ADVERTISEMENT

ಚಾಮರಾಜನಗರ: 2ನೇ ದಿನವೂ ಅಂಗನವಾಡಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 13:14 IST
Last Updated 17 ಆಗಸ್ಟ್ 2021, 13:14 IST
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರು ಮಂಗಳವಾರವೂ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರು ಮಂಗಳವಾರವೂ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ವೇತನ ಹೆಚ್ಚಳ, ಸೇವೆ ಕಾಯಂ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮಂಗಳವಾರವೂ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಎದುರು ಸೇರಿದ ಪ್ರತಿಭಟನಕಾರರು, ಧರಣಿ ಕುಳಿತು ಬೇಡಿಕೆ ಈಡೇರಿಕೆಗಾಗಿ ಘೋಷಣೆಗಳನ್ನು ಕೂಗಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರೇ ಮೊಟ್ಟೆ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು. ಇಲಾಖೆಯಿಂದಲೇ ಮೊಟ್ಟೆ ಪೂರೈಕೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ADVERTISEMENT

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಫಾರಸು ಮಾಡಿರುವ ₹1.39 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಕೋವಿಡ್‌ನಿಂದಾಗಿ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಯರ ಕುಟುಂಬಗಳ ಸದಸ್ಯರಿಗೆ ಕಾರ್ಯಕರ್ತೆ ಅಥವಾ ಸಹಾಯಕಿ ಹುದ್ದೆ ನೀಡಬೇಕು. ಮೃತಪಟ್ಟವರ ಕುಟುಂಬಗಳಿಗೆ ₹30 ಲಕ್ಷ ಸಹಾಯ ಧನ ನೀಡಬೇಕು. ಕೋವಿಡ್‌ ಸಂದರ್ಭದಲ್ಲಿ ಮಾಡುತ್ತಿರುವ ಕೆಲಸಕ್ಕೆ ₹10 ಸಾವಿರ ಅಪಾಯ ಭತ್ಯೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷೆ ಕೆ.ಸುಜಾತ, ತಾಲ್ಲೂಕು ಸಮಿತಿಯ ಸಂತೇಮರಹಳ್ಳಿ ಅಧ್ಯಕ್ಷೆ ಜಯಮಾಲ, ಕಾರ್ಯದರ್ಶಿ ಎಸ್.ಪಾರ್ವತಮ್ಮ, ಖಜಾಂಚಿ ಎಲ್ ಕಾಂಚನ, ಕೆ.ಬಿ.ಮೀನಾ, ಮಮತ, ಅನಿತಾಶಾಂತಮ್ಮ, ತುಳಸಮ್ಮ, ಭಾಗ್ಯ, ಸಿ.ಮೀನಾಕ್ಷಿ, ಮಂಜುಳ, ಮಹದೇವಮ್ಮ, ನಿರ್ಮಲಮುನವಳ್ಳಿ, ಕೆಂಪಮ್ಮ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.