ADVERTISEMENT

ಬಂಡೀಪುರ: ಹೆಚ್ಚಿದ ಪ್ರವಾಸಿಗರು, ಆದಾಯವೂ ಏರುಮುಖ

ಬಂಡೀಪುರ: 2023ರ ಏ.9ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ

ಪ್ರಜಾವಾಣಿ ವಿಶೇಷ
Published 14 ಜನವರಿ 2024, 21:37 IST
Last Updated 14 ಜನವರಿ 2024, 21:37 IST
ಬಂಡೀಪುರದಲ್ಲಿ ಸಫಾರಿಗೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ
ಬಂಡೀಪುರದಲ್ಲಿ ಸಫಾರಿಗೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ   

ಚಾಮರಾಜನಗರ: ದೇಶದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ 2023–24ನೇ ಸಾಲಿನಲ್ಲಿ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ ಮತ್ತು ಆದಾಯದಲ್ಲಿ ಗಣನೀಯ ಏರಿಕೆಯಾಗಿದೆ.

ಆರ್ಥಿಕ ವರ್ಷ ಕೊನೆಗೊಳ್ಳಲು ಇನ್ನೂ ಎರಡೂವರೆ ತಿಂಗಳು ಬಾಕಿ ಇದ್ದು, ಈಗಾಗಲೇ, ಬಂದಿರುವ ಆದಾಯ ಮತ್ತು ಪ್ರವಾಸಿರ ಸಂಖ್ಯೆಯು ವಾರ್ಷಿಕ ಸರಾಸರಿಯನ್ನು ಮೀರಿವೆ.

2023ರ ಏ.1ರಿಂದ ಈವರೆಗೆ 1.45 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, ₹15 ಕೋಟಿ ಆದಾಯ ಬಂದಿದೆ. ಸಾಮಾನ್ಯವಾಗಿ ಪ್ರತಿ ವರ್ಷ 1.20 ಲಕ್ಷದಿಂದ 1.30 ಲಕ್ಷದವರೆಗೆ ಪ್ರವಾಸಿಗರು ಬರುತ್ತಿದ್ದರು. ಆದಾಯ ₹8 ಕೋಟಿಯಿಂದ ₹9 ಕೋಟಿಯವರೆಗೆ ಬರುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.  

ADVERTISEMENT

ಪ್ರಧಾನಿ ಮೋದಿ ಭೇಟಿ: ಹುಲಿ ಯೋಜನೆಯ 50ನೇ ವರ್ಷದ ಸಂಭ್ರಮ ಆಚರಿಸಿಕೊಂಡ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಏ.9ರಂದು ಭೇಟಿ ನೀಡಿ ಸಫಾರಿ ಕೈಗೊಂಡಿದ್ದರು. ಬಂಡೀಪುರದಿಂದ ನೆರೆಯ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದ್ದರು. ಮೋದಿಯವರ ಭೇಟಿ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತ್ತು. 

‘ಕೋವಿಡ್‌ ಹಾವಳಿ ಕಡಿಮೆಯಾದ ಬಳಿಕ ಜನರು ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಜಾಸ್ತಿಯಾಗಿದೆ. ಅದೇ ರೀತಿ ನಮ್ಮಲ್ಲಿಗೂ ಬರುತ್ತಿದ್ದಾರೆ. ಇದರೊಂದಿಗೆ ಪ್ರಧಾನಿ ಮೋದಿಯವರು ಕೂಡ ಬಂಡೀಪುರಕ್ಕೆ ಭೇಟಿ ನೀಡಿರುವುದು, ಹುಲಿ ಸಂರಕ್ಷಿತ ಪ್ರದೇಶದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಮಂದಿ ತಿಳಿಯಲು ಸಾಧ್ಯವಾಗಿದೆ. ಹೀಗಾಗಿ ಸಫಾರಿಗೆ ಬರುವವರು ಮತ್ತು ನಮ್ಮ ಕಾಟೇಜ್‌ಗಳಲ್ಲಿ ತಂಗುವವರ ಸಂಖ್ಯೆ ಹೆಚ್ಚಾಗಿದೆ’ ಎಂದು ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಯಾವುದರಲ್ಲಿ ಆದಾಯ?: ಸಫಾರಿ, ಬಂಡೀಪುರ ಕ್ಯಾಂಪಸ್‌ನಲ್ಲಿರುವ 10 ಕಾಟೇಜ್‌ಗಳು ಅರಣ್ಯ ಇಲಾಖೆಯ ಆದಾಯದ ಪ್ರಮುಖ ಮೂಲ. ಇದಲ್ಲದೇ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ವಾಹನ ನಿಲುಗಡೆ ಶುಲ್ಕ, ಅರಣ್ಯದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಸಿರು ಶುಲ್ಕವನ್ನೂ ಸಂಗ್ರಹಿಸಲಾಗುತ್ತಿದೆ. 

ಪಿ.ರಮೇಶ್‌ಕುಮಾರ್‌
ಪ್ರಧಾನಿ ನರೇಂದ್ರ ಮೋದಿ ಅವರು ಬಂಡೀಪುರದಲ್ಲಿ ಸಫಾರಿ ನಡೆಸಿದ ಸಂದರ್ಭದ ಚಿತ್ರ –ಪಿಟಿಐ ಚಿತ್ರ
ಏಪ್ರಿಲ್‌– ಜನವರಿ ಅವಧಿಯಲ್ಲಿ ಸಾಮಾನ್ಯವಾಗಿ 1.10 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಈ ಬಾರಿ 1.45 ಲಕ್ಷ ಮಂದಿ ಭೇಟಿ ಕೊಟ್ಟಿದ್ದಾರೆ
–ಪಿ.ರಮೇಶ್‌ಕುಮಾರ್‌ ಬಂಡೀಪುರ ಹುಲಿ ಯೋಜನೆ ನಿರ್ದೇಶಕ

ಪರಿಸರ ಸಂರಕ್ಷಣೆ ಜಾಗೃತಿ ಚಟುವಟಿಕೆ

‘ಪರಿಸರ ಸ್ನೇಹಿ ಪ್ರವಾಸೋದ್ಯಮದಿಂದ ಬಂದ ಆದಾಯದಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವ ಕೆಲಸಗಳು ಗಿರಿಜನರಿಗೆ ಮತ್ತು ಕಾಡಂಚಿನ ಜನರಿಗೆ ಅನುಕೂಲ ಕಲ್ಪಿಸುವ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ’ ಎಂದು ಹೇಳುತ್ತಾರೆ ಅಧಿಕಾರಿಗಳು. ‘ಕಾಡಂಚಿನ ಗ್ರಾಮಸ್ಥರು ಗಿರಿಜನರಿಗಾಗಿ ಎರಡು ಆಂಬುಲೆನ್ಸ್‌ಗಳ ಸೇವೆ ಆರಂಭಿಸಿದ್ದೇವೆ. ಲಂಟಾನದಿಂದ ಕರಕುಶಲ ವಸ್ತು ತಯಾರಿಸುವ ತರಬೇತಿಯನ್ನು ಗಿರಿಜನ ಮಹಿಳೆಯರಿಗೆ ನೀಡಲಾಗುತ್ತಿದೆ. ಯುವ ಮಿತ್ರ ಚಿಣ್ಣರ ವನದರ್ಶನದಂತಹ ಕಾರ್ಯಕ್ರಮಗಳೂ ನಡೆಯುತ್ತಿವೆ’ ಎಂದು ರಮೇಶ್‌ ಕುಮಾರ್‌ ವಿವರಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.