
ಚಾಮರಾಜನಗರ: ತಾಲ್ಲೂಕಿನ ಜ್ಯೋತಿ ಗೌಡನಪುರದಲ್ಲಿ ಗುರುವಾರ ಕಿಡಿಗೇಡಿಗಳು ಅಂಬೇಡ್ಕರ್ ಭಾವಚಿತ್ರ, ಫ್ಲೆಕ್ಸ್ ಹರಿದು, ಬುದ್ಧ ಹಾಗೂ ಅಂಬೇಡ್ಕರ್ ವಿಗ್ರಹಗಳನ್ನು ಭಗ್ನಗೊಳಿಸಿ ವಿಕೃತಿ ಮೆರೆದಿದ್ದಾರೆ.
ಅಂಬೇಡ್ಕರ್ ಹಾಗೂ ಬುದ್ಧನಿಗೆ ಅಪಮಾನ ಮಾಡಿರುವ ಘಟನೆ ನಡೆಸಿ ಶುಕ್ರವಾರ ಬೆಳಿಗ್ಗಿನಿಂದ ಸಂಜೆಯವರೆಗೂ ಗ್ರಾಮದಲ್ಲಿ ಸರಣಿ ಪ್ರತಿಭಟನೆಗಳು ನಡೆದವು. ದಲಿತ, ಪ್ರಗತಿಪರ ಸಂಘಟನೆಗಳು, ಮುಖಂಡರು, ರಾಜಕೀಯ ನಾಯಕರು ಗ್ರಾಮಕ್ಕೆ ಭೇಟಿನೀಡಿ ಘಟನೆಯನ್ನು ಖಂಡಿಸಿದರು.
ನಡೆದಿರುವುದು ಏನು ?:
ಗ್ರಾಮದ ಹಳೆಯ ಬಡಾವಣೆಯ ವೃತ್ತದಲ್ಲಿ ಕಬ್ಬಿಣದ ಶೀಟ್ ಮೇಲಿದ್ದ ಅಂಬೇಡ್ಕರ್ ಚಿತ್ರವನ್ನು ವಿರೂಪಗೊಳಿಸಲಾಗಿದೆ. ಹೊಸ ಬಡಾವಣೆ ಸರ್ಕಲ್‌ನಲ್ಲಿ ಹಾಕಲಾಗಿದ್ದ ಅಂಬೇಡ್ಕರ್ ಫ್ಲೆಕ್ಸ್ ಹರಿಯಲಾಗಿದೆ. ಗ್ರಾಮದ ಬೌದ್ಧ ವಿಹಾರದೊಳಗೆ ನುಗ್ಗಿ ಅಂಬೇಡ್ಕರ್ ಹಾಗೂ ಬುದ್ಧನ ವಿಗ್ರಹಗಳನ್ನು ಕಿತ್ತು ಒಡೆದು ಹಾಕಿ ರಸ್ತೆಗೆ ಬಿಸಾಡಲಾಗಿದೆ.
ಘಟನೆ ಖಂಡಿಸಿ ಗ್ರಾಮದ ಮುಖಂಡರು, ಮಹಿಳೆಯರು, ಮಕ್ಕಳು ಪ್ರತಿಭಟನೆ ನಡೆಸಿ ಕಿಡಿಗೇಡಿಗಳನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಲು ಒತ್ತಾಯಿಸಿದರು. ಬೆಳಿಗ್ಗಿನಿಂದ ಸಂಜೆಯವರೆಗೂ ಸರಣಿ ಪ್ರತಿಭಟನೆಗಳು ನಡೆದವು. ಸ್ಥಳದಲ್ಲಿ ಬಿಗುವಿನ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಅವಲೋಕಿಸಿತು. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿನೀಡಿ ಸಾಕ್ಷ್ಯಗಳನ್ನು ಕಲೆಹಾಕಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಮಾತನಾಡಿ, ಘಟನಾ ಸ್ಥಳದ ಟವರ್ ಲೊಕೇಷನ್ ಮಾಹಿತಿ ಸಂಗ್ರಹಿಸಿ ಮೊಬೈಲ್ ಸಿಡಿಆರ್ ಕರೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಬೆರಳಚ್ಚು ಸಾಕ್ಷ್ಯಗಳು ಸಿಕ್ಕಿದ್ದು ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಭೇಟಿನೀಡಿ ಗ್ರಾಮಸ್ಥರ ಅಹವಾಲು ಆಲಿಸಿ ಶೀಘ್ರ ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ಅಂಬೇಡ್ಕರ್ ಫ್ಲೆಕ್ಸ್, ಭಾವಚಿತ್ರ, ವಿಗ್ರಹ ವಿರೂಪ ಹಾಗೂ ಬುದ್ಧನ ಮೂರ್ತಿ ಭಗ್ನಗೊಳಿಸಿರುವುದು ಖಂಡನೀಯ. ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲೆಯಾದ್ಯಂತ ಇರುವ ಮಹನೀಯರ ಪುತ್ಥಳಿಗಳ ಮುಂಭಾಗ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಆರೋಪಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ನಂಜನಗೂಡು ಕ್ಷೇತ್ರದ ಮಾಜಿ ಶಾಸಕ ಹರ್ಷವರ್ಧನ್ ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ ಮಾತನಾಡಿ, ಅಂಬೇಡ್ಕರ್ ಹಾಗೂ ಬುದ್ಧನನಿಗೆ ಮಾಡಿರುವ ಅಪಮಾನ ಸಮಾಜ ತಲೆ ತಗ್ಗಿಸುವ ಕೃತ್ಯವಾಗಿದ್ದು ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಮುಖಂಡರಾದ ನಾಗಯ್ಯ, ಸೋಮೇಶ್ವರ, ವೀರಭದ್ರಸ್ವಾಮಿ, ನಲ್ಲೂರು ಮಹದೇವಸ್ವಾಮಿ, ಅಬ್ರಾರ್ ಅಹಮದ್, ಖಲೀಲ್ ಉಲ್ಲ, ವೇಣುಗೋಪಾಲ, ಚಿಗುರು ಬಂಗಾರು, ಕೆ.ನಾಗರಾಜು, ಶಶಿ ಇತರರು ಇದ್ದರು.
‘ಹುನ್ನಾರ ಬಯಲಿಗೆ ಬರಲಿ’
ಈಚೆಗೆ ನಡೆದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಬರೆಸುವಂತೆ ಕರೆ ನೀಡಿದ್ದ ಸಂದೇಶವನ್ನು ಸಹಿಸದ ಹಿಂದುತ್ವವಾದಿಗಳು ಅಂಬೇಡ್ಕರ್ ಹಾಗೂ ಬುದ್ಧನ ಮೂರ್ತಿಗಳನ್ನು ವಿರೂಪಗೊಳಿಸಿ ವಿಕೃತಿ ಮರೆದಿರುವ ಸಂಶಯಗಳಿವೆ. ಅಂಬೇಡ್ಕರ್ ಫ್ಲೆಕ್ಸ್ ಭಾವಚಿತ್ರ ವಿರೂಪಗೊಳಿಸುವ ಕೃತ್ಯಗಳು ಹಿಂದೆ ಹಲವು ಬಾರಿ ನಡೆದಿದ್ದರೂ ಮೊದಲ ಬಾರಿಗೆ ಬುದ್ಧನ ವಿಗ್ರಹ ಒಡೆದು ಹಾಕಿರುವುದು ಸನಾತನಿಗಳ ಕೈವಾಡ ಶಂಕೆ ಕಾಣುತ್ತಿದೆ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ಹುನ್ನಾರ ಬಯಲಿಗೆಳೆಯಬೇಕು. ಗ್ರಾಮದ ಹಿರಿಯ ಮುಖಂಡ ಎಂ.ಮಾದಯ್ಯ ಸ್ವಂತ ಖರ್ಚಿನಲ್ಲಿ ಥಾಯ್ಲೆಂಡ್‌ನಿಂದ ತರಿಸಿ ಬೌದ್ಧ ವಿಹಾರದಲ್ಲಿ ಪ್ರತಿಷ್ಠಾಪಿಸಿದ್ದ ಬುದ್ಧನ ವಿಗ್ರಹವನ್ನು ತುಂಡರಿಸಿರುವುದು ಸಮುದಾಯಕ್ಕೆ ತೀವ್ರ ನೋವುಂಟು ಮಾಡಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ದಲಿತ ಮುಖಂಡ ಅಯ್ಯನಪುರ ಶಿವಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.