ಹನೂರು: ‘ಗೋಪಿನಾಥಂನ ಪುದೂರು ಗ್ರಾಮದಲ್ಲಿ ಆಸ್ಪತ್ರೆ ಇದೆ ವೈದ್ಯರಿಲ್ಲ, ಇರುವ ಸಿಬ್ಬಂದಿ ಸಹ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿ ವೈದ್ಯಾಧಿಕಾರಿಗಳನ್ನು ನೇಮಿಸಬೇಕಾಗಿದೆ...’
ತಾಲ್ಲೂಕಿನ ಗಡಿಭಾಗದಲ್ಲಿರುವ ಅಲಂಬಾಡಿ ಗ್ರಾಮಕ್ಕೆ ತಹಶೀಲ್ದಾರ್ ಚೈತ್ರಾ ಮಂಗಳವಾರ ಭೇಟಿ ನೀಡಿ ಸ್ಥಳೀಯರೊಂದಿಗೆ ಸಭೆ ನಡೆಸಿದ ವೇಳೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
‘ಈ ಭಾಗದ ಜನತೆಯ ಆರೋಗ್ಯ ಹದಗೆಟ್ಟರೆ ಚಿಕಿತ್ಸೆಗಾಗಿ ಮಹದೇಶ್ವರ ಬೆಟ್ಟ ಅಥವಾ ತಮಿಳುನಾಡಿನ ಕೊಳತೂರಿಗೆ ಹೋಗಬೇಕು. ಜಿಲ್ಲಾಮಟ್ಟದ ಆರೋಗ್ಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕು, ಜೊತೆಗೆ ಬ್ಯಾಂಕ್ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಗಡಿ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಈಚೆಗೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅಲಂಬಾಡಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಕುಂದು ಕೊರತೆಗಳನ್ನು ಆಲಿಸಿದರು.
ಬಳಿಕ ಮಾತನಾಡಿದ ಚೈತ್ರಾ, ‘ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಮತ್ತು ಅರಣ್ಯ ಅಧಿಕಾರಿಗಳಿಂದ ಆಗುತ್ತಿರುವ ದೌರ್ಜನ್ಯ ತಪ್ಪಿಸಲು ಹಾಗೂ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಆಗಸ್ಟ್ 14 ಅಥವಾ 16ರಂದು ಜಿಲ್ಲಾ ಭವನದಲ್ಲಿ ಗಡಿ ಗ್ರಾಮದ ಜನತೆಯ ಹಾಗೂ ರೈತರ ಸಭೆಯನ್ನು ಕರೆಯಲಾಗಿದ್ದು, ಇಲ್ಲಿನ ಸ್ಥಿತಿಗತಿಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ಲೋಕೇಶ್ ಚೌಹಾಣ್, ರೈತ ಮುಖಂಡರಾದ ಗೌಡೇಗೌಡ, ಅಮ್ಜಾದ್ ಖಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.