿನ ದಾಸನಪುರ ಗ್ರಾಮದ ಕಾವೇರಿ ನದಿ ತೀರಕ್ಕೆ ಗುರುವಾರ ಉಪವಿಭಾಗಾಧಿಕಾರಿ ಮಹೇಶ್ ಭೇಟಿ ನೀಡಿ ವೀಕ್ಷಿಸಿದರು    

ಕೊಳ್ಳೇಗಾಲ: ಕೊಡಗು ಹಾಗೂ ಕೇರಳದ ವಯನಾಡ್‌ನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಜಲಾಶಯಗಳಿಂದ ನದಿಗೆ ಯಾವಾಗ ಬೇಕಾದರೂ ನೀರು ಬಿಡಬಹುದು. ಹಾಗಾಗಿ ನದಿ ತೀರಕ್ಕೆ ಯಾರೂ ಹೋಗಬಾರದು ಎಂದು ಉಪವಿಭಾಗಾಧಿಕಾರಿ ಮಹೇಶ್ ಸೂಚನೆ ನೀಡಿದರು. 

ತಾಲ್ಲೂಕಿನ ದಾಸನಪುರ ಗ್ರಾಮದ ಕಾವೇರಿ ನದಿ ತೀರಕ್ಕೆ ಗುರುವಾರ ಭೇಟಿ ನೀಡಿ ವೀಕ್ಷಣೆ ಮಾಡಿದ ಅವರು ಗ್ರಾಮಸ್ಥರ ಜೊತೆ ಚರ್ಚಿಸಿ, ಯಾರು ನದಿಗೆ ಇಳಿಯದಂತೆ ಸೂಚನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬಿನಿ ಹಾಗೂ ಕಾವೇರಿ ಜಲಾಶಯಗಳಿಂದ 50 ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ ನೀರನ್ನು ನದಿಗೆ ಬಿಟ್ಟಿರುವ ಹಿನ್ನೆಲೆ ದಾಸನಪುರ ಗ್ರಾಮದಲ್ಲಿ ಕಾವೇರಿ ನದಿ ವೀಕ್ಷಣೆ ಮಾಡಲಾಯಿತು. ಈಗಾಗಲೇ ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯ ಸಿದ್ಧತೆ ಹಾಗೂ ಏನೆಲ್ಲ ಮುಂಜಾಗ್ರತ ಕ್ರಮ ಕೈಗೊಳ್ಳಬೇಕೆಂದು ಸೂಚನೆಗಳನ್ನು ನೀಡಲಾಗಿದೆ. ಅದರಂತೆ ತಾಲ್ಲೂಕಿನ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದರು.

ನಗರದ ವಸತಿ ಪ್ರದೇಶಗಳಲ್ಲಿ ಪ್ರವಾಹ ಹೆಚ್ಚಾದರೆ ಕಾಳಜಿ ಕೇಂದ್ರ ತೆರೆಯಲು ಸಹ ಸೂಚಿಸಲಾಗಿದೆ. ಈಗಾಗಲೇ ನದಿ ತೀರದ ಎಲ್ಲಾ ಗ್ರಾಮಗಳಿಗೂ ಗ್ರಾಮ ಪಂಚಾಯಿತಿಯವರು ಟಾಂ ಟಾಂ ಮಾಡಿ ನದಿ ತೀರಕ್ಕೆ ಯಾರು ಇಳಿಯಬಾರದೆಂದು ಎಚ್ಚರಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ADVERTISEMENT

ಈಗಾಗಲೇ ಪೊಲೀಸ್ ಸಿಬ್ಬಂದಿಯನ್ನು ಸಹ ನದಿ ತೀರಕ್ಕೆ ನಿಯೋಜಿಸಲಾಗಿದೆ. ತಾಲ್ಲೂಕಿನ ನದಿ ತೀರದ 9 ಗ್ರಾಮಗಳಾದ ಮುಳ್ಳೂರು, ಹಳೆ ಹಂಪಾಪುರ, ದಾಸನಪುರ, ಹಳೆ ಹಣಗಳ್ಳಿ, ಹರಳೆ, ಸರಗೂರು, ಧನಗೆರೆ, ಯಡಕುರಿಯ, ಸತ್ತೇಗಾಲ ಗ್ರಾಮಗಳು ಪ್ರತಿ ವರ್ಷ ಪ್ರವಾಹಕ್ಕೆ ಸಿಲುಕುತ್ತವೆ. ಹಾಗಾಗಿ ಮುಂಜಾಗ್ರತೆ ಕ್ರಮಗಳನ್ನು ವಹಿಸಿದ್ದೇವೆ. ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲೇ ಇರಬೇಕೆಂದು ಸೂಚನೆಗಳನ್ನು ನೀಡಲಾಗಿದೆ ಎಂದರು. 

ಗ್ರಾಮ ಲೆಕ್ಕಿಗ ರಾಕೇಶ್, ಪೊಲೀಸ್ ಸಿಬ್ಬಂದಿ ಇದ್ದರು.

ಕೊಳ್ಳೇಗಾಲ ತಾಲ್ಲೂಕಿನ ದಾಸನಪುರ ಗ್ರಾಮದ ಕಾವೇರಿ ನದಿ ತೀರಕ್ಕೆ ಗುರುವಾರ ಉಪವಿಭಾಗಾಧಿಕಾರಿ ಮಹೇಶ್ ಭೇಟಿ ನೀಡಿ ವೀಕ್ಷಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.