ADVERTISEMENT

ಕೊಳ್ಳೇಗಾಲ ಹನೂರಿನ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತ

ಮದ್ಯದ ಅಂಗಡಿ ಮಾಲೀಕರಿಂದ ನೇರವಾಗಿ ಪೂರೈಕೆ, ಅಕ್ರಮ ವಹಿವಾಟಿಗೆ ಬೀಳದ ಕಡಿವಾಣ

ಬಿ.ಬಸವರಾಜು
Published 27 ನವೆಂಬರ್ 2020, 19:30 IST
Last Updated 27 ನವೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹನೂರು: ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ಸಾಗಿದ್ದು, ಪಟ್ಟಣ ಪ್ರದೇಶಗಳಲ್ಲಿರುವ ಮದ್ಯದಂಗಡಿ ಮಾಲೀಕರೇ ಪ್ರತಿಯೊಂದು ಗ್ರಾಮಕ್ಕೂ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿರುವುದು ಗೊತ್ತಾಗಿದೆ.

ಲೊಕ್ಕನಹಳ್ಳಿ, ಹನೂರು ಹಾಗೂ ರಾಮಾಪುರ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿರುವ ಪೆಟ್ಟಿಗೆ ಅಂಗಡಿಗಳಿಗೆ ಮದ್ಯದ ಅಂಗಡಿಗಳ ಮಾಲೀಕರೇ ರಾತ್ರಿ ಹಾಗೂ ಮುಂಜಾನೆ ವೇಳೆ ಮದ್ಯ ಸರಬರಾಜು ಮಾಡುತ್ತಿದ್ದಾರೆ. ಇದನ್ನು ಗ್ರಾಮಗಳಲ್ಲಿನ ಕೆಲವರು ದುಪ್ಪಟ್ಟು ಬೆಲೆಗೆ ಮಾರುತ್ತಿದ್ದಾರೆ.

ಹನೂರು ತಾಲ್ಲೂಕು ಮಾತ್ರವಲ್ಲ, ಕೊಳ್ಳೇಗಾಲ ತಾಲ್ಲೂಕಿನಲ್ಲೂ ಅಕ್ರಮ ಮದ್ಯ ಮಾರಾಟದ ಹಾವಳಿ ವಿಪರೀತವಾಗಿದೆ. ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಆಗಾಗ ದಾಳಿ ನಡೆಸುತ್ತಿದ್ದರೂ, ಅಕ್ರಮ ವಹಿವಾಟಿಗೆ ಕಡಿವಾಣ ಬಿದ್ದಿಲ್ಲ.

ADVERTISEMENT

‘ಗ್ರಾಮಗಳಲ್ಲಿ ನಡೆಯುವ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ದೂರು ನೀಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ‘ಪ್ರಜಾವಾಣಿ’ಗೆ ತಿಳಿಸಿದರು.

ನಿಷೇಧಾಜ್ಞೆಯ ಸಂದರ್ಭದಲ್ಲಿ, ಮಹನಿಯರ ಹುಟ್ಟುಹಬ್ಬದಂದು ಮದ್ಯದಂಗಡಿಗಳು ಮುಚ್ಚಿರುತ್ತವೆ. ಹೀಗಿದ್ದರೂ ಅಂಗಡಿಗಳಲ್ಲಿ ಮದ್ಯ ದೊರೆಯುತ್ತವೆ. ಇದು ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆ.

‘ಮದ್ಯದಂಗಡಿಗಳು ಇರುವ ಊರುಗಳಲ್ಲೇ, ಬಡಾವಣೆಗಳ ಗೂಡಂಗಡಿಗಳಲ್ಲಿ ದುಪ್ಪಟ್ಟು ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಇತ್ತೀಚೆಗೆ ಗಾಂಜಾ ಸಾಗಣೆ ಹಾಗೂ ಅಕ್ರಮ ಕಳ್ಳಬಟ್ಟಿ ತಯಾರಿಕೆಯ ಮೇಲೆ ದಾಳಿ ನಡೆಸುತ್ತಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಅಕ್ರಮ ಮದ್ಯ ಮಾರಾಟಕ್ಕೂ ಕಡಿವಾಣ ಹಾಕಬೇಕು’ ಎಂದು ಎನ್ನುತ್ತಾರೆ ನಾಗರೀಕರು.

‌‘ಅಕ್ರಮ ಮದ್ಯ ಸಾಗಣೆ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದೇವೆ. ಇವರಲ್ಲಿ ಬಹುತೇಕರು ಜೈಲಿನಿಂದ ಹೊರ ಬರುತ್ತಿದ್ದಂತೆ ಮತ್ತೆ ತಮ್ಮ ಚಾಳಿ ಮುಂದುರಿಸುತ್ತಿರುವುದು ಗಮನಕ್ಕೆ ಬಂದಿದೆ. ಅಕ್ರಮ ಮದ್ಯ ವಶದ ಜೊತೆಗೆ ವಾಹನಗಳನ್ನು ಜಫ್ತಿ ಮಾಡುತ್ತಿದ್ದೇವೆ. ಹನೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣಗಳೂ ದಾಖಲಾಗಿದೆ’ ಎಂದು ಹನೂರು ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ನಾಗೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮಗಳಿಗೆ ಹೋದಾಗ ಅಕ್ರಮ ಮದ್ಯ ಮಾರಾಟದ ಬಗ್ಗೆ ಜನರು ಮಾಹಿತಿ ನೀಡುತ್ತಿದ್ದಾರೆ. ಇದನ್ನು ಆಧರಿಸಿ ನಾವು ಕೂನೂನು ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಎಂಆರ್‌ಪಿಗಿಂತಲೂ ಹೆಚ್ಚಿನ ಬೆಲೆಗೆ ಮಾರಾಟ

ಸರ್ಕಾರಿ ಸ್ವಾಮ್ಯದ ಮದ್ಯದಂಗಡಿಗಳಲ್ಲಿ ಸಿಗುವ ಬೆಲೆಗೆ ಮದ್ಯ ನೀಡುವುದಾಗಿ ಕೆಲವು ಅಂಗಡಿಗಳಲ್ಲಿ ನಾಮಫಲಕ ಅಳವಡಿಸಿರುತ್ತಾರೆ. ಆದರೆ, ಅಸಕಲಿ ಕಥೆಯೇ ಬೇರೆ ಎನ್ನುತ್ತಾರೆ ಮದ್ಯವ್ಯಸನಿಗಳು.

‘ಒಂದೊಂದು ಅಂಗಡಿಯಲ್ಲಿ ಒಂದೊಂದು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹನೂರಿನ ಅಂಗಡಿಗಳಲ್ಲಿ 90 ಎಂಎಲ್ ಗೆ ₹40 ಇದ್ದರೆ, ಅದೇ ಮದ್ಯಕ್ಕೆ ಲೊಕ್ಕನಹಳ್ಳಿ ಅಂಗಡಿಯಲ್ಲಿ ₹ 45 ತೆಗೆದುಕೊಳ್ಳುತ್ತಿದ್ದಾರೆ. ಪಟ್ಟಣ ಪ್ರದೇಶಗಳಿಂದ ಬಹುದೂರು ಇರುವ ಗ್ರಾಮಗಳಲ್ಲಿನ ಮದ್ಯದಂಗಡಿಗಳಲ್ಲಿ ಅವರು ಕೇಳಿದಷ್ಟು ಹಣ ತೆತ್ತು ಮದ್ಯ ಖರೀದಿಸಬೇಕಿದೆ’ ಎಂದು ಅವಲತ್ತುಕೊಳ್ಳುತ್ತಾರೆ ಮದ್ಯಪ್ರಿಯರು.

ಮಾಹಿತಿ ನೀಡಿ: ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೊಳ್ಳೇಗಾಲಅಬಕಾರಿ ಇನ್‌ಸ್ಪೆಕ್ಟರ್‌ ಮೀನಾ ಅವರು, ‘ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕಿನ ಗ್ರಾಮಗಳ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಹಾಗೂ ಮದ್ಯದಂಗಡಿ ಮಾಲೀಕರೇ ಗ್ರಾಮದ ಪೆಟ್ಟಿಗೆ ಅಂಗಡಿಗಳಿಗೆ ಮದ್ಯ ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಈಗಾಗಲೇ ಸಾಕಷ್ಟು ಬಾರಿ ದಾಳಿ ನಡೆಸಿ ಹಲವರನ್ನು ಬಂಧಿಸಿದ್ದೇವೆ’ ಎಂದರು.

‘ಗ್ರಾಮಗಳ ಅಂಗಡಿ ಹಾಗೂ ಬಡಾವಣೆಗಳಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸರಬರಾಜಾಗುತ್ತಿರುವ ಬಗ್ಗೆ ಗ್ರಾಮೀಣ ಭಾಗದ ಜನರು ನಮಗೆ ಮಾಹಿತಿ ನೀಡಬೇಕು. ಅಂಥವರ ಹೆಸರನ್ನು ಗೋಪ್ಯವಾಗಿಟ್ಟು, ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.