ಚಾಮರಾಜನಗರ: ಪಹಣಿಯಲ್ಲಿ (ಆರ್‌ಟಿಸಿ) ಹೆಸರು ಸೇರಿಸುವುದಕ್ಕಾಗಿ ₹30 ಸಾವಿರ ಬೇಡಿಕೆ ಇಟ್ಟಿದ್ದ ತಾಲ್ಲೂಕು ಪಂಚಾಯಿತಿ ಕಚೇರಿಯ ಆರ್‌ಆರ್‌ಟಿ ಶಾಖೆಯ ಶಿರಸ್ತೇದಾರ್ ಮಂಜುನಾಥ್ ಎಂಬುವವರು ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮಂಜುನಾಥ್ ಅವರು ವ್ಯಕ್ತಿಯೊಬ್ಬರಿಂದ ₹10 ಸಾವಿರ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ವಿಚಾರಣೆಯ ಬಳಿಕ ಅವರನ್ನು ಬಂಧಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ನ್ಯಾಮತಿ ತಾಲ್ಲೂಕಿನವರಾದ ಮಂಜುನಾಥ್ ಒಂಬತ್ತು ತಿಂಗಳ ಹಿಂದೆಯಷ್ಟೇ ಇಲ್ಲಿಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
‘ತಾಲ್ಲೂಕಿನ ಬದನಗುಪ್ಪೆ ಗ್ರಾಮದ ನಾಗನಾಯಕ (55) ಎಂಬುವರಿಗೆ 4 ಎಕರೆ ಜಮೀನಿದ್ದು, ಆರ್‌ಟಿಸಿಯಲ್ಲಿ ಅವರ ತಾತನ ಹೆಸರು ಇರಲಿಲ್ಲ. ಆರ್‌ಟಿಸಿಯಲ್ಲಿ ತಿದ್ದುಪಡಿ ಮಾಡಿ ತಾತನ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದರು. ತಿದ್ದುಪಡಿ ಮಾಡಿಕೊಡಲು ಶಿರಸ್ತೇದಾರ್ ಮಂಜುನಾಥ್ ನಾಗನಾಯಕ ಅವರಿಗೆ ₹30 ಸಾವಿರದ ಬೇಡಿಕೆ ಇಟ್ಟಿದ್ದರು’ ಎಂದು ಎಸಿಬಿ ಡಿವೈಎಸ್‌ಪಿ ಸದಾನಂದ ತಿಪ್ಪಣ್ಣನವರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ನಾಗನಾಯಕ ಅವರು ₹10 ಸಾವಿರವನ್ನು ಗುರುವಾರ ನೀಡಿದ್ದರು. ಇನ್ನು ₹10 ಸಾವಿರ ಶುಕ್ರವಾರ ನೀಡುವುದಾಗಿ ಹೇಳಿದ್ದರು. ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ನಾಗನಾಯಕ ಅವರು ದೂರು ನೀಡಿದ್ದರು. ಅದರ ಅನ್ವಯ, ಶುಕ್ರವಾರ ಮಂಜುನಾಥ್ ಅವರು ₹10 ಸಾವಿರ ಪಡೆಯುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದೆವು. ಈ ಸಂದರ್ಭದಲ್ಲಿ ಅವರು ಸಿಕ್ಕಿ ಬಿದ್ದರು’ ಎಂದು ಅವರು ಮಾಹಿತಿ ನೀಡಿದರು.
‘ವಿಚಾರಣೆ ನಡೆಸಿದ ಬಳಿಕ, ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುವುದು’ ಎಂದು ಅವರು ತಿಳಿಸಿದರು.
ದಕ್ಷಿಣ ವಲಯ ಎಸಿಬಿ ಎಸ್‌ಪಿಜೆ.ಕೆ.ರಶ್ಮಿ ಅವರ ಮಾರ್ಗದರ್ಶನದಲ್ಲಿ ಎಸಿಬಿ ಠಾಣೆ ಡಿವೈಎಸ್ಪಿ ಸದಾನಂದ ತಿಪ್ಪಣ್ಣನವರ್, ಇನ್‌ಸ್ಪೆಕ್ಟರ್ ದೀಪಕ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.