ADVERTISEMENT

ಚಾಮರಾಜನಗರ | ನಾಯಕ ಸಮಾಜದ ಮುಖಂಡರ ವಿರುದ್ಧ ಟೀಕೆ ಸಲ್ಲದು: ವಿರಾಟ್‌

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 4:20 IST
Last Updated 22 ನವೆಂಬರ್ 2025, 4:20 IST
ಶಿವು ವಿರಾಟ್‌
ಶಿವು ವಿರಾಟ್‌   

ಚಾಮರಾಜನಗರ: ತಾಲ್ಲೂಕಿನ ಜ್ಯೋತಿಗೌಡನಪುರದಲ್ಲಿ ಅಂಬೇಡ್ಕರ್ ಹಾಗೂ ಬುದ್ಧನ ಪ್ರತಿಮೆ ಭಗ್ನಗೊಳಿಸಿದ, ಭಾವಚಿತ್ರ ಹಾಗೂ ಫ್ಲೆಕ್ಸ್‌ಗಳನ್ನು ವಿರೂಪಗೊಳಿಸಿರುವ ಪ್ರಕರಣದಲ್ಲಿ ಮುಖಂಡ ಅಯ್ಯನಪುರ ಶಿವಕುಮಾರ್ ನಾಯಕ ಸಮುದಾಯದ ಮುಖಂಡರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ನಾಯಕ ಸಮುದಾಯದ ಮುಖಂಡ ಶಿವು ವಿರಾಟ್ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ನಾಯಕ ಸಮುದಾಯದ ತೇಜೋವಧೆ ಮಾಡಲಾಗುತ್ತಿದೆ. ರಾಜಕೀಯ ಲಾಭ ಪಡೆಯಲು ಸಮುದಾಯದ ಮುಖಂಡರ ಬಗ್ಗೆ ಹಗುರುವಾಗಿ ಮಾತನಾಡುವುದು ಸರಿಯಲ್ಲ ಎಂದರು.

ಪ್ರಕರಣದಲ್ಲಿ ಪೊಲೀಸರ ತನಿಖೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಪ್ರಕರಣದಲ್ಲಿ ಶಿವಣ್ಣ ಎಂಬಾತನನ್ನು ವಶಕ್ಕೆ ಪಡೆದು ದೈಹಿಕ ಹಲ್ಲೆ ನಡೆಸಿ ಅವಮಾನ ಮಾಡಿ ಕೃತ್ಯ ಒಪ್ಪಿಕೊಳ್ಳುವಂತೆ ಪೊಲೀಸರು ಬೆದರಿಕೆ ಹಾಕಿದ್ದಾರೆ. ನಾಯಕ ಸಮುದಾಯದ ಮೇಲೆ ಆರೋಪ ಹೊರಿಸುವ ಷಡ್ಯಂತ್ರ ಮಾಡಲಾಗಿದೆ ಎಂದು ಶಿವು ವಿರಾಟ್ ದೂರಿದರು.

ADVERTISEMENT

ಬದನಗುಪ್ಪೆ ಗ್ರಾಮದಲ್ಲಿ ಅಂಬೇಡ್ಕರ್ ನಾಮಫಲಕ ಅಳವಡಿಸಲು ಹಾಗೂ ಅಮಚವಾಡಿಯಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡಲು ಸ್ಥಳೀಯ ಗ್ರಾಮ ಪಂಚಾಯಿತಿ ಅನುಮತಿ ಅಗತ್ಯ. ಈ ವಿಚಾರ ಅರಿಯದೆ ನಲ್ಲೂರು ಸೋಮೇಶ್ವರ್ ಸಮುದಾಯದ ಮೇಲೆ ವಿನಾಕಾರಣ ಆರೋಪ ಮಾಡಿರುವುದು ಸರಿಯಲ್ಲ ಎಂದರು.

ಪ್ರಕರಣದಲ್ಲಿ ಆರ್‌ಎಸ್‌ಎಸ್, ಬಿಜೆಪಿ ಮನುವಾದಿಗಳ ಕುತಂತ್ರ ಅಡಗಿದೆ ಎಂದು ಆರೋಪಿಸಿರುವ ಮುಖಂಡ ಸಂಘಸೇನಾ ಪ್ರಚಾರಕ್ಕಾಗಿ ಸುಳ್ಳು ಹರಡುತ್ತಿದ್ದಾರೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಲಿಂಗನಾಯಕ, ಬಸವಣ್ಣ, ನಾಗೇಂದ್ರ, ಪ್ರದೀಪ್‌, ವೆಂಕಟೇಶ್, ರವಿ ಇದ್ದರು.

ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳ ಬಂಧಿಸುವಂತೆ ನಾಯಕ ಸಮುದಾಯ ನಡೆಸಿದ ಶಾಂತಿಯುತ ಪ್ರತಿಭಟನೆಯನ್ನು ಟೀಕಿಸಿರುವುದು ನಾಯಕ ಸಮುದಾಯದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವುದು ಸರಿಯಲ್ಲ

–ಶಿವು ವಿರಾಟ್ ನಾಯಕ ಸಮುದಾಯದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.