ADVERTISEMENT

‌ಸಿದ್ದರಾಮಯ್ಯ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ

ಬಂಡೀಪುರದಲ್ಲಿ ರಾಹುಲ್‌ ಗಾಂಧಿಗೆ ಸ್ವಾಗತ: ಅರಣ್ಯ ಕಾಯ್ದೆ ಉಲ್ಲಂಘನೆ ಆರೋಪ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 6:23 IST
Last Updated 2 ಅಕ್ಟೋಬರ್ 2022, 6:23 IST

ಗುಂಡ್ಲುಪೇಟೆ: ಭಾರತ್‌ ಜೋಡೊ ಯಾತ್ರೆ ಶುಕ್ರವಾರ ಗುಂಡ್ಲುಪೇಟೆಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಇತರ ಮುಖಂಡರು ಬಂಡೀಪುರದ ಅರಣ್ಯ ವ್ಯಾಪ್ತಿಯಲ್ಲಿ ರಾಹುಲ್‌ ಗಾಂಧಿ ಅವರನ್ನು ಸ್ವಾಗತಿಸುವ ಮೂಲಕ ಅರಣ್ಯ ಸಂರಕ್ಷಣೆ ಕಾನೂನು ಉಲ್ಲಂಘಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಈ ಸಂಬಂಧ ಗುಂಡ್ಲುಪೇಟೆಯ ಬಿಜೆಪಿ ಮಂಡಲ ಅಧ್ಯಕ್ಷ ಡಿ.ಪಿ.ಜಗದೀಶ್‌ ಹಾಗೂ ಇತರ ಮುಖಂಡರು ಬಂಡೀಪುರ ಹುಲಿ ಯೋಜನೆ ನಿರ್ದೇಶಕರಿಗೆ ಶನಿವಾರ ಲಿಖಿತ ದೂರು ನೀಡಿದ್ದಾರೆ.

‘ಕೆಕ್ಕನಹಳ್ಳ ಚೆಕ್‌ಪೋಸ್ಟ್‌ನಿಂದ ಮೇಲುಕಾಮನಹಳ್ಳಿ ಚೆಕ್‌ಪೋಸ್ಟ್‌ ನಡುವೆ ಸಿದ್ದರಾಮಯ್ಯ, ಕಾಂಗ್ರೆಸ್‌ ಮುಖಂಡ ಎಚ್‌.ಸಿ.ಮಹದೇವಪ್ಪ, ಶಾಸಕರಾದ ಕೆ.ಜೆ.ಜಾರ್ಜ್‌, ಎಂ.ಬಿ.ಪಾಟೀಲ ಹಾಗೂ ಇತರರು ಅರಣ್ಯ ವ್ಯಾಪ್ತಿಯಲ್ಲಿ ಕಾದು ಕುಳಿತು, ವಾಹನದಿಂದ ಇಳಿದು ರಾಹುಲ್‌ ಗಾಂಧಿ ಅವರನ್ನು ಸ್ವಾಗತಿಸಿದ್ದಾರೆ. ಇದು ಅರಣ್ಯದ ನಿಯಮಗಳ ಉಲ್ಲಂಘನೆಯಾಗಿದೆ. ಹಾಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಹುಲಿ ಯೋಜನೆ ನಿರ್ದೇಶಕ ರಮೇಶ್‌ ಕುಮಾರ್‌ಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.