ADVERTISEMENT

ಬಂಡೀಪುರ: ಕಾಡಂಚಿನ ರೈತರಿಗೆ ಉಚಿತ ಸಫಾರಿ

ಕೃಷಿಕರಲ್ಲಿ ಕಾಡು, ವನ್ಯಪ್ರಾಣಿಗಳು, ಕಾಳ್ಗಿಚ್ಚಿನ ಬಗ್ಗೆ ಅರಿವು ಮೂಡಿಸುವ ಯತ್ನ

ಮಲ್ಲೇಶ ಎಂ.
Published 22 ಜನವರಿ 2020, 19:45 IST
Last Updated 22 ಜನವರಿ 2020, 19:45 IST
ಬಾಲಚಂದ್ರ
ಬಾಲಚಂದ್ರ   

ಗುಂಡ್ಲುಪೇಟೆ: ಬೇಸಿಗೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಕಾಳ್ಗಿಚ್ಚಿನಿಂದ ರಕ್ಷಿಸಲು ಹಲವು ಕ್ರಮಗಳನ್ನು ಕೈಗೊಂಡಿರುವ ಅರಣ್ಯ ಇಲಾಖೆ, ಮುಂದುವರಿದ ಭಾಗವಾಗಿ ಕಾಡಂಚಿನ ಪ್ರದೇಶದ ರೈತರಿಗೆ ಉಚಿತವಾಗಿ ಸಫಾರಿ ವ್ಯವಸ್ಥೆ ಮಾಡಲು ಮುಂದಾಗಿದೆ.

ಕೃಷಿಕರಲ್ಲಿ ಕಾಡು, ವನ್ಯ ಪ್ರಾಣಿಗಳ ಬಗ್ಗೆ ಆಸಕ್ತಿ ಮೂಡಿಸುವುದು ಹಾಗೂ ಅರಣ್ಯ ಪ್ರದೇಶ ತಮ್ಮದು ಎಂಬ ಭಾವನೆಯನ್ನು ಮೂಡಿಸುವ ಉದ್ದೇಶದಿಂದ ಅಧಿಕಾರಿಗಳು ಈ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ವಾರದಲ್ಲಿ ಒಂದು ದಿನ ರೈತರು ಹಾಗೂ ಅವರ ಕುಟುಂಬದ ಸದಸ್ಯರನ್ನು ಉಚಿತವಾಗಿ ಸಫಾರಿಗೆ ಕರೆದೊಯ್ಯಲಾಗುತ್ತದೆ. ಇದಕ್ಕೆ ಸೋಮವಾರವನ್ನು ದಿನನಿಗದಿ ಮಾಡಲಾಗಿದೆ.

ADVERTISEMENT

ಕಾಡಂಚಿನಲ್ಲಿರುವ ಪ್ರಗತಿಪರ ರೈತರು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಥವಾ ಕೃಷಿ ಇಲಾಖೆ ವತಿಯಿಂದ ನೀಡಿರುವ ಗುರುತಿನ ಚೀಟಿ ತೋರಿಸಿದರೆ‌ ಸಾಕು. ಅಂಥವರನ್ನು ಉಚಿತವಾಗಿ ಕಾಡಿಗೆ ಕರೆದುಕೊಂಡು ಹೋಗಿ ಅರಣ್ಯದ ಮಹತ್ವ ಮತ್ತು ಕಾಡಿನಿಂದ ರೈತರಿಗೆ ಆಗುವ ಪ್ರಯೋಜನಗಳನ್ನು ಇಲಾಖೆಯ ಸಿಬ್ಬಂದಿ ವಿವರಿಸಲಿದ್ದಾರೆ.

‘ಇಲಾಖೆಯ ಅಧಿಕಾರಿಗಳು ಕಾಡನ್ನು ಸುತ್ತಿ ಎಷ್ಟೇ ಬಂದೋಬಸ್ತ್ ಮಾಡಿದರೂ, ಸಿಬ್ಬಂದಿಯಿಂದ ಮಾತ್ರ ಕಾಡಿನ ರಕ್ಷಣೆ ಸಾಧ್ಯವಿಲ್ಲ. ಕಾಡಂಚಿನಲ್ಲಿರುವ ರೈತರು ಅರಣ್ಯದ ಬಗ್ಗೆ ತಿಳಿವಳಿಕೆ ಮೂಡಿಸಿಕೊಂಡರೆ ಅರಣ್ಯ ಸಂಪತ್ತು ರಕ್ಷಣೆಯಾಗುವುದರಲ್ಲಿ ಎರಡು ಮಾತಿಲ್ಲ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಕಾಡಂಚಿನ ರೈತರು ತೊಂದರೆ ಅನುಭವಿಸುತ್ತಾ ಇರುತ್ತಾರೆ. ಇದರಿಂದ ಇಲಾಖೆಯ ಅಧಿಕಾರಿಗಳು ಹಾಗೂ ರೈತರ ನಡುವೆ ಘರ್ಷಣೆ ನಡೆಯುತ್ತಲೇ ಇರುತ್ತದೆ.ಕಳೆದ ವರ್ಷ ಕುರಿ, ಮೇಕೆಗಳ ಮೇಲೆ ಹುಲಿ, ಚಿರತೆ ದಾಳಿ ಮಾಡುತ್ತಿದೆ ಎಂಬ ಕಾರಣದಿಂದ ಕಿಡಿಗೇಡಿಗಳು ಬಂಡೀಪುರದ ವಿವಿಧ ಕಡೆಗಳಲ್ಲಿ ಬೆಂಕಿ ಇಟ್ಟಿದ್ದರು. ಇದರಿಂದ 11 ಸಾವಿರಕ್ಕೂ ಹೆಚ್ಚು ಎಕರೆ ಕಾಡು ಭಸ್ಮವಾಗಿತ್ತು.ಈ ಬಾರಿ ಕಾಳ್ಗಿಚ್ಚು ಉಂಟಾಗಲೇ ಬಾರದು ಎಂದು ಪಣ ತೊಟ್ಟಿರುವ ಅರಣ್ಯ ಇಲಾಖೆ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ.

ಅರಣ್ಯಾಧಿಕಾರಿಗಳು ಕಾಡಂಚಿನ ಕೃಷಿಕರಿಗೆ ಉಚಿತವಾಗಿ ಸಫಾರಿ ವ್ಯವಸ್ಥೆ ಮಾಡುವುದರಿಂದ ಇಲಾಖೆಯ ಜೊತೆಗೆ ರೈತರ ಬಾಂಧವ್ಯ ವೃದ್ಧಿಯಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿರುವ ಜನರಿಗೆ ಕಾಡು ನಮ್ಮದು ಎಂಬ ಮನೋಭಾವನೆ ಬರಬೇಕು ಎಂದು ಈ ವ್ಯವಸ್ಥೆ ಮಾಡಿದ್ದೇವೆ. ಇಲಾಖೆಗೆ ಪತ್ರವನ್ನೂ ಬರೆದಿದ್ದೇನೆ
ಟಿ.ಬಾಲಚಂದ್ರ, ಹುಲಿ ಯೋಜನೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.