ADVERTISEMENT

ಬಿತ್ತನೆ ಬೀಜ ದಾಸ್ತಾನಿಗೆ ಕೃಷಿ ಇಲಾಖೆ ಸಿದ್ಧತೆ

ಪೂರ್ವ ಮುಂಗಾರು ಮಳೆ ಬೇಗ ಬರುವ ನಿರೀಕ್ಷೆ: ಕೃಷಿ ಚಟುವಟಿಕೆಗೆ ರೈತರು ಸಿದ್ಧ

ಸೂರ್ಯನಾರಾಯಣ ವಿ
Published 9 ಮಾರ್ಚ್ 2020, 19:45 IST
Last Updated 9 ಮಾರ್ಚ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಈ ತಿಂಗಳ ಆರಂಭದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಎರಡು ಮೂರು ದಿನಗಳು ಸಾಧಾರಣ ಮಳೆ ಬಿದ್ದಿರುವ ಬೆನ್ನಲ್ಲೇ ಕೃಷಿ ಇಲಾಖೆಯು ಮುಂದಿನ ಮುಂಗಾರು ಪೂರ್ವ ಹಾಗೂ ಮುಂಗಾರು ಅವಧಿಯ ಕೃಷಿ ಚಟುವಟಿಕೆಗೆ ಸಿದ್ಧತೆ ಆರಂಭಿಸಿದೆ.

ಸಕಾಲದಲ್ಲೇ ಮಳೆಯಾಗಿರುವುದರಿಂದ ಈ ವರ್ಷ ಮುಂಗಾರು ಪೂರ್ವ ಮಳೆ ಬೇಗ ಬರುವ ನಿರೀಕ್ಷೆ ಇದ್ದು, ಈ ಅವಧಿಯಲ್ಲಿ ರೈತರು ಮಾಡಲಿರುವ ಬಿತ್ತನೆಗೆ ಬೇಕಾದ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳುವ ಪ್ರಕ್ರಿಯೆಗೆ ಇಲಾಖೆ ಚಾಲನೆ ನೀಡಿದೆ.

ಮುಂಗಾರು ಅಧಿಕೃತವಾಗಿ ಆರಂಭವಾಗುವುದಕ್ಕೂ ಮೊದಲು ಬರುವ ಮಳೆಯನ್ನೇ ಆಶ್ರಯಿಸಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ರೈತರು ಜೋಳ, ಮೆಕ್ಕೆ ಜೋಳ, ಸಜ್ಜೆ, ಉದ್ದು, ಹೆಸರು, ಅಲಸಂದೆ, ಶೇಂಗಾ, ಎಳ್ಳು ಹಾಗೂ ಸೂರ್ಯಕಾಂತಿಯನ್ನು ಬಿತ್ತನೆ ಮಾಡುತ್ತಾರೆ. ಹಾಗಾಗಿ, ರೈತರಿಗೆ ಬಿತ್ತನೆ ಬೀಜಗಳನ್ನು ವಿತರಿಸುವುದಕ್ಕಾಗಿ ಅವುಗಳನ್ನು ಖರೀದಿಸುವ ಕೆಲಸವನ್ನು ಕೃಷಿ ಇಲಾಖೆ ಆರಂಭಿಸಿದೆ.

ADVERTISEMENT

‘ರಾಜ್ಯಕ್ಕೆ ಮುಂಗಾರು ಆರಂಭವಾಗುವುದು ನಮ್ಮ ಜಿಲ್ಲೆಯಿಂದಲೇ, ಬಿತ್ತನೆಯೂ ಶುರುವಾಗುವುದು ಇಲ್ಲಿಂದಲೇ.ಮಾರ್ಚ್‌ 2ರಂದು ಜಿಲ್ಲೆಯ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಆ ಬಳಿಕವೂ ಸಣ್ಣ ಪ‍್ರಮಾಣದಲ್ಲಿ ಮಳೆ ಬಿದ್ದಿದೆ. ಭೂಮಿಯನ್ನು ಹದಗೊಳಿಸಲು ಇದು ಸಹಕಾರಿ ಸಹಕಾರಿ. ಈ ವರ್ಷ ಮುಂಗಾರು ಪೂರ್ವ ಮಳೆ ಬೇಗ ಬರಬಹುದು ಎಂದು ನಿರೀಕ್ಷಿಸಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆಯನ್ನೇ ಆಶ್ರಯಿಸಿ ಕೃಷಿ ನಡೆಸುವ ರೈತರು ಮುಂಗಾರು ಪೂರ್ವ ಅವಧಿಯಲ್ಲಿ ಉದ್ದು, ಹೆಸರು, ಜೋಳ, ಎಳ್ಳು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಮಳೆ ಬೇಗ ಬಿದ್ದರೆ, ರೈತರು ಬಿತ್ತನೆ ಪ್ರಾರಂಭಿಸುತ್ತಾರೆ. ಅದಕ್ಕೂ ಮುಂಚಿತವಾಗಿಅವರಿಗೆ ಬಿತ್ತನೆ ಬೀಜಗಳನ್ನು ವಿತರಿಸಬೇಕಾಗಿದೆ’ ಎಂದು ಅವರು ಹೇಳಿದರು.

ಇಲಾಖೆಯು ಕರ್ನಾಟಕ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮಗಳು ಹಾಗೂ ಕರ್ನಾಟಕ ಎಣ್ಣೆಕಾಳು ಅಭಿವೃದ್ಧಿ ಒಕ್ಕೂಟದಿಂದ ಬಿತ್ತನೆ ಬೀಜಗಳನ್ನು ಖರೀದಿಸಿ ದಾಸ್ತಾನು ಮಾಡಿಟ್ಟುಕೊಳ್ಳುತ್ತದೆ. ನಂತರ ರೈತರ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸುತ್ತದೆ. ಬಿತ್ತನೆ ಮಾಡಲು ನಿಗದಿಪಡಿಸಿರುವ ಗುರಿಗೆ ಅನುಗುಣವಾಗಿ ಬೀಜಗಳನ್ನು ದಾಸ್ತಾನು ಮಾಡಲಾಗುತ್ತದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಎಷ್ಟು ಬಿತ್ತನೆ ಗುರಿ? (ಹೆಕ್ಟೇರ್‌ಗಳಲ್ಲಿ)

ಕೃಷಿ ಇಲಾಖೆಯು ಮುಂಗಾರು ಪೂರ್ವ ಹಾಗೂ ಮುಂಗಾರು ಅವಧಿಗೆ ಜಿಲ್ಲೆಯಾದ್ಯಂತ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ನಿಗದಿಪಡಿಸಿದೆ.

ಮೆಕ್ಕೆಜೋಳ– 23,300, ಜೋಳ– 16,000, ನೆಲಕಡಲೆ–12,000, ಸೂರ್ಯಕಾಂತಿ–9,500, ಉದ್ದು–7,000, ಹೆಸರು–4010, ಅಲಸಂದೆ–2,500, ಅವರೆ–2,680, ಎಳ್ಳು–1,500, ಸಜ್ಜೆ–1,200.

***

ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮಾರ್ಚ್‌ ಅಂತ್ಯ– ಏಪ್ರಿಲ್‌ ಮೊದಲ ವಾರದಲ್ಲಿ ಬಿತ್ತನೆ ಬೀಜಗಳು ಲಭ್ಯವಿರಲಿವೆ

-ಎಚ್‌.ಟಿ.ಚಂದ್ರಕಲಾ, ಜಂಟಿ ಕೃಷಿ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.