ADVERTISEMENT

ಬಿಜೆಪಿಯಿಂದ ದಯಾನಿಧಿ ಉಚ್ಚಾಟನೆ

ಪಕ್ಷ ವಿರೋಧಿ ಚಟುವಟಿಕೆ ಆರೋಪ, ವಿಜಯೇಂದ್ರ ಅಭಿಮಾನಿ ಬಳಗದಲ್ಲಿ ಗುರುತಿಸಕೊಂಡಿರುವ ಮುಖಂಡ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 3:57 IST
Last Updated 5 ಜುಲೈ 2022, 3:57 IST
ದಯಾನಿಧಿ
ದಯಾನಿಧಿ   

ಚಾಮರಾಜನಗರ: ಬಿಜೆಪಿ ಮುಖಂಡ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಎನ್‌.ದಯಾನಿಧಿ ಅವರನ್ನು ಪಕ್ಷದಿಂದ ಆರು ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಲಾಗಿದೆ.

‘ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕೆ ಈ ಕೂಡಲೇ ಜಾರಿಗೆ ಬರುವಂತೆ ಆರು ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿದೆ’ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಲ ಶಿವಕುಮಾರ್‌ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಯಾನಿಧಿ ಅವರು ಚಾಮರಾಜನಗರ ತಾಲ್ಲೂಕಿನಲ್ಲಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ವಿಜಯೇಂದ್ರ ಅವರ ಅಭಿಮಾನಿಗಳ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಜಿಲ್ಲಾ ಮುಖಂಡರ ಕೆಲವು ನಿರ್ಧಾರಗಳ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

ADVERTISEMENT

ಇತ್ತೀಚೆಗೆ ನಡೆದ ಚಾಮುಲ್‌ ಅಧ್ಯಕ್ಷರ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಎಚ್‌.ಎಸ್‌.ಬಸವರಾಜು ಅವರ ಬದಲಿಗೆ ನಾಗೇಂದ್ರ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದರೂ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಅವರ ಸಮ್ಮುಖದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದರು.

ಪಕ್ಷದ ನಿರ್ಧಾರದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಸುಂದರ್‌, ‘ದಯಾನಿಧಿ ಅವರು ಪಕ್ಷದಲ್ಲಿದ್ದುಕೊಂಡು ಪಕ್ಷದ ವಿಚಾರಗಳನ್ನು ಹೊರಗಡೆ ಹೇಳುತ್ತಿದ್ದರು. ಮೂರು ನಾಲ್ಕು ಬಾರಿ ಈ ರೀತಿಯಾಗಿದೆ. ವರಿಷ್ಠರ ಸೂಚನೆ ಮೇರೆಗೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ’ ಎಂದು ಹೇಳಿದರು.

‘ನೋಟಿಸ್‌ ನೀಡಿಲ್ಲ, ಕಾರಣ ಗೊತ್ತಿಲ್ಲ’
ದಯಾನಿಧಿ ಅವರು ಪ್ರತಿಕ್ರಿಯಿಸಿ, ‘ನನಗೆ ವಿಚಾರ ಗೊತ್ತಿರಲಿಲ್ಲ. ಮಾಧ್ಯಮದವರು ಹೇಳಿದಾಗಲಷ್ಟೇ ಗೊತ್ತಾಗಿದೆ. ಯಾವ ಕಾರಣಕ್ಕೆ ಉಚ್ಚಾಟನೆ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಕಾರಣ ಕೇಳಿ ನೋಟಿಸ್‌ ಕೂಡ ನೀಡಿಲ್ಲ. ಅಚ್ಚರಿಯ ಜೊತೆಗೆ ದಿಗ್ಭ್ರಮೆಯಾಗಿದೆ. ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡುತ್ತಾ ಬಂದಿದ್ದೇನೆ. ಮುಖಂಡರ ಕೆಲವು ನಿರ್ಣಯಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದು ನಿಜ. ಚಾಮುಲ್‌ ಅಧ್ಯಕ್ಷರ ಚುನಾವಣೆಯಲ್ಲೂ ಅಭ್ಯರ್ಥಿ ಬದಲಿಸಿದಾಗ ಆಕ್ಷೇಪಿಸಿದ್ದೆ. ಆದರೆ ಅದು ಪಕ್ಷದ ವಿರೋಧಿ ಚಟುವಟಿಕೆ ಹೇಗಾಗುತ್ತದೆ? ಈ ಬಗ್ಗೆ ಕೂಲಂಕಷವಾಗಿ ವಿಚಾರಿಸಿ ನಂತರ ಪ್ರತಿಕ್ರಿಯಿಸುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.