ADVERTISEMENT

ಕೊಳ್ಳೇಗಾಲದ ಸಿಂಗನಲ್ಲೂರಿನಲ್ಲಿ ನಿಗೂಢ ಸ್ಫೋಟ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 12:24 IST
Last Updated 21 ಡಿಸೆಂಬರ್ 2021, 12:24 IST
ಸಿಂಗನಲ್ಲೂರು ಗ್ರಾಮದಲ್ಲಿ ಸ್ಪೋಟ ಸ್ಥಳ
ಸಿಂಗನಲ್ಲೂರು ಗ್ರಾಮದಲ್ಲಿ ಸ್ಪೋಟ ಸ್ಥಳ   

ಕೊಳ್ಳೇಗಾಲ: ತಾಲ್ಲೂಕಿನ ಸಿಂಗನಲ್ಲೂರು ಗ್ರಾಮದಲ್ಲಿ ಮಂಗಳವಾರ ಮುಂಜಾವು ನಿಗೂಢ ಸ್ಫೋಟ ಸಂಭವಿಸಿದ್ದು, ಮನೆಯೊಂದು ಕುಸಿದು ಬಿದ್ದು, 10ಕ್ಕೂ ಹೆಚ್ಚುಮನೆಗಳು ಬಿರುಕು ಬಿಟ್ಟಿವೆ. ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಲ್ಲ.

ಮುಂಜಾವು 2.40ರ ಸುಮಾರಿಗೆ ಭಾರಿ ಸದ್ದು ಕೇಳಿಸಿದೆ. ಇದೇ ಸಂದರ್ಭದಲ್ಲಿ ಗ್ರಾಮದ ಸಿದ್ದರಾಜು ಎಂಬುವವರ ಮನೆ ಕುಸಿದು ಬಿದ್ದಿದೆ. ಭಾರಿ ಶಬ್ದಕ್ಕೆ ಬೆಚ್ಚಿ ಎಚ್ಚರಗೊಂಡ ಸಿದ್ದರಾಜು ಅವರು, ಮನೆ ಚಾವಣಿ, ಮೇಲಿದ್ದ ವಸ್ತುಗಳೆಲ್ಲ ಬೀಳಲು ಆರಂಭಿಸಿದಾಗ ತಮ್ಮ ಚಿಕ್ಕಮ್ಮರತ್ನಮ್ಮ ಅವರೊಂದಿಗೆ ಮನೆಯಿಂದ ಹೊರಗಡೆ ಓಡಿ ಬಂದರು. ರತ್ನಮ್ಮ ಅವರ ಕೈ ಹಾಗೂ ಕಾಲಿಗೆ ಸಣ್ಣ ಗಾಯಗಳಾಗಿವೆ.

ಸಿದ್ದರಾಜು ಅವರು ಮನೆಯಲ್ಲೇ ಅಂಗಡಿ ಇಟ್ಟುಕೊಂಡಿದ್ದು, ಮನೆ ಹಾಗೂ ಅಂಗಡಿಗಳ ಸಾಮಗ್ರಿ ಹಾಳಾಗಿವೆ.

ADVERTISEMENT

ಭಾರಿ ಸದ್ದಿನಿಂದಾಗಿ ಭಯಗೊಂಡ ನೆರಮನೆಯವರೆಲ್ಲ ಅವರ ಮನೆಯಿಂದಲೂ ಹೊರಗಡೆ ಓಡಿದರು. ಭಾರಿ ಶಬ್ದಕ್ಕೆ 10ಕ್ಕೂ ಹೆಚ್ಚು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ.

ಆರಂಭದಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಿಸಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಮನೆಯಲ್ಲಿನ ಸಿಲಿಂಡರ್ ಹಾಗೆಯೇ ಇದೆ.

ಭೂಕಂಪ ಆಗಿರಬಹುದು ಎಂದು ಗ್ರಾಮಸ್ಥರು ಹೇಳುತ್ತಾರೆ. ಆದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇದನ್ನು ದೃಢಪಡಿಸಿಲ್ಲ.ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಶ್ವಾನ ದಳವೂ ಬಂದಿದೆ.

ಸ್ಫೋಟ ಅಥವಾ ಸದ್ದಿನ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಪೊಲೀಸರು 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಶಾಸಕ ಭೇಟಿ: ಹನೂರು ಶಾಸಕ ಆರ್.ನರೇಂದ್ರ ಅವರು ಮಂಗಳವಾರ ಬೆಳಿಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿದ್ದರಾಜು ಕುಟುಂಬದವರಿಗೆ ವೈಯಕ್ತಿಕ ಸಹಾಯ ಧನ ನೀಡಿ ಸಾಂತ್ವನ ಹೇಳಿದರು.

ನಂತರ ಮಾತನಾಡಿದ ಅವರು, 'ಸ್ಫೋಟದ ಕಾರಣ ಗೊತ್ತಾಗಿಲ್ಲ. ತನಿಖೆ ಮಾಡಿ ಇದನ್ನು ದೃಢಪಡಿಸಬೇಕಾಗುತ್ತದೆ' ಎಂದು ಅವರು ಹೇಳಿದರು.

ಈ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ನಾಗಭೂಷಣ್ ಅವರು, ' ಆ ಪ್ರದೇಶದ ಸುತ್ತಮುತ್ತ ಯಾವುದೇ ಕ್ವಾರಿಗಳಿಲ್ಲ. ಭೂಕಂಪದಿಂದಾಗಿ ಸದ್ದು ಅಥವಾ ಸ್ಫೋಟ ಆಗಿದೆಯೇ ಎಂಬುದು ಖಚಿತವಾಗಿಲ್ಲ. ಪರಿಶೀಲನೆ ನಡೆಯುತ್ತಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.