ಮೂಡ್ನಾಕೂಡು ಪ್ರಕಾಶ್
ಚಾಮರಾಜನಗರ: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಕಲಬುರಗಿಯಲ್ಲಿ ದಿಗ್ಬಂಧನ ಹಾಕಿದೆ ಕಾಂಗ್ರೆಸ್ ಪಕ್ಷದ ಗೂಂಡಾಗಳನ್ನು ಕೂಡಲೇ ಬಂಧಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಛಲವಾದಿ ನಾರಾಯಣಸ್ವಾಮಿ ಅವರಿಗೆ ಹಲವು ತಾಸು ದಿಗ್ಬಂಧನ ಹಾಕಿರುವುದು ಖಂಡನೀಯ. ವಿರೋಧ ಪಕ್ಷದ ನಾಯಕನಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಕಾಂಗ್ರೆಸ್ ಸರ್ಕರ ವಿಫಲವಾಗಿದ್ದು ಘಟನೆಗೆ ಕಾರಣರಾದ ಪ್ರಿಯಾಂಕ್ ಖರ್ಗೆಯನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ವಿರೋಧ ಪಕ್ಷದ ನಾಯಕನ ಹುದ್ದೆಯು ಹೆಚ್ಚು ಘನತೆ ಹಾಗೂ ಮಹತ್ವ ಹೊಂದಿದ್ದರೂ ಪೊಲೀಸರು ಸೂಕ್ತ ಭದ್ರತೆ ನೀಡಲು ವಿಫರಾಗಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆಯ ಏಜೆಂಟರಂತೆ ಪೊಲೀಸರು ವರ್ತಿಸುತ್ತಿದ್ದು ಕಾಂಗ್ರೆಸ್ ಕಾರ್ಯಕರ್ತರ ಪುಂಡಾಟಗಳನ್ನು ನಿಯಂತ್ರಿಸಲಾಗುತ್ತಿಲ್ಲ ಎಂದು ಲೇವಡಿ ಮಾಡಿದರು.
ಖರ್ಗೆ ಕುಟುಂಬ ಹಿಂದೆ ಕೆಐಎಡಿಬಿಯಿಂದ ನಿಯಮಬಾಹಿರವಾಗಿ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ 5 ಎಕರೆ ಭೂಮಿ ಪಡೆದಿರುವುದನ್ನು ಪ್ರಶ್ನಿಸಿದ್ದ ಛಲವಾದಿ ನಾರಾಯಣಸ್ವಾಮಿ ಹಗರಣವನ್ನು ಬಯಲಿಗೆಳೆದು ಜಮೀನು ವಾಪಸ್ ಮಾಡುವಂತೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಖರ್ಗೆ ಕುಟುಂಬ ಸೇಡಿನ ರಾಜಕಾರಣ ಮಾಡುತ್ತಿದ್ದು ನಾರಾಯಣಸ್ವಾಮಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡಿದೆ ಎಂದು ಟೀಕಿಸಿದರು.
ಸಂವಿಧಾನ ರಕ್ಷಣೆ ಮಾಡುವುದಾಗಿ ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ಸಿಗರು ಕಲಬುರಗಿಯಲ್ಲಿ ಸಂವಿಧಾನ ವಿರೋಧಿ ಕೃತ್ಯ ಎಸಗಿದ್ದು ನಿಜ ಬಣ್ಣ ಬಯಲಾಗಿದೆ. ಜನಪ್ರತಿನಿಧಿ ಹಾಗೂ ವಿರೋಧ ಪಕ್ಷದ ನಾಯಕನ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೆಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಕಾಡಳ್ಳಿ ಕುಮಾರ್, ಸಹ ವಕ್ತಾರ ಮಂಜುನಾಥ್, ಎಸ್‌ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಂಬಳ್ಳಿ ರಾಮಣ್ಣ, ಜಿಲ್ಲಾ ಮಾಧ್ಯಮ ಸಹ ಪ್ರಮುಖ್ ರಾಮಸಮುದ್ರ ಶಿವಣ್ಣ, ವೇಣುಗೋಪಾಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.