ADVERTISEMENT

‘ಸರ್ಕಾರದ ಕಾರ್ಯಕ್ರಮ ಅರ್ಹರಿಗೆ ತಲುಪಿಸಿ’

ನಿಗಮದ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 6:29 IST
Last Updated 10 ಜನವರಿ 2026, 6:29 IST
ಎಂ.ರಾಮಪ್ಪ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ
ಎಂ.ರಾಮಪ್ಪ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ   

ಚಾಮರಾಜನಗರ: ಭೋವಿ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅಧಿಕಾರಿಗಳು ಅರ್ಹರಿಗೆ ತಲುಪಿಸಬೇಕು ಎಂದು ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಭೋವಿ ಹಾಗೂ ವಡ್ಡರ ಸಮುದಾಯ ಆರ್ಥಿಕವಾಗಿ ಸ್ಥಿತಿವಂತರಲ್ಲ. ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಅರ್ಹರಿಗೆ ತಲುಪಿಸಿದರೆ ಮಾತ್ರ ಸಮುದಾಯ ಬಡತನದಿಂದ ಹೊರಬರಲು ಸಾಧ್ಯ ಎಂದರು.

ರಾಜ್ಯ ಸರ್ಕಾರ ಸಮುದಾಯದ ಅಭಿವೃದ್ಧಿಗೆ ಸ್ವಯಂ ಉದ್ಯೋಗ ನೇರಸಾಲ, ಉದ್ಯಮ ಶೀಲತಾ ಯೋಜನೆ, ಹೈನುಗಾರಿಕೆ, ಕುರಿ, ಮೇಕೆ ಸಾಕಣೆಗೆ ಸಾಲ, ಸ್ವಾವಲಂಬಿ ಸಾರಥಿ, ಗಂಗಾ ಕಲ್ಯಾಣ, ಭೂ ಒಡೆತನ ಸೇರಿದಂತೆ ಹಲವು ಯೋಜನೆಗಳನ್ನು ಅನುಷ್ಠಾನ ಮಾಡಿದೆ. ಆಯಾ ಜಿಲ್ಲೆಯಲ್ಲಿರುವ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಯೋಜನೆಗಳಿಗೆ ಗುರಿ ನಿಗದಿಗೊಳಿಸಿದೆ.

ADVERTISEMENT

ನಿಗಮದ ಅಧಿಕಾರಿಗಳು ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಸ್ವಸಹಾಯ ಸಂಘಗಳನ್ನು ನೋಂದಣಿ ಮಾಡಿಸಬೇಕು. ಬ್ಯಾಂಕ್‍ಗಳು ದಾಖಲೆಗಳ ಅಲಭ್ಯತೆ ನೆಪವೊಡ್ಡಿ ಸಾಲ ನೀಡಲು ನಿರ್ಲಕ್ಷ್ಯ ವಹಿಸಬಾರದು, ಸಮುದಾಯದ ಆರ್ಥಿಕ ಸದೃಢತೆಗೆ ಸೌಲಭ್ಯ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಭೋವಿ ಸಮುದಾಯ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸರ್ಕಾರ ಕಲ್ಪಿಸಿರುವ ಹಾಸ್ಟೆಲ್‌, ವಸತಿ ಶಾಲೆಗಳ ಪ್ರಯೋಜನ ಪಡೆದುಕೊಳ್ಳಬೇಕು, ವಿದ್ಯಾರ್ಥಿ ವೇತನ ಸೌಲಭ್ಯ ಪಡೆಯಬೇಕು, ಅಂಬೇಡ್ಕರ್ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಅಧ್ಯಕ್ಷ ರಾಮಪ್ಪ ಕಿವಿಮಾತು ಹೇಳಿದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಂದ್ರನಾಯಕ್ ಮಾತನಾಡಿ ‘2016ರಲ್ಲಿ ಭೋವಿ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದ್ದು ಸಮುದಾಯದ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು ಅರ್ಹರು ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶೃತಿ, ಭೋವಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ರಾಜು, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮುನಿರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ, ಸಮುದಾಯದ ಮುಖಂಡರು ಹಾಗೂ ಇತರರು ಸಭೆಯಲ್ಲಿ ಇದ್ದರು.

ನಿಗಮದ ಅಧ್ಯಕ್ಷರು ಸಮುದಾಯದ ಮುಖಂಡರ ಅಹವಾಲು ಆಲಿಸಿದರು. ಭೂಮಿ, ಸ್ಮಶಾನಕ್ಕೆ ಜಾಗ, ಬಸ್ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯಗಳಳಿಗಾಗಿ ಮುಖಂಡರು ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.