ಚಾಮರಾಜನಗರ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಸಭೆಯ ಚಳಿಗಾಲದ ಅಧಿವೇಶನದಲ್ಲೇ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸೇವೆಯನ್ನು ಕಾಯಂಗೊಳಿಸಬೇಕು ಮುಂತಾದ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕ ಮಂಗಳವಾರ ಇಲ್ಲಿ ಅಹೋರಾತ್ರಿ ಧರಣಿ ಆರಂಭಿಸಿತು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ನಾಗಮಣಿ ನೇತೃತ್ವದಲ್ಲಿ ಸಮಾವೇಶಗೊಂಡ ಅಂಗನವಾಡಿ ನೌಕರರು ಮೆರವಣಿಗೆಯಲ್ಲಿ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆಯ ಮಾರ್ಗವಾಗಿ ಜಿಲ್ಲಾಡಳಿತ ಭವನದ ಬಳಿ ಬಂದು ಘೋಷಣೆ ಕೂಗಿದರು.
ನಾಗಮಣಿ ಮಾತನಾಡಿ, ‘ಗುಜರಾತ್ ರಾಜ್ಯದ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿರನ್ನು ವರ್ಗ 3 ಮತ್ತು 4 ಎಂದು ಪರಿಗಣಿಸಿ ನೌಕರಿ ಕಾಯಂ ಮಾಡಬೇಕು. ಮಹಿಳಾ ಮಕ್ಕಳ ಇಲಾಖೆಯ ಐಸಿಡಿ ಆದೇಶದ ಪ್ರಕಾರ ಗ್ರಾಚ್ಯುಟಿ ಬಿಡುಗಡೆ ಮಾಡಬೇಕು. 2018 ರಿಂದ ಕೇಂದ್ರ ಸರ್ಕಾರ ಗೌರವ ಧನ ಹೆಚ್ಚಳ ಮಾಡಿಲ್ಲ. ಜೀವನ ನಿರ್ವಹಣೆ ಕಷ್ಟವಾಗಿದ್ದು, ಗೌರವ ಧನವನ್ನು ₹26,000ಕ್ಕೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.
2023ರ ವಿಧಾನಸಭಾ ಚುನಾವಣೆಯ ಸಂದರ್ಭ ಮಾಡಿದ ಘೋಷಣೆಯಂತೆ ಗೌರವ ಧನ ₹15 ಸಾವಿರಕ್ಕೆ ಹೆಚ್ಚಿಸಬೇಕು, ನಿವೃತ್ತಿಯಾದವರಿಗೆ ಇಡುಗಂಟು ಅಥವಾ ಎನ್‌ಪಿಎಸ್ ನೀಡಬೇಕು. ₹10,000 ಪಿಂಚಣಿ ನೀಡಬೇಕು, ಎಲ್‌ಕೆಜಿ, ಯುಕೆಜಿ ನಿಲ್ಲಿಸಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಶಾಲಾ ಪೂರ್ವ ಶಿಕ್ಷಣ ಆರಂಭಿಸಬೇಕು’ ಎಂದು ಒತ್ತಾಯಿಸಿದರು.
ಐಸಿಡಿಎಸ್ ಯೋಜನೆಗೆ ಪ್ರತ್ಯೇಕ ನಿರ್ದೇಶಾನಾಲಯ ರಚಿಸಬೇಕು, ನಗರಸಭೆ, ಪಾಲಿಕೆ, ಮಹಾನಗರ ಪಾಲಿಕೆ, ವಿಧಾನಸಭೆ, ಲೋಕಸಭಾ ಚುನಾವಣೆಗಳಿಗೆ ಮತದಾರರನ್ನು ಗುರುತಿಸಿ ಹೆಸರು ಸೇರಿಸುವಿಕೆ, ಅನರ್ಹಗೊಳಿಸುವಿಕೆ ಸಹಿತ ಚುನಾವಣಾ ಸಂಬಂಧಿ ಕೆಲಸಗಳಿಂದ ಮುಕ್ತಿ ನೀಡಿ ಅಂಗನವಾಡಿ ಕೇಂದ್ರದ ಕೆಲಸಗಳಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು.
ಸಾಮೂಹಿಕ ಆರೋಗ್ಯ ವಿಮೆ ನೀಡಬೇಕು, ಅಂಗನವಾಡಿ ಕೇಂದ್ರಗಳಿಗೆ ಕೊಡುವ ಪೂರಕ ಪೌಷ್ಟಿಕ ಆಹಾರಕ್ಕೆ ಜಿಎಸ್‌ಟಿ ವಿನಾಯಿತಿ ನೀಡಬೇಕು, ಘಟಕ ವೆಚ್ಚ ಹೆಚ್ಚಳ ಮಾಡಿ ಹಿಂದಿನಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆಹಾರ ಅಂತಿಮಗೊಳಿಸುವ ವ್ಯವಸ್ಥೆ ಜಾರಿಯಾಗಬೇಕು.
ಅಂಗನವಾಡಿ ಕೇಂದ್ರಗಳಿಗೆ ಸೌಕರ್ಯ ಒದಗಿಸಬೇಕು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು, ಸರ್ಕಾರಿ ಆದೇಶದಂತೆ ಮುಂಬಡ್ತಿ, ವರ್ಗಾವಣೆ ನೀಡಬೇಕು. ಮೊಟ್ಟೆ, ಗ್ಯಾಸ್, ತರಕಾರಿ ಖರೀದಿಗೆ ಮುಂಗಡ ಹಣ ನೀಡಬೇಕು, ಪೌಷ್ಟಿಕ ಆಹಾರ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣವು ಶಿಕ್ಷಣ ಹಕ್ಕಿನ ಭಾಗವಾಗಬೇಕು ಎಂದು ಒತ್ತಾಯಿಸಿದರು.
ಸಂಘದ ಖಜಾಂಚಿ ಜಿ.ಭಾಗ್ಯಾ, ಕಾರ್ಯದರ್ಶಿ ಶಾಯಿದಾ ಭಾನು, ಖಜಾಂಚಿ ಗುರುಲಿಂಗಮ್ಮ, ಪಾರ್ವತಮ್ಮ, ಜಯಮಾಲ, ತುಳಸಮ್ಮ, ಮೀನಾಕ್ಷಿ, ಕೆಂಪಮ್ಮ, ಸುಜಿಯಾ, ಸುಮಿತ್ರಾ, ಗುರುಮಲ್ಲಮ್ಮ, ಶಾಂತಮ್ಮ, ಸುಂದ್ರಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.