ADVERTISEMENT

ಬಾಬಾ ಸಾಹೇಬ್ ಒಂದು ಪಕ್ಷಕ್ಕೆ ಸೀಮಿತವಲ್ಲ: ಸಂಸದ

ಮಾಂಬಳ್ಳಿಯಲ್ಲಿ ಜೈ ಭೀಮ್‌ ಭವನ ಉದ್ಘಾಟನೆ; ಅಂಬೇಡ್ಕರ್‌ ಪ್ರತಿಮೆ ಅನಾವರಣ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 4:15 IST
Last Updated 21 ಮಾರ್ಚ್ 2023, 4:15 IST
ಮಾಂಬಳ್ಳಿಯಲ್ಲಿ ನಿರ್ಮಿಸಲಾಗಿರುವ ಜೈ ಭೀಮ್‌ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಸ್ಥಾಪಿಸಲಾಗಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಯನ್ನು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅನಾವರಣಗೊಳಿಸಿದರು. ಶಾಸಕ ಎನ್‌.ಮಹೇಶ್‌, ಜಿಲ್ಲಾಧಿಕಾರಿ ರಮೇಶ್‌ ಇದ್ದರು
ಮಾಂಬಳ್ಳಿಯಲ್ಲಿ ನಿರ್ಮಿಸಲಾಗಿರುವ ಜೈ ಭೀಮ್‌ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಸ್ಥಾಪಿಸಲಾಗಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಯನ್ನು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅನಾವರಣಗೊಳಿಸಿದರು. ಶಾಸಕ ಎನ್‌.ಮಹೇಶ್‌, ಜಿಲ್ಲಾಧಿಕಾರಿ ರಮೇಶ್‌ ಇದ್ದರು   

ಯಳಂದೂರು: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಶ್ನಾತೀತ ನಾಯಕರು. ಅವರಿಗೆ ಪಕ್ಷ ಇಲ್ಲ. ಯಾವ ಪಕ್ಷಕ್ಕೂ ಅವರು ವಾರಸುದಾರರಲ್ಲ. ಅಂಬೇಡ್ಕರ್‌ ವಿಚಾರದಲ್ಲಿ ರಾಜಕೀಯ ಮಾಡಬಾರದು. ಅವರ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಎಲ್ಲರೂ ಒಟ್ಟುಗೂಡಬೇಕು’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಸೋಮವಾರ ಹೇಳಿದರು.

ತಾಲ್ಲೂಕಿನ ಮಾಂಬಳ್ಳಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಾಣ ಮಾಡಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟಿಸಿ, ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣಗೊಳಿಸಿದ ಅವರು ಮಾತನಾಡಿದರು.

‘ಅಂಬೇಡ್ಕರ್‌ ಮತ್ತು ನಮ್ಮ ಸಂಬಂಧ ತಾಯಿ ಮಗುವಿನಂತೆ. ಅವರು ನಮಗೆ ತಾಯಿ. ತಾಯಿ ಹೇಗೆ ಮಗುವಿನ ರಕ್ಷಣೆ ಮಾಡಿ, ಪ್ರೀತಿ ವಿಶ್ವಾಸದಿಂದ ಬೆಳವಣಿಗೆಗೆ ಮುಂದಾಗುತ್ತಾಳೆಯೋ ಅದೇ ರೀತಿ ಅಂಬೇಡ್ಕರ್ ಸಹ ಎಲ್ಲರ ಬೆಳವಣಿಗೆಗೂ ಕಾರಣರಾಗಿದ್ದಾರೆ’ ಎಂದರು.

ADVERTISEMENT

‘ಈ ಊರಿನಿಂದ ದೊಡ್ಡ ದೊಡ್ಡ ಅಧಿಕಾರಿಗಳು ಆಗಿದ್ದಾರೆ. ಆದರೆ, ಅವರು ಯಾರೂ ಈ ಭವನ ನಿರ್ಮಾಣಕ್ಕೆ ಸಹಾಯ ಮಾಡಿಲ್ಲ. ಸ್ಥಳೀಯ ವಿದ್ಯಾವಂತರು, ಜನರು ಸೇರಿ ಸಹಾಯ ಮಾಡಿದ್ದಾರೆ. ಸಂಸದರ ನಿಧಿಯಿಂದಲೂ ಅನುದಾನ ಕೊಟ್ಟಿದ್ದೇನೆ. ಸರ್ಕಾರದಿಂದ ಅನುದಾನ ಬರುವಂತೆ ಮಾಡಿದ್ದೇನೆ. ಕಾಂಪೌಂಡ್‌, ಶೌಚಾಲಯ ಇನ್ನಿತರ ಕೆಲಸ ಆಗಬೇಕಿದೆ. ಅದಕ್ಕಾಗಿ ಇನ್ನೂ ₹ 15 ಲಕ್ಷ ಅನುದಾನ ಕೊಡುತ್ತೇನೆ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದ್ರಮ್ಮ ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು ‘ಅಧ್ಯಕ್ಷೆ ಯಾಕೆ ಬರಲಿಲ್ಲ. ಇಲ್ಲಿ ರಾಜಕೀಯ ಇಲ್ಲ. ಚುನಾವಣೆಯಲ್ಲಿ ಮತಗಳನ್ನು ಯಾರಿಗೆ ಬೇಕಾದರೂ ಕೊಡಲಿ. ತೊಂದರೆ ಇಲ್ಲ. ಆದರೆ, ಜಾತಿ ಹೆಸರು ಹೇಳಿಕೊಂಡು ಮತ ಕೇಳುವವರ ಬಗ್ಗೆ ಜನರು ಎಚ್ಚರದಿಂದ ಇರಬೇಕು’ ಎಂದರು.

‘ಶಾಸಕ ಎನ್‌.ಮಹೇಶ್‌ ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ಜನರ ಬಗ್ಗೆ ಕಾಳಜಿ ಹೊಂದಿದ್ದಾರೆ. ಸಮುದಾಯದ ಜನರ ಕಷ್ಟಗಳ ಬಗ್ಗೆ ಮಾತನಾಡುವ ನಾಯಕರು ಎಲ್ಲಿದ್ದಾರೆ? ಹಿಂದೆ ಇದ್ದವರು ಹೆದರಿಕೊಂಡು ಮಾತನಾಡಲು ನಡುಗುತ್ತಿದ್ದರು. ನಾವು ಧೈರ್ಯವಾಗಿ ಮಾತನಾಡುತ್ತಿದ್ದೇವೆ’ ಎಂದು ಹೇಳಿದರು.

ಶಾಸಕ ಎನ್.ಮಹೇಶ್ ಮಾತನಾಡಿ ‘₹1.55 ಕೋಟಿ ವೆಚ್ಚದಲ್ಲಿ ಈ ಭವನ ನಿರ್ಮಾಣ ಮಾಡಲಾಗಿದೆ. ಈ ಭವನ ನಿರ್ಮಾಣಕ್ಕೆ ಅನೇಕ ಜನಪ್ರತಿನಿಧಿಗಳ ನೆರವು ಸಿಕ್ಕಿದೆ. ಭನನದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಸಹ ನಿರ್ಮಾಣ ಮಾಡಲಾಗಿದೆ. ಮುಂದಿನ ತಲೆಮಾರಿನವರೆಗೂ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಪ್ರತಿಮೆ ಸ್ಥಾಪಿಸಲಾಗಿದೆ’ ಎಂದರು.

ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಪೂವಿತಾ, ಗ್ರಾಮ ಪಂಚಾಯಿತಿ ಸದಸ್ಯೆ ಲಕ್ಷ್ಮಿ, ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ, ಮುಖಂಡ ಮಾಂಬಳ್ಳಿ ನಂಜುಂಡಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎ.ಎಂ.ಕೇಶವಮೂರ್ತಿ ಇದ್ದರು.

ಅಪೂರ್ಣ ಭವನ: ಗ್ರಾಮಸ್ಥರ ವಿರೋಧ

ಸಮುದಾಯ ಭವನ ಅಪೂರ್ಣವಾಗಿದ್ದು, ಗ್ರಾಮದ ಯಜಮಾನರು, ಮುಖಂಡರನ್ನು ನಿರ್ಲಕ್ಷಿಸಿ ಶಾಸಕರು, ಬಿಜೆಪಿ ಸದಸ್ಯರು ಮತ್ತು ಹಿಂಬಾಲಕರು ಉದ್ಧಟತನ ತೋರಿದ್ದಾರೆ ಎಂದು ಆರೋಪಿಸಿ ಗ್ರಾಮದ ಯಜಮಾನರು, ಮುಖಂಡರು ಸಮಾರಂಭಕ್ಕೆ ಗೈರಾದರು.

ಗ್ರಾಮದ ಸಿದ್ದಪ್ಪಾಜಿ ದೇವಳದಲ್ಲಿ ಸೋಮವಾರ ಸಭೆ ನಡೆಸಿದ ಮುಖಂಡರು ‘ಭವನಕ್ಕೆ ಸುತ್ತುಗೋಡೆ, ಶೌಚಾಲಯ ನಿರ್ಮಿಸಿಲ್ಲ. ಮೊದಲ ಮಹಡಿಗೆ ಕಾಂಕ್ರೀಟ್‌ ಹಾಕದೆ, ಶೀಟ್ ಅಳವಡಿಸಲಾಗಿದೆ. ಅನುದಾನ ನೀಡಿದ ದಲಿತ ಮುಖಂಡರನ್ನು ನಿರ್ಲಕ್ಷಿಸಲಾಗಿದೆ. ಯಜಮಾನರು, ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದಕ್ಕೆ ಶಾಸಕ ಎನ್.ಮಹೇಶ್ ಕುಮ್ಮಕ್ಕು ಕಾರಣ’ ಎಂದು ಅವರು ಆರೋಪಿಸಿದರು.

ಯಜಮಾನರಾದ ಬಸವರಾಜು, ಪುಟ್ಟಸ್ವಾಮಿ, ಶಿವಣ್ಣ, ಗೋಪಾಲಯ್ಯ, ನಟರಾಜು, ನಾಗಬಸವಯ್ಯ, ರಾಜು, ಆರ್.ಬಸವಯ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವರದರಾಜು, ಸದಸ್ಯರಾದ ದೇವು, ರಾಜಪ್ಪ, ಲಕ್ಷ್ಮಿಪತಿ, ಪರಶಿವಮೂರ್ತಿ, ಎನ್.ಎಂ.ಮಾಧವಿ, ಗಾಡಿ ಮಾಲೀಕರ ಸಂಘದ ಅಧ್ಯಕ್ಷ ನಂಜಯ್ಯ, ಎಚ್.ಮಹದೇವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.