ಚಾಮರಾಜನಗರ: ‘ಬಿ.ಮಲ್ಲಯ್ಯನಪುರದ ಅಂಗನವಾಡಿ ಶಿಕ್ಷಕಿಯ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಳೀಯ ಅಭ್ಯರ್ಥಿಯನ್ನು ಕಡೆಗಣಿಸಿ ಹೊರ ಜಿಲ್ಲೆಯ ಮಹಿಳೆಯ ನೇಮಕಾತಿ ಮಾಡಿರುವುದು ನಿಯಮಗಳ ಉಲ್ಲಂಘನೆಯಾಗಿದ್ದು, ಕೂಡಲೇ ನೇಮಕಾತಿ ರದ್ದುಗೊಳಿಸಿ ಅರ್ಹರ ಆಯ್ಕೆ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ’ ಎಂದು ಕೆ.ಮಂಜುಳಾ ದೂರಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅತ್ತೆ ನಾಗಮ್ಮ ಅವರು ಬಿ.ಮಲ್ಲಯ್ಯನವರದ ಅಂಗನವಾಡಿ ಕೇಂದ್ರದಲ್ಲಿ 25 ವರ್ಷಗಳ ಕಾಲ ಶಿಕ್ಷಕಿಯಾಗಿ ದುಡಿದು 2019ರ ಡಿ.14ರಲ್ಲಿ ಅಕಾಲಿಕ ಮರಣ ಹೊಂದಿದ್ದರು. ನಂತರ ಅನುಕಂಪದ ಆಧಾರ ಮೇಲೆ ಹುದ್ದೆ ನೀಡುವಂತೆ ಅರ್ಜಿ ಸಲ್ಲಿಸಿದಾಗ ಸ್ಪಂದಿಸಲಿಲ್ಲ’ ಎಂದರು.
ಬಳಿಕ ನಿಯಮಬದ್ಧವಾಗಿ ಆನ್‌ಲೈನ್‌ನಲ್ಲಿ ಅಂಗವನಾಡಿ ಶಿಕ್ಷಕಿ ಹುದ್ದೆಗೆ ಅರ್ಜಿ ಸಲ್ಲಿಸಿದೆ. ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರೂ ಪ್ರಕಟವಾಯಿತು. ಆದರೆ, ಅಂತಿಮ ಆಯ್ಕೆಪಟ್ಟಿಯಲ್ಲಿ ನನ್ನ ಹೆಸರು ಕೈಬಿಟ್ಟು ಬೇರೆ ಗ್ರಾಮದ ಮಹಿಳೆಯನ್ನು ಆಯ್ಕೆ ಮಾಡಲಾಯಿತು. ನೇಮಕಾತಿ ನಿಯಮಗಳ ಉಲ್ಲಂಘನೆ ವಿರುದ್ಧ ಹೈಕೋರ್ಟ್ ಮೋರೆ ಹೋದಾಗ ನೇಮಕಾತಿ ರದ್ದುಗೊಳಿಸಿ ನನಗೆ ಹುದ್ದೆ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ.
ನ್ಯಾಯಾಲಯದ ಆದೇಶವನ್ನು ಸಂತೇಮರಹಳ್ಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ನೀಡಿದ್ದರೂ ನೇಮಕಾತಿ ಆದೇಶ ನೀಡುತ್ತಿಲ್ಲ ಎಂದು ಮಂಜುಳಾ ಅಳಲು ತೋಡಿಕೊಂಡರು.
ಮೇಲಧಿಕಾರಿಗಳು ಕೂಡಲೇ ಮಧ್ಯೆ ಪ್ರವೇಶಿಸಿ ನ್ಯಾಯಾಲಯದ ಆದೇಶ ಪಾಲನೆಗೆ ನಿರ್ದೇಶನ ನೀಡಬೇಕು ಎಂದು ಮಂಜುಳಾ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪತಿ ಎಂ.ಸಿ.ಯೋಗೇಶ್ ಇದ್ದರು.
ಪ್ರತಿಕ್ರಿಯೆ: ಬಿ.ಮಲ್ಲಯ್ಯನಪುರ ಅಂಗನವಾಡಿ ಶಿಕ್ಷಕಿಯ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲನೆ ಮಾಡಲಾಗುವುದು ಎಂದು ಶಿಶು ಅಬಿವೃದ್ಧಿ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.