ADVERTISEMENT

ಜೀತ ಪದ್ಧತಿ ಮಾನವ ಹಕ್ಕುಗಳ ಉಲ್ಲಂಘನೆ: ನ್ಯಾಯಾಧೀಶ ಈಶ್ವರ

ಗೌರವಯುತವಾಗಿ ಬದುಕುವ ಹಕ್ಕಿಗೆ ಚ್ಯುತಿಯಾಗದಂತೆ ಎಚ್ಚರವಹಿಸಿ: ನ್ಯಾಯಾಧೀಶ ಈಶ್ವರ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 14:41 IST
Last Updated 14 ಫೆಬ್ರುವರಿ 2025, 14:41 IST
<div class="paragraphs"><p>ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಜೀತಪದ್ಧತಿ ನಿರ್ಮೂಲನೆ ಅರಿವು ಮೂಡಿಸುವ ಧ್ಯೇಯವಾಕ್ಯಗಳನ್ನು ಮರದ ಪ್ರತಿಕೃತಿಗೆ ಅಳವಡಿಸಿದರು.</p></div>

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಜೀತಪದ್ಧತಿ ನಿರ್ಮೂಲನೆ ಅರಿವು ಮೂಡಿಸುವ ಧ್ಯೇಯವಾಕ್ಯಗಳನ್ನು ಮರದ ಪ್ರತಿಕೃತಿಗೆ ಅಳವಡಿಸಿದರು.

   

ಚಾಮರಾಜನಗರ: ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಗೌರವಯುತವಾಗಿ ಬದುಕುವ ಹಕ್ಕು ನೀಡಲಾಗಿದ್ದು, ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ ಕಿವಿಮಾತು ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಜೀತಪದ್ದತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಿದ್ದ  ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ADVERTISEMENT

ಬಡತನವನ್ನೇ ಬಂಡವಾಳವಾಗಿಸಿಕೊಳ್ಳುವ ಉಳ್ಳವರು ಬಡವರನ್ನು ಜೀವನಪೂರ್ತಿ ಜೀತಕ್ಕೆ ದುಡಿಸಿಕೊಳ್ಳುವ ಪದ್ಧತಿ ಅಮಾನವೀಯ. ಜೀತಪದ್ಧತಿಯಿಂದ ವ್ಯಕ್ತಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಸರ್ಕಾರ 1976ರಲ್ಲಿ ಜೀತಪದ್ಧತಿ ನಿರ್ಮೂಲನಾ ಕಾಯ್ದೆಯನ್ನು ಜಾರಿಗೊಳಿಸಿದ್ದು, ದೇಶದ ಪ್ರತಿಯೊಬ್ಬರು ಗೌರವದಿಂದ ಬದುಕಲು ಅವಕಾಶಗಳನ್ನು ನೀಡಿದೆ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಕೂಡ ಸಂವಿಧಾನದಲ್ಲಿ ಸಮಾನತೆಯ ಕುರಿತಾದ ಹಲವು ಅನುಚ್ಛೇದಗಳನ್ನು ಅಡಕಗೊಳಿಸಿದ್ದು, ಸಮಾನತೆಯ ಬದುಕಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸಮಾಜದಲ್ಲಿ ಜೀತಪದ್ಧತಿ ಆಚರಣೆ ಕಂಡುಬಂದರೆ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕು. ಜೀತದಾಳುಗಳನ್ನು ಗುರುತಿಸಿ ಪುನರ್ವಸತಿ ಕಲ್ಪಿಸುವ ಕೆಲಸವಾಗಬೇಕು ಎಂದು ನ್ಯಾಯಾಧೀಶ ಈಶ್ವರ ತಿಳಿಸಿದರು.

ಜೀತಪದ್ಧತಿ ನಿರ್ಮೂಲನೆ ಅರಿವು ಮೂಡಿಸುವ ಧ್ಯೇಯವಾಕ್ಯಗಳನ್ನು ಮರದ ಪ್ರತಿಕೃತಿಗೆ ಅಳವಡಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ‘ಆರ್ಥಿಕವಾಗಿ ಸಬಲರಲ್ಲದವರು ಅನಿವಾರ್ಯ ಕಾರಣಗಳಿಗೆ ಜೀತ ಪದ್ಧತಿಗೆ ಸಿಲುಕುತ್ತಿದ್ದು, ಅವರಿಗೆ ಕನಿಷ್ಠ ವೇತನವನ್ನೂ ನೀಡದೆ ಒತ್ತಾಯಪೂರ್ವಕವಾಗಿ ದುಡಿಸಿಕೊಳ್ಳುವುದು ಅಪರಾಧ ಎಂದರು.

ಜೀತಪದ್ಧತಿಯನ್ನು ತೊಲಗಿಸುವ ಮಟ್ಟಿನಲ್ಲಿ ಜಿಲ್ಲೆಯಲ್ಲಿ ಜೀತ ಪದ್ಧತಿಯಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಗುರುತಿಸಿ, ಪುನರ್ವಸತಿ ಕಲ್ಪಿಸುವುದು ಜಿಲ್ಲಾಮಟ್ಟದ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಿ 2015-16ರಲ್ಲಿ 45, 2017ರಲ್ಲಿ 52 ಮಂದಿಯನ್ನು ಗುರುತಿಸಲಾಗಿತ್ತು. ಜೀತದಾಳುಗಳ ಪುನರ್ವಸತಿ ಕಾರ್ಯ ಸದ್ಯದಲ್ಲಿ ಸಂಪೂರ್ಣಗೊಳ್ಳಲಿದೆ. ಸರ್ಕಾರದ ನೀತಿ, ನಿಯಮಗಳನ್ವಯ ಅವರಿಗೆ ಸಹಾಯಹಸ್ತ ಚಾಚಬೇಕಿದ್ದು ಕರ್ತವ್ಯವೂ ಆಗಿದೆ. ಜೀತಪದ್ದತಿ ನಿರ್ಮೂಲನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಚಾಮರಾಜನಗರವನ್ನು ಜೀತ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಪಣ ತೊಡುವ ಅಗತ್ಯವಿದೆ ಎಂದರು.

ಜೀತಪದ್ಧತಿ ನಿರ್ಮೂಲನೆಯ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ‘ಜೀತ ಪದ್ಧತಿ ಸಾಮಾಜಿಕ ಅನಿಷ್ಠ ಪದ್ದತಿಯಾಗಿದ್ದು ವ್ಯಕ್ತಿಯ ಹಕ್ಕುಗಳನ್ನು, ವೈಯಕ್ತಿಕ ಬದುಕನ್ನು ಬಲವಂತವಾಗಿ ಕಸಿಯುವ ಅಮಾನವೀಯ ಪದ್ಧತಿಯಾಗಿದೆ. ಜೀತ ನಿರ್ಮೂಲನೆಯ ಬಗ್ಗೆ ಜಾಗೃತಿ ಮೂಡಿಸಿ ನಾಗರಿಕ ಸಮಾಜದಿಂದ ಜೀತಪದ್ಧತಿಯನ್ನು ಸಂಪೂರ್ಣವಾಗಿ ತೊಲಗಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಮಾತನಾಡಿ, ಜೀತಪದ್ಧತಿ ನಿರ್ಮೂಲನೆ ಕಾರ್ಯದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮುಖ್ಯವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜೀತಪದ್ಧತಿ ಗುರುತಿಸಿ ಜೀತ ವಿಮುಕ್ತರಿಗೆ ಪರಿಹಾರ, ಪುನರ್ವಸತಿ ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ವಕೀಲ ರೂಪಶ್ರೀ ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಪಿ. ಲಕ್ಷ್ಮೀ, ಜೀತ ವಿಮುಕ್ತ ಸಂಘಟನೆ ಆರ್.ಎಫ್.ಎಫ್ ಜಿಲ್ಲಾ ಸಂಚಾಲಕ ಜಿ.ಕೆ. ಕುನ್ನಹೊಳಿಯಯ್ಯ ಕಾರ್ಯಾಗಾರದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.