ADVERTISEMENT

ಬಂಡೀಪುರ ಅರಣ್ಯದ ವನ್ಯಜೀವಿಗಳ ಜೊತೆ ಹುಚ್ಚು ಸಾಹಸ: ಪ್ರಾಣಕ್ಕೆ ಸಂಚಕಾರ

ಬಂಡೀಪುರ ಅರಣ್ಯದೊಳಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವ ಪ್ರವಾಸಿಗರು

ಮಲ್ಲೇಶ ಎಂ.
Published 12 ಆಗಸ್ಟ್ 2025, 7:52 IST
Last Updated 12 ಆಗಸ್ಟ್ 2025, 7:52 IST
ಬಂಡಿಪುರ ಅರಣ್ಯ ವ್ಯಾಪ್ತಿಯಲ್ಲಿ ಆನೆಯ ಫೋಟೊ ತೆಗೆಯಲು ವಾಹನದಿಂದ ಇಳಿದಿರುವ ಪ್ರವಾಸಿಗರು (ಸಂಗ್ರಹ ಚಿತ್ರ)
ಬಂಡಿಪುರ ಅರಣ್ಯ ವ್ಯಾಪ್ತಿಯಲ್ಲಿ ಆನೆಯ ಫೋಟೊ ತೆಗೆಯಲು ವಾಹನದಿಂದ ಇಳಿದಿರುವ ಪ್ರವಾಸಿಗರು (ಸಂಗ್ರಹ ಚಿತ್ರ)   

ಗುಂಡ್ಲುಪೇಟೆ: ವನ್ಯಜೀವಿಗಳ ಫೋಟೊ ಹಾಗೂ ವಿಡಿಯೊಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಹಪಾಹಪಿಗೆ ಬಿದ್ದಿರುವ ಕೆಲವರು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಕಾಡಿನೊಳಗೆ ಹಾದುಹೋಗಿರುವ ಹೆದ್ದಾರಿಗಳಲ್ಲಿ ಪ್ರಾಣಿಗಳನ್ನು ಕಂಡಾಕ್ಷಣ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಹುಚ್ಚು ಸಾಹಸ ಮಾಡಲು ಹೋಗಿ ಹಲವರು ಬಲಿಯಾಗಿದ್ದಾರೆ, ಕೆಲವರು ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಸಂಪರ್ಕ ಕಲ್ಪಿಸಿದ್ದು ಅರಣ್ಯದೊಳಗೆ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿವೆ. ಉಭಯ ರಾಜ್ಯಗಳಿಗೆ ತೆರಳುವವರು ಹೆದ್ದಾರಿಯಲ್ಲಿ ಸಂಚಾರ ಮಾಡುವಾಗ ಪ್ರಾಣಿಗಳನ್ನು ಕಂಡಾಕ್ಷಣ ಕೆಲಕಾಲ ವಾಹನಗಳನ್ನು ನಿಲ್ಲಿಸಿ ಹತ್ತಿರದಿಂದ ಫೋಟೊ, ವಿಡಿಯೋ ಸೆರೆಹಿಡಿಯಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಪ್ರವಾಸಿಗರು ವಾಹನಗಳಲ್ಲಿ ಹೋಗುವಾಗ ರಸ್ತೆ ಬದಿಯಲ್ಲಿ ಹೆಚ್ಚಾಗಿ ಕಾಣಸಿಗುವ ಆನೆ, ಜಿಂಕೆ, ಕಾಡೆಮ್ಮೆ, ಕರಡಿ ಹಾಗೂ ಅಪರೂಪಕ್ಕೆ ಕಾಣುವ ಹುಲಿ, ಚಿರತೆಗಳನ್ನು ನೋಡಿದ ಕೂಡಲೇ ವಾಹನಗಳಿಂದ ಕೆಳಗಿಳಿದು ಕಾಡಿನೊಳಗೆ ತೆರಳಿ ಫೋಟೊ ಹಾಗೂ ವಿಡಿಯೋ ಮಾಡಲು ಮುಂದಾಗುತ್ತಿದ್ದು ಈ ಸಂದರ್ಭ ಪ್ರಾಣಿಗಳು ದಾಳಿ ಮಾಡುತ್ತಿವೆ.

ADVERTISEMENT

ಭಾನುವಾರವಷ್ಟೆ ಪೋಟೋ ತೆಗೆಯಲು ಹೋಗಿದ್ದ ನಂಜನಗೂಡು ಮೂಲದ ವ್ಯಕ್ತಿಯೊಬ್ಬರು ಆನೆ ದಾಳಿಗೆ ಒಳಗಾಗಿದ್ದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಈಗಾಗಲೇ ಆನೆ ದಾಳಿಯಂತಹ ಹಲವು ಘಟನೆಗಳು ನಡೆದಿದ್ದರೂ ಪ್ರವಾಸಿಗರು ಎಚ್ಚೆತ್ತುಕೊಂಡಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಕಾಡು ಪ್ರವೇಶಕ್ಕೂ ಮುನ್ನವೇ ಪ್ರವಾಸಿಗರಿಗೆ ಕಾಡಿನಲ್ಲಿ ವಾಹನಗಳನ್ನು ನಿಲ್ಲಿಸಬಾರದು, ಪ್ರಾಣಿಗಳಿಗೆ ಆಹಾರ ನೀಡಬಾರದು, ಪೋಟೋ ವಿಡಿಯೋ ಮಾಡಬಾರದು ಎಂಬ ಸೂಚನೆಗಳನ್ನು ನೀಡಿದರೂ ಕೆಲವರು ಪಾಲಿಸುತ್ತಿಲ್ಲ. ರಸ್ತೆ ಬದಿಯಲ್ಲಿ ಮೇಯುವ ಆನೆ, ಜಿಂಕೆ, ಕಡವೆ, ಕಾಡಮ್ಮೆಗಳು ಕಂಡಕೂಡಲೇ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿ ಪೋಟೊ ತೆಗೆಯುತ್ತಿದ್ದಾರೆ. ಜಿಂಕೆ, ಕಡವೆ, ಕೋತಿಗಳಿಗೆ ತಿಂಡಿ ನೀಡುತ್ತಿದ್ದು ದಾಳಳಿಗೆ ಒಳಗಾಗುತ್ತಿದ್ದಾರೆ. ಜೊತೆಗೆ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ಇತರೆ ಸವಾರರಿಗೂ ತೊಂದರೆ ನೀಡುತ್ತಿದ್ದಾರೆ ಎಂದು ಎಸಿಎಫ್‌ ನವೀನ್ ಕುಮಾರ್ ಹೇಳಿದರು.

ಕಾಡಿನಲ್ಲಿ ಹಾದು ಹೋಗಿರುವ ರಸ್ತೆಯಲ್ಲಿ ವಾಹನ ನಿಲ್ಲಿಸುವಂತಿಲ್ಲ. ಪ್ರಾಣಿಗಳಿಗೆ ತಿಂಡಿತಿನಿಸು ನೀಡುವಂತಿಲ್ಲ, ಪ್ರಾಣಿಗಳ ಪೋಟೊ ತೆಗೆಯುವಂತಿಲ್ಲ, ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವಂತಿಲ್ಲ ಎಂಬ ಎಚ್ಚರಿಕೆ ಫಲಕಗಳನ್ನು ಹಾದಿಯುದ್ದಕ್ಕೂ ಅಳವಡಿಕೆ ಮಾಡಲಾಗಿದೆ. ಆದರೂ ಕೆಲವರು ನಿಯಮ ಪಾಲಿಸುತ್ತಿಲ್ಲ ಎಂದು ಎಸಿಎಫ್ ಅಸಮಾಧಾನ ವ್ಯಕ್ತಪಡಿಸಿದರು.

ಗಸ್ತು ಹೆಚ್ಚಿಸಲು ಒತ್ತಾಯ: ಪ್ರವಾಸಿಗರು ಪ್ರಾಣಿಗಳಿಗೆ ತಿಂಡಿಗಳನ್ನು ನೀಡಿ ಅಭ್ಯಾಸ ಮಾಡುತ್ತಿರುವುದರಿಂದ ಕೋತಿ, ಜಿಂಕೆಗಳು ಪ್ರವಾಸಿಗರ ವಾಹನಗಳು ಬರುವುದನ್ನೇ ಕಾಯುವುದನ್ನು ರೂಢಿಸಿಕೊಳ್ಳುತ್ತಿವೆ. ಹಲವು ಬಾರಿ ಕೋತಿಗಳು ವಾಹನಗಳ ಒಳಗಿರುವ ವಸ್ತುಗಳನ್ನು ಎತ್ತಿಕೊಂಡು ಹೋಗುತ್ತವೆ. ಈ ಮೂಲಕ ಪ್ಲಾಸ್ಟಿಕ್ ವನ್ಯಜೀವಿಗಳ ಹೊಟ್ಟೆ ಸೇರುತ್ತಿದ್ದು ಪರಿಸರಕ್ಕೂ ಹಾನಿಯಾಗುತ್ತಿದೆ ಎಂದು ವನ್ಯಜೀವಿ ಛಾಯಾಗ್ರಾಹಕ ರಾಬಿನ್ಸನ್ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ವಾಹನ ಸವಾರರ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು. ಹೆದ್ದಾರಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಗಸ್ತು ಹೆಚ್ಚಿಸಬೇಕು. ಈ ರೀತಿ ಮಾಡಿದರೆ ಕಾಡು ಹಾಗೂ ವನ್ಯಜೀವಿಗಳ ಸುರಕ್ಷತೆಯ ಜತೆಗೆ ನಿಯಮಗಳ ಉಲ್ಲಂಘನೆ ತಪ್ಪಿಸಬಹುದು ಎನ್ನುತ್ತಾರೆ ಮಂಗಲ ಉಮೇಶ್.

‘ಮರಿಯಾನೆ ಜೊತೆಗಿದ್ದಾಗ ದಾಳಿ ಸಾಧ್ಯತೆ ಹೆಚ್ಚು’

ತಾಯಾನೆ ಮರಿಯಾನೆಯ ಜೊತೆಗಿದ್ದಾಗ ಫೋಟೊ ತೆಗೆಯುವುದು ವಿಡಿಯೋ ಮಾಡುವುದನ್ನು ಮಾಡಬಾರದು. ಮರಿಯ ರಕ್ಷಣೆ ಮಾಡಲು ಆನೆಗಳು ವಾಹನಗಳ ಮೇಲೆ ಹಾಗೂ ಸವಾರರ ಮೇಲೆ ದಾಳಿ ಮಾಡಲು ಮುಂದಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹೆದ್ದಾರಿಯಲ್ಲಿ ಸಂಚಾರ ಮಾಡುವಾಗ ಪ್ರಾಣಿಗಳನ್ನು ಕಂಡರೆ ವಾಹನ ನಿಲ್ಲಿಸಬಾರದು ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತಿದೆ ಎಂದು ಬಂಡೀಪುರ ಎಸಿಎಫ್ ನವೀನ್ ಕುಮಾರ್ ’ಪ್ರಜಾವಾಣಿ‘ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.