ಕೊಳ್ಳೇಗಾಲ: ತಾಲ್ಲೂಕಿನ ಸುಪ್ರಸಿದ್ಧ ಭರಚುಕ್ಕಿ ಜಲಪಾತ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭಾನುವಾರ ಹರಿದು ಬಂದರು.
ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಂದ ನೀರು ಹರಿದು ಬರುತ್ತಿರುವ ಹಿನ್ನೆಲೆ ಜಲಾಶಯ ಮೈದುಂಬಿ ಹರಿಯುತ್ತಿದೆ. ಶನಿವಾರ ಹಾಗೂ ಭಾನುವಾರ ಜಲಪಾತ ವೀಕ್ಷಣೆಗೆ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ನವ ಜೋಡಿಗಳು, ಯುವಕ, ಯುವತಿಯರು, ಸ್ನೇಹಿತರು, ಹಿರಿಯರು, ಮಕ್ಕಳು ಬಂದು ವೀಕ್ಷಣೆ ಮಾಡಿದರು.
ಕಳೆದ ಎರಡು–ಮೂರು ತಿಂಗಳಿಂದ ನೀರಿಲ್ಲದೆ ಬಂಡೆಗಳು ಎದ್ದುಕಾಣುತ್ತಿದ್ದವು. ಈಗ ಕಾವೇರಿ ಮೈದುಂಬಿ ಧುಮ್ಮಿಕುತ್ತಿದ್ದಾಳೆ. ಈ ನಯನ ಮನೋಹರ ದೃಶ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂದು ಪ್ರವಾಸಿಗರು ‘ಪ್ರಜಾವಾಣಿ’ಗೆ ತಿಳಿಸಿದರು.
ಜಲಪಾತ ನೋಡುತ್ತಾ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ಸೆಲ್ಫಿಗಾಗಿ ಪ್ರವಾಸಿಗರು ಮುಗಿಬಿದ್ದರು. ಪ್ರತಿ ವರ್ಷವೂ ಜಲಪಾತ ವೀಕ್ಷಣೆ ಮಾಡಿ ಇಲ್ಲಿನ ಪರಿಸರ ಸೌಂದರ್ಯವನ್ನು ಸವಿದು ಹೋಗುತ್ತೇವೆ. ಕುಟುಂಬ ಸಮೇತವಾಗಿ ಬಂದು ಒಂದು ದಿನ ಇಲ್ಲಿಯೇ ಕಾಲ ಕಳೆದು ಅಡುಗೆ ಮಾಡಿ ಅದನ್ನು ಸವಿದು ಹೋಗುತ್ತೇವೆ. ಸುಮಾರು 10 ವರ್ಷಗಳಿಂದಲೂ ಜಲಪಾತ ವೀಕ್ಷಣೆಗೆ ಬರುತ್ತಿದ್ದೇವೆ ಎಂದು ಚನ್ನಪಟ್ಟಣದ ನಿವಾಸಿ ರಾಹುಲ್ ತಿಳಿಸಿದರು.
ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ಶಿವನಸಮುದ್ರ ಆದಿಶಕ್ತಿ ಮಾರಮ್ಮನ ದೇವಸ್ಥಾನವು ಭಾನುವಾರ ಹಾಗೂ ಮಂಗಳವಾರ ಮಾತ್ರ ತೆರೆಯುತ್ತದೆ. ಇನ್ನುಳಿದ ಎಲ್ಲ ದೇವಸ್ಥಾನಗಳಲ್ಲಿ ಪ್ರತಿನಿತ್ಯ ದರ್ಶನಕ್ಕೆ ವ್ಯವಸ್ಥೆ ಇರುತ್ತದೆ. ಆದರೆ ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾನುವಾರ ಬಂದಿದ್ದ ಕಾರಣ ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ನೆರವೇರಿಸಿದ್ದಾರೆ. ಅದಲ್ಲದೆ ದೇವರ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಎಲ್ಲಾ ದೇವಸ್ಥಾನದ ಮುಂಭಾಗ ಸರತಿ ಸಾಲಿನಲ್ಲಿ ನಿಂತಿದ್ದರು.
ಭರ್ಜರಿ ವ್ಯಾಪಾರ; ದಾರಿ ಉದ್ದಕ್ಕೂ ಫಿಶ್ ಫ್ರೈ, ಫಿಶ್ ಕರಿ ಸೇರಿದಂತೆ ವಿವಿಧ ಬಗೆಯ ಅಡುಗೆಗಳನ್ನು ಅಲ್ಲಿನ ಸ್ಥಳೀಯ ಹೋಟೆಲ್ ನವರು ತಯಾರಿಸಿದ್ದರು. ಹಾಗಾಗಿ ಭಾನುವಾರ ಹೆಚ್ಚಾಗಿ ವ್ಯಾಪಾರ ಆಯಿತು. ಇನ್ನು ಭರಚುಕ್ಕಿ ಸಮೀಪದಲ್ಲಿ ಟೀ, ಕಾಫಿ, ಬಜ್ಜಿ, ಬೋಂಡಾ, ವಡೆ, ಚುರುಮುರಿ, ಸೌತೆಕಾಯಿ, ನಿಪ್ಪಟ್ಟು ಮಸಾಲ, ಜ್ಯೂಸ್, ಐಸ್ ಕ್ರೀಮ್ ಸೇರಿದಂತೆ ಇನ್ನಿತರ ವ್ಯಾಪಾರಗಳು ಉತ್ತಮವಾಗಿ ನಡೆಯಿತು.
ಟ್ರಾಫಿಕ್ ಜಾಮ್: ಪೊಲೀಸರಿಂದ ದಾಖಲೆ ಪರಿಶೀಲನೆ!
ಶನಿವಾರ ಭಾನುವಾರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ರಸ್ತೆ ಚಿಕ್ಕದಾಗಿರುವುದರಿಂದ ವಾಹನ ಸವಾರರು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಇದೆ. ಆದರೂ ಕಾರು– ಬೈಕ್ ಬಸ್ ಇನ್ನಿತರ ವಾಹನಗಳು ಈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಪೊಲೀಸರು ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಆದರೆ ಯಾವ ಪೊಲೀಸರು ಸಹ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಿಲ್ಲ. ಕೇವಲ ಒಬ್ಬರು ಎಎಸ್ಐ ಹಾಗೂ ಒಬ್ಬರು ಹೋಂ ಗಾರ್ಡ್ ಸೇತುವೆಯ ಬಳಿ ನಿಂತು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡದೆ ಬೈಕ್‌ಗಳನ್ನು ಹಿಡಿದು ವಾಹನದ ದಾಖಲೆ ಪರಿಶೀಲಿಸುತ್ತಿದ್ದರು. ಈ ಕೆಲಸವನ್ನು ಬಿಟ್ಟರೆ ಯಾವ ಟ್ರಾಫಿಕ್ ಜಾಮ್ ಅನ್ನು ಸಹ ಸರಿಪಡಿಸಲಿಲ್ಲ ಎಂದು ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದರು.
ಭರಚುಕ್ಕಿ ಜಲಪಾತ ವೀಕ್ಷಣೆಗೆ ಬಂದರೆ ಮುಸ್ಲಿಮರ ದರ್ಗಾ ಆದಿಶಕ್ತಿ ಶಿವನಸಮುದ್ರ ಮಾರಮ್ಮ ದೇವಸ್ಥಾನ ಸೋಮೇಶ್ವರ ದೇವಸ್ಥಾನ ಮಧ್ಯರಂಗನಾಥ ಸ್ವಾಮಿ ದೇವಸ್ಥಾನ ಬ್ರಿಟಿಷರ ಕಾಲದ ವ್ಯಕ್ತಿ ಸೇತುವೆ ಹೀಗೆ ಸಾಲು ಸಾಲು ಪ್ರವಾಸಿ ತಾಣಗಳು ಸಿಗುತ್ತವೆ. ಹಾಗಾಗಿ ಪ್ರವಾಸಿಗರು ಈ ಎಲ್ಲಾ ಕಡೆ ಭೇಟಿ ನೀಡಿ ಹೋಗುತ್ತಾರೆ. ಆದರೆ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ರಸ್ತೆಯಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.