ಚಾಮರಾಜನಗರ: ಜಾತಿ, ಧರ್ಮಗಳ ಸೋಂಕಿಲ್ಲದೆ ಅಶಕ್ತ ಸಮುದಾಯಗಳ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರ ಹಾಗೂ ಅನ್ನ ದಾಸೋಹ ನೀಡಿದ ಆದಿಚುಂಚನಗಿರಿಮಠದ ಬಾಲಗಂಗಾಧರನಾಥ ಶ್ರೀಗಳು ಜನಮಾನಸದಲ್ಲಿ ಅಜರಾಮರರಾಗಿದ್ದಾರೆ ಎಂದು ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ತ್ರಿವಿಧ ದಾಸೋಹಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಬಾಲಗಂಗಾಧರನಾಥಸ್ವಾಮೀಜಿ ಅವರ 80ನೇ ಜಯಂತಿ ಉದ್ಘಾಟಿಸಿ ಮಾತನಾಡಿ, ಬಾಲಗಂಗಾಧರನಾಥ ಸ್ವಾಮೀಜಿ ಅಕ್ಷರ, ಅನ್ನ ಹಾಗೂ ಆರೋಗ್ಯ ದಾಸೋಹದ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ.
ಪರಿಸರ ಸಂರಕ್ಷಣೆಗಾಗಿ ಒಂದು ಕೋಟಿ ಸಸಿ ನೆಡುವ ಕಾರ್ಯಕ್ರಮವನ್ನು ರೂಪಿಸಿ ಪರಿಸರ ಕಾಳಜಿ ಮೆರೆದಿದ್ದರು. ಕೃಷಿ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಶ್ರೀಗಳು ಸರ್ಕಾರ ಮಾಡಬೇಕಾದ ಕೆಲಸಗಳನ್ನು ಸಮುದಾಯಕ್ಕೆ ಮಾಡಿ ತೋರಿಸಿದ್ದರು. ಜಾತಿ, ಮತ, ಧರ್ಮ ಮೀರಿ ಎಲ್ಲ ವರ್ಗದವಿರಿಗೆ ವಿದ್ಯಾದಾನ ಮಾಡುವ ಮೂಲಕ ಸಮಾಜದಲ್ಲಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ನೆರವಾಗಿದ್ದಾರೆ. ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾರೆ. ಶ್ರೀಗಳ ಜನಪರ ಕಾರ್ಯಗಳು ಸದಾ ಸ್ಮರಿಸುವುದು ಸಮಾಜದ ಕರ್ತವ್ಯ ಎಂದರು.
ಸಮಾಜದಲ್ಲಿ ಮನುಷ್ಯ ಹೇಗೆ ಬದುಕುಬೇಕು ಎಂಬುದನ್ನು ಶ್ರೀಗಳು ತೋರಿಸಿಕೊಟ್ಟಿದ್ದಾರೆ. ಸಮಾಜ ಸುಧಾರಣೆಗೆ ಮೌಲ್ಯಯುತ ಸಂದೇಶಗಳನ್ನು ನೀಡುವುದು ಜೊತೆಗೆ ಮಠದಿಂದ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಜನರ ಸೇವೆ ಮೂಲಕವೇ ಎಲ್ಲ ವರ್ಗಗಳ ಪ್ರೀತಿ ಸಂಪಾದಿಸಿರುವ ಆದಿಚುಂಚನಗಿರಿ ಹಿರಿಯ ಶ್ರೀಗಳ ಜಯಂತ್ಯುತ್ಸವ ಅರ್ಥಪೂರ್ಣವಾಗಬೇಕಾದರೆ ಅವರ ಆದರ್ಶ ಮತ್ತು ತತ್ವಗಳ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಭಾರತ ರತ್ನ ಕೊಡಿ:
ತಾಲ್ಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಕೆ.ಪುಟ್ಟಸ್ವಾಮಿ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಲಗಂಗಾಧರನಾಥ ಸ್ವಾಮೀಜಿ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.
ಬಾಲಗಂಗಾಧರನಾಥ ಸ್ವಾಮೀಜಿ ಒಕ್ಕಲಿಗ ಸಮುದಾಐಕ್ಕೆ ಸೀಮಿತರಾಗದೆ ಎಲ್ಲಾ ಜಾತಿ, ಸಮುದಾಯಗಳಿಗೂ ಸಹಾಯ ಮಾಡುವ ಮೂಲಕ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಆದಿಚುಂಚನಗಿರಿ ಮಠದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಹೊರ ರಾಜ್ಯ, ವಿದೇಶಗಳಲ್ಲೂ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಆದಿ ಚುಂಚನಗಿರಿ ಕ್ಷೇತ್ರ ಸಾವಿರಾರು ವರ್ಷದ ಇತಿಹಾಸ ಹೊಂದಿದ್ದು ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿದೆ. ನಾಗಕುಲಕ್ಕೆ ಸೇರಿರುವ ಮಠವು ಭವ್ಯ ಇತಿಹಾಸ ಹಾಗೂ ಪರಂಪರೆ ಹೊಂದಿದೆ. ಸಮಾನತೆಯ ಮಠ ಎಂದೇ ಖ್ಯಾತಿ ಪಡೆದಿರುವ ಆದಿಚುಂಚನಗಿರಿ ಮಠ ಹಲವು ಸ್ವಾಮೀಜಿಗಳಿಗೆ ದೀಕ್ಷೆ ನೀಡಿದೆ. ದೇಶ, ವಿದೇಶಗಳಲ್ಲೂ ಮಠಗಳನ್ನು ಕಟ್ಟಿದ ಕೀರ್ತಿ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಸಲ್ಲುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ, ಸಮಾಜ ಸೇವಕ ಶ್ರೀನಿಧಿ ಕುದರ್, ನಗರಸಭಾ ಮಾಜಿ ಸದಸ್ಯ ಗಣೇಶ ದೀಕ್ಷಿತ್, ಉಪಾಧ್ಯಕ್ಷ ಚಿನ್ನಮುತ್ತು, ನಾಡದೇಶ ಶೆಟ್ಟರ್, ಲೋಕನಾಥ್, ಜಿಲ್ಲಾ ಉಪ್ಪಾರ ಯುವಕರ ಸಂಘ ಅಧ್ಯಕ್ಷ ಜಯಕುಮಾರ್, ಭೂಮಿಕ, ರಾಜೇಂದ್ರ, ಡಾ.ಪರಮೇಶ್ವರಪ್ಪ, ಜಗದೀಶ್, ಪದ್ಮಪುರುಷೋತ್ತಮ್, ಗೋವಿಂದರಾಜು ಮುತ್ತಿಗೆ, ಪಣ್ಯದಹುಂಡಿ ರಾಜು, ಶಿವಲಿಂಗಮೂರ್ತಿ, ನಿಜಧ್ವನಿ ಗೋವಿಂದ್, ರವಿಚಂದ್ರಪ್ರಸಾದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.