ADVERTISEMENT

ಆರೋಗ್ಯ ಸೇತು: ಲಕ್ಷ ಡೌನ್‌ಲೋಡ್‌ ಗುರಿ

42 ಸಾವಿರ ಮಂದಿಯಿಂದ ಡೌನ್‌ಲೋಡ್, ಜಿಲ್ಲಾಡಳಿತದಿಂದ ಜನರಲ್ಲಿ ಜಾಗೃತಿ

ಸೂರ್ಯನಾರಾಯಣ ವಿ
Published 9 ಮೇ 2020, 2:22 IST
Last Updated 9 ಮೇ 2020, 2:22 IST
ಆರೋಗ್ಯ ಸೇತು
ಆರೋಗ್ಯ ಸೇತು   

ಚಾಮರಾಜನಗರ: ಕೋವಿಡ್‌–19ಗೆ ತುತ್ತಾಗಿರುವ ವ್ಯಕ್ತಿಗಳ ಮೇಲೆ ನಿಗಾ ಇಡುವುದಕ್ಕಾಗಿ ಕೇಂದ್ರ ಅಭಿವೃದ್ಧಿ ಪಡಿಸಿಸಿರುವ ಆರೋಗ್ಯ ಸೇತುವನ್ನು ಜಿಲ್ಲೆಯಲ್ಲೂ ಸಾರ್ವಜನಿಕರು ಕಡ್ಡಾಯವಾಗಿ ಡೌನ್‌ಲೋಡ್‌ ಮಾಡಿಕೊಳ್ಳಲು ಜಿಲ್ಲಾಡಳಿತ ಸೂಚಿಸಿದ್ದು, ಒಂದು ಲಕ್ಷ ಡೌನ್‌ಲೋಡ್‌ನ ಗುರಿ ಹಾಕಿಕೊಂಡಿದೆ.

ಜಿಲ್ಲೆಯಲ್ಲಿ ಇದುವರೆಗೆ 42 ಸಾವಿರ ಮಂದಿ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದು, ಎಲ್ಲ ಸರ್ಕಾರಿ ನೌಕರರು, ಸ್ವಯಂ ಸೇವರು, ಖಾಸಗಿ ಸಂಸ್ಥೆಗಳ ಸಿಬ್ಬಂದಿ ಸೇರಿದಂತೆ ಸ್ಮಾರ್ಟ್‌ಫೋನ್‌ ಹೊಂದಿರುವ ಎಲ್ಲರೂ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಮಾಹಿತಿ ಕೇಂದ್ರ ಅಭಿವೃದ್ಧಿ ಪಡಿಸಿರುವ ಈ ಆ್ಯಪ್‌ ಅನ್ನು ಏಪ್ರಿಲ್‌ 2ರಂದು ಬಿಡುಗಡೆ ಮಾಡಲಾಗಿದೆ. ದೇಶದಾದ್ಯಂತ ಇದುವರೆಗೆ 9 ಕೋಟಿಗೂ ಅಧಿಕ ಮಂದಿ ಇದನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಎಲ್ಲ ಸ್ಮಾರ್ಟ್‌ಫೋನ್‌ ಬಳಕೆದಾರರು ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

ADVERTISEMENT

ನಮ್ಮ ಸುತ್ತಮುತ್ತಲಿರುವ ಕೋವಿಡ್‌–19 ಬಾಧಿತರ ಬಗ್ಗೆ ಈ ಆ್ಯಪ್‌ ಮೂಲಕ ಮಾಹಿತಿ ಪಡೆಯಬಹುದು. ಕೊರೊನಾ ವೈರಸ್ ಸೋಂಕಿತರು ಸಮೀಪದಲ್ಲಿದ್ದರೆ ಫೋನ್‌ ಬಳಕೆದಾರರನ್ನು ಎಚ್ಚರಿಸುತ್ತದೆ. ಬ್ಲೂಟೂತ್‌ ಹಾಗೂ ಜಿಪಿಎಸ್‌ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುವ ಈ ತಂತ್ರಾಂಶ‌ವು ತನ್ನ ಸಮೀಪದಲ್ಲಿರುವ ಎಲ್ಲ ಆರೋಗ್ಯ ಸೇತು ಬಳಕೆದಾರರ ಮಾಹಿತಿಯನ್ನು ದಾಖಲಿಸುತ್ತದೆ.

42 ಸಾವಿರ ಡೌನ್‌ಲೋಡ್‌

‘ಜನರು ಆರೋಗ್ಯ ಸೇತು ಬಳಸುವಂತೆ ಮಾಡಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಜಿಲ್ಲೆ ಒಂದು ಲಕ್ಷ ಮಂದಿ ಡೌನ್‌ಲೋಡ್‌ ಮಾಡಬೇಕು ಎಂಬ ಗುರಿ ಇಟ್ಟುಕೊಂಡಿದ್ದೇವೆ. ಇದುವರೆಗೆ 42 ಸಾವಿರ ಜನರು ಬಳಕೆ ಆರಂಭಿಸಿದ್ದಾರೆ. ನಾವು ಗುರಿಯನ್ನು ಈಗಾಗಲೇ ತಲುಪಬೇಕಿತ್ತು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಮಾಹಿತಿ ನೀಡಿದರು.

ಈ ವಿಚಾರವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಎಲ್ಲ ಸರ್ಕಾರಿ ನೌಕರರು ಕಡ್ಡಾಯವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬೇಕು ಎಂದು ಇಲಾಖೆಯ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇನೆ. ಯಾವುದಾದರೂ ಇಲಾಖೆಯ ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿ ಆ್ಯಪ್‌ ಹಾಕಿಸಿಕೊಳ್ಳದಿದ್ದರೆ ಮುಖ್ಯಸ್ಥರಿಗೆ ನೋಟಿಸ್‌ ನೀಡುವ ಎಚ್ಚರಿಕೆ ನೀಡಲಾಗಿದೆ’ ಎಂದು ಅವರು ಹೇಳಿದರು.

‘ಸಾರ್ವಜನಿಕರಲ್ಲಿ ಈ ಆ್ಯಪ್‌ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾಡಳಿತ ಭವನದ ದ್ವಾರದಲ್ಲಿ ಮಾಹಿತಿ ಕೇಂದ್ರವನ್ನೇ ತೆರೆದಿದ್ದೇವೆ. ಶಿಕ್ಷಕರು, ಆರೋಗ್ಯ ಕಾರ್ಯಕರ್ತರ ಮೂಲಕ ಸಾರ್ವಜನಿಕರಲ್ಲಿ ತಿಳಿ ಹೇಳಲಾಗುತ್ತಿದೆ’ ಎಂದು ವಿವರಿಸಿದರು.

‘ವಾರ್ತಾ ಇಲಾಖೆಯ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರೊನಾ ಸೈನಿಕರು,ಆಸ್ಪತ್ರೆ, ಬ್ಯಾಂಕ್‌ಗಳು, ಜಿಲ್ಲಾಡಳಿತ ಭವನ ಸೇರಿದಂತೆ ಹೆಚ್ಚು ಜನರು ಇರುವ ಪ್ರದೇಶಗಳಲ್ಲಿ ಜನರಿಗೆ ತಿಳಿವಳಿಕೆ ನೀಡಿ, ಮೊಬೈಲ್‌ಗಳಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ. ಸ್ವಯಂ ಸೇವಾ ಸಂಸ್ಥೆಗಳೂ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ’ ಎಂದು ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಎ.ರಮೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಐಒಎಸ್ ಕಾರ್ಯನಿರ್ವಹಣಾ ತಂತ್ರಾಂಶ ಹೊಂದಿರುವ ಫೋನ್‌ಗಳಲ್ಲಿ (ಐಫೋನ್‌) ಮತ್ತು ಆಂಡ್ರಾಯ್ಡ್ ಫೋನ್‌ಗಳಲ್ಲಿ ಆರೋಗ್ಯ ಸೇತು ಲಭ್ಯವಿದೆ.

ಔಷಧ ಅಂಗಡಿಗಳು, ಖಾಸಗಿ ಕ್ಲಿನಿಕ್‌ಗಳಿಗೂ ಸೂಚನೆ

ಔಷಧ ಅಂಗಡಿಗಳಿಗೆ ಔಷಧ ಖರೀದಿಸಲು ಬರುವ ಪ್ರತಿ ಗ್ರಾಹಕರಿಗೂ ಆ್ಯಪ್‌ ಬಗ್ಗೆ ತಿಳಿಹೇಳಿ, ಅದನ್ನು ಡೌನ್‌ಲೋಡ್‌ ಮಾಡಲು ಸಹಾಯ ಮಾಡಬೇಕು ಎಂದು ಅಂಗಡಿಗಳ ಮಾಲೀಕರಿಗೆ ಸೂಚಿಸಲು ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

‘ಇದರ ಜೊತೆಗೆ ಖಾಸಗಿ ಕ್ಲಿನಿಕ್‌ಗಳಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಲು ತಿಳಿಸುವಂತೆ ವೈದ್ಯರಿಗೆ ತಿಳಿಸಲಾಗುವುದು. ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಬರುತ್ತಿರುವ ಕಾರ್ಮಿಕರ ಬಳಿ ಸ್ಮಾರ್ಟ್‌ಫೋನ್‌ ಇದ್ದರೆ, ಅವರು ಕೂಡ ಡೌನ್‌ ಲೋಡ್‌ ಮಾಡುವಂತೆ ಮಾಡಲು ಸೂಚನೆ ನೀಡಿದ್ದೇನೆ’ ಎಂದು ಡಾ.ಎಂ.ಆರ್.ರವಿ ಅವರು ಹೇಳಿದರು.

---

ಸ್ಮಾರ್ಟ್‌ ಫೋನ್‌ ಬಳಕೆದಾರರು ತ‌ಮ್ಮ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಸೇತು ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು
-ಡಾ.ಎಂ.ಆರ್.ರವಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.