ADVERTISEMENT

ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಆದಿವಾಸಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 7:48 IST
Last Updated 12 ಆಗಸ್ಟ್ 2025, 7:48 IST
ವಿಶ್ವ ಆದಿವಾಸಿ ದಿನಾಚರಣೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ವತಿಯಿಂದ ಸೋಮವಾರ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಲಾಯಿತು
ವಿಶ್ವ ಆದಿವಾಸಿ ದಿನಾಚರಣೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ವತಿಯಿಂದ ಸೋಮವಾರ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಲಾಯಿತು   

ಚಾಮರಾಜನಗರ: ರಾಜ್ಯ ಸರ್ಕಾರದಿಂದ ವಿಶ್ವ ಆದಿವಾಸಿ ದಿನಾಚರಣೆ ಆಚರಿಸಬೇಕು ಹಾಗೂ ಆದಿವಾಸಿಗಳ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಚಾಮರಾಜೇಶ್ವರ ಉದ್ಯಾನದ ಮುಂಭಾಗ ಜಮಾಯಿಸಿದ ಪ್ರತಿಭಟನಕಾರರು ಮೆರವಣಿಗೆ ಮೂಲಕ ಭುವನೇಶ್ವರಿ ವೃತ್ತದಿಂದ ಜಿಲ್ಲಾಡಳಿತ ಭವನ ತಲುಪಿ ಕೆಲಕಾಲ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಎನ್.ಸುರೇಶ್ ಮಾತನಾಡಿ, ಬುಡಕಟ್ಟು ಸಮುದಾಯದ ಆಚರಣೆಗಳಿಗೆ ಗೌರವ ನೀಡಲು ವಿಶ್ವಸಂಸ್ಥೆ ಆದಿವಾಸಿ ಸಮುದಾಯಗಳ ದಿನಾಚರಣೆ ಮಾಡಬೇಕು ಎಂದು ತಿಳಿಸಿದೆ. ಆದರೆ ಸರ್ಕಾರ ಆದಿವಾಸಿಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಹುಲಿ ದಿನಾಚರಣೆ, ಪರಿಸರ ದಿನಾಚರಣೆಯ ಮಾದರಿಯಲ್ಲಿ ಆದಿವಾಸಿಗಳ ದಿನಾಚರಣೆಯನ್ನೂ ಮಾಡಬೇಕು.

ADVERTISEMENT

‌ಆದಿವಾಸಿಗಳು ವಾಸಮಾಡುವ ಕಾಲೊನಿಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಬಹಳ್ಟಷ್ಟು ಜನರಿಗೆ ಸ್ವಂತ ಸೂರಿಲ್ಲ. ಹಾಡಿಗಳಿಗೆ ಉತ್ತಮ ರಸ್ತೆಗಳಿಲ್ಲ, ಮಕ್ಕಳ ಓದಿಗೆ ಪೂರಕವಾಗಿ ಗುಣಮಟ್ಟದ ಶಾಲೆಗಳಿಲ್ಲ, ಪರಿಣಾಮ ಸಮುದಾಯದ ಮಕ್ಕಳು ಶಿಕ್ಷಣ ವಂಚಿತರಾಗಬೇಕಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಎಸ್.ರಾಜೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಆದಿವಾಸಿ ಸಮುದಾಯಗಳ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಬೇಕು, ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ಪರೀಕ್ಷೆ ರಹಿತ ಮುಕ್ತ ಪ್ರವೇಶ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ಮಾಧು, ಮುಖಂಡರಾದ ಕುಮಾರ್, ಮಣಿ, ಪಿ.ಬಾಲು, ಹುಚ್ಚಯ್ಯ, ಸಿದ್ದಪ್ಪಾಜಿ, ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.