ಸಂತೇಮರಹಳ್ಳಿ: ‘ಸಣ್ಣ ನೀರಾವರಿ ಸಚಿವ ಬೋಸರಾಜು ಅವರು ಜಿಲ್ಲೆಗೆ ಭೇಟಿ ನೀಡಿದ ಪರಿಣಾಮ ಕೆರೆಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ’ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಸಮೀಪದ ದೇಮಹಳ್ಳಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ₹1.10 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣದ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಸಣ್ಣ ಕೆರೆಗಳು ಹಾಗೂ ಕಾಲುವೆಗಳನ್ನು ಅಭಿವೃದ್ಧಿಪಡಿಸಲು ₹18 ಕೋಟಿ ಪ್ರಸ್ತಾವನೆಯಾಗಿದೆ. ನಬಾರ್ಡ್ ವತಿಯಿಂದ ಈಗಾಗಲೇ ₹1 ಕೋಟಿ ಬಿಡುಗಡೆಯಾಗಿದೆ’ ಎಂದರು.
‘ಅಡ್ಡಹಳ್ಳ ವ್ಯಾಪ್ತಿ ಪ್ರದೇಶಗಳಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸುವುದರಿಂದ ಮಳೆಗಾಲದಲ್ಲಿ ನೀರು ನಿಂತ ಅಂತರ್ಜಲ ಹೆಚ್ಚಾಗುತ್ತದೆ. ಕಳೆದ ಬಾರಿಯ ಪ್ರವಾಹದಲ್ಲಿ ನೀರು ನಿಲ್ಲದೇ ರಸ್ತೆಯಲ್ಲಿ ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮುಂದೆ ಅಂತಹ ಸಮಸ್ಯೆ ಬಾರದಂತೆ ಈಗ ಸರ್ಕಾರದಿಂದ ಅನುದಾನ ತಂದು ಚೆಕ್ ಡ್ಯಾಂಗಳನ್ನು ಪುನಶ್ಚೇತನ ಗೊಳಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಮಳೆ ನೀರು ನಿಂತ ಪರಿಣಾಮ ರೈತರು ವ್ಯವಸಾಯ ಮಾಡಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.
ಗ್ರಾಮದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವ ರಸ್ತೆ ಮಳೆಗಾಲದಲ್ಲಿ ಸಮಸ್ಯೆ ಉಂಟಾಗುತ್ತದೆ. ಜತೆಗೆ ಕುದೇರು, ಮೂಡಲ ಅಗ್ರಹಾರ ಹಾಗೂ ಬಾಗಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದೆ. ಈ ರಸ್ತೆಗಳನ್ನು ಅಭಿವೃದ್ಧಿ ಪಡಿಸಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪುನೀತ್, ಉಪಾಧ್ಯಕ್ಷೆ ರಾಜಮ್ಮ, ಸದಸ್ಯೆ, ಸುಂದ್ರಮ್ಮ, ಮುಖಂಡ ಎಚ್.ವಿ.ಚಂದ್ರು, ಸಣ್ಣ ನೀರಾವರಿ ಇಲಾಖೆ ಎಇಇ ನಿರಂಜನ್, ಎಂಜಿನಿಯರ್ ಅಭಿಲಾಷ್, ಶಿವನಾಗಪ್ಪ, ಕಮರವಾಡಿ ರೇವಣ್ಣ, ಪಶಿ, ಮಹದೇವಯ್ಯ, ಗೌಡಿಕೆ ಮಾದಪ್ಪ, ದೇಮಹಳ್ಳಿ ಶಿವಕುಮಾರ್, ಬಸವರಾಜು, ಅಭಿವೃದ್ಧಿ ಅಧಿಕಾರಿ ನಾಗಯ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.