ADVERTISEMENT

ಹಸಿರುಟ್ಟು ಕಂಗೊಳಿಸುತ್ತಿರುವ ಬಿಳಿಗಿರಿ ಬನ

ಕಾನನದ ಸ್ವಚ್ಛತೆಯ ರಾಯಭಾರಿಯಾದ ಹುಲಿ; ಪ್ರವಾಸಿಗರನ್ನು ಸೆಳೆಯುತ್ತಿರುವ ಬಿಆರ್‌ಟಿ ಅರಣ್ಯ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 7:02 IST
Last Updated 26 ಜುಲೈ 2025, 7:02 IST
ಯಳಂದೂರು ತಾಲ್ಲೂಕಿನ ಬಿಆರ್‌ಟಿ ವನ್ಯಧಾಮದಲ್ಲಿ ಮರವೇರಿ ಕುಳಿತಿರುವ ಚಿರತೆ
ಯಳಂದೂರು ತಾಲ್ಲೂಕಿನ ಬಿಆರ್‌ಟಿ ವನ್ಯಧಾಮದಲ್ಲಿ ಮರವೇರಿ ಕುಳಿತಿರುವ ಚಿರತೆ   

ಯಳಂದೂರು: ಬಿಳಿಗಿರಿ ಕಾನನದ ಸುತ್ತಮುತ್ತ ತುಂತುರು ಮಳೆ ಸುರಿಯುತ್ತಿರುವ ಪರಿಣಾಮ ವನಗಳು ಹಸಿರುಟ್ಟು ನಳನಳಿಸುತ್ತಿವೆ. ಮೆತ್ತನೆ ಹುಲ್ಲುಗಳ ನಡುವೆ ದಿಟ್ಟಿಸಿ ನೋಡುವ ವ್ಯಾಘ್ರ, ಮರವೇರಿ ವಿಶ್ರಮಿಸುವ ಚಿರತೆ, ಕಾಡಿನ ನಡುವೆ ಸರಸರ ಹೆಜ್ಜೆ ಇಡುವ ಕಾಡೆಮ್ಮೆ, ಕೋಗಿಲೆ, ನವಿಲುಗಳ ‌ವಯ್ಯಾರದ ನಡಿಗೆ ನಿಸರ್ಗ ಪ್ರೇಮಿಗಳ ಕಣ್ಮನ ಸೆಳೆಯುತ್ತಿದೆ. ಬನದ ಸೆರಗಿನಲ್ಲಿ ಅರಳಿರುವ ಪುಷ್ಪಲೋಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಸಂಧಿಸುವ ಬಿಳಿಗಿರಿರಂಗನಬೆಟ್ಟದ ಜೀವ ಪರಿಸರ ಸೋನೆ ಮಳೆಗೆ ಮೈಯೊಡ್ಡಿ ನಿಂತಿದೆ. ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿಯ ಜೀವಾವರದಲ್ಲಿ ಕಾಣಸಿಗುವ ಎಲ್ಲ ಸಸ್ಯ ಹಾಗೂ ಪ್ರಾಣಿಗಳ ಪ್ರಭೇದಗಳನ್ನು ಒಳಗೊಂಡಿರುವ ಕಾನನ ಕಣ್ಮನ ಸೆಳೆಯುತ್ತಿದೆ. ಅಪರೂಪದ ಔಷಧಿಯುಕ್ತ ಗುಣದ ಅಶ್ವಗಂಧ, ತುಂಬೆ, ಅಳಲೆ, ಅಂಟುವಾಳ, ತಾರೆ, ಹೊನ್ನಾವರೆ, ಇಂಗಲ, ನೆಲಬೇವು ಸಸ್ಯ ಸಂಕುಲಗಳು ವರುಣನ ಆಗಮನದಿಂದ ಕಂಗೊಳಿಸುತ್ತಿವೆ.   

ಸಾವಿರಾರು ಸಸ್ಯ ಹಾಗೂ ವನ್ಯ ಜೀವಿಗಳನ್ನು ಒಡಲಲ್ಲಿ ಇಟ್ಟುಕೊಂಡು ಸಲಹುತ್ತಿರುವ ಬಿಆರ್‌ಟಿ ವನ್ಯಧಾಮವು ವ್ಯಾಘ್ರ ರಕ್ಷಿತಾರಣ್ಯ ಘೋಷಣೆಯಾದ ನಂತರ ಚಿರತೆ, ಕರಡಿ, ಕೃಷ್ಣಮೃಗ, ಕಾಡುಹಂದಿ, ನರಿ, ತರ ಕರಡಿ, ಕತ್ತೆಕಿರುಬ, ಸಾರಂಗ, ನವಿಲು, ಗಿಳಿ, ಗೊರವಂಕ, ಹಾವು ಮತ್ತು ಚೇಳುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ADVERTISEMENT

ಕಾನನದಲ್ಲಿ ಸರಾಸರಿ ವಾರ್ಷಿಕ 250 ಸೆಂ.ಮೀ ಮಳೆ ಸುರಿದರೆ ನೆಲ್ಲಿ, ಜೇನು, ಕಿತ್ತಳೆ, ಪಸ್ಸೆ, ಚಕ್ಕೋತ ಸೇರಿ ಹತ್ತಾರು ಕಿರು ಅರಣ್ಯ ಸಂಪನ್ಮೂಲಗಳು ಹೆಚ್ಚಳವಾಗುತ್ತದೆ. ಹತ್ತಾರು ಜಾತಿಯ ಹುಲ್ಲುಗಳ ಬೆಳವಣಿಗೆಯಿಂದ ಬಲಿ ಪ್ರಾಣಿಗಳ ಸಂಖ್ಯೆ ಏರಿಕೆ ಕಂಡು, ಆನೆ, ಹುಲಿ, ಚಿರತೆಗಳ ವಂಶಾಭಿವೃದ್ಧಿಗೆ ನೆರವಾಗುತ್ತದೆ.

ಬಿಆರ್‌ಟಿ ಅರಣ್ಯ ಸುಮಾರು 550 ಚದರ ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಆವರಿಸಿದ್ದು, ವೈವಿಧ್ಯಮಯ ಜೀವ ಪರಿಸರ ರೂಪುಗೊಳ್ಳಲು ಕಾರಣವಾಗಿದೆ ಎನ್ನುತ್ತಾರೆ ಏಟ್ರೀ ಸಂಸ್ಥೆಯ ಸಂಶೋಧಕ ಸಿ.ಮಾದೇಗೌಡ.

ಅರಣ್ಯ ಅಭಿವೃದ್ಧಿ ಹಾಗೂ ವನ್ಯಜೀವಿಗಳ ಸಮೃದ್ಧತೆಗೆ ಅರಣ್ಯ ಇಲಾಖೆ ಹಲವು ಉಪಯುಕ್ತ ಕ್ರಮ ಕೈಗೊಂಡಿದ್ದು, ಕಾಡಿನ ಪ್ರಮಾಣ ಗಣನೀಯ ಏರಿಕೆ ಕಂಡಿದೆ. ಅಳಿನಿನಂಚಿನ ಜೀವಿಗಳಿಗೆ ಉಸಿರು ನೀಡುವ ತಾಣವಾಗಿದೆ, ಪ್ರಾಣಿ ಬೇಟೆ ಪ್ರಕರಣಗಳು ಸಾಕಷ್ಟು ಕಡಿಮೆಯಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಏಕಜಾತಿ ಸಸ್ಯಗಳ ಹೆಚ್ಚಳ: ಆತಂಕ

ಮಳೆಗಾಲದಲ್ಲಿ ಅರಣ್ಯ ಮೈದುಂಬಿದರೆ ಮತ್ತೊಂದೆಡೆ ಏಕ ಜಾತಿಯ ಸಸ್ಯಸಂಕುಲಗಳ ಸಂಖ್ಯೆಯೂ ಹೆಚ್ಚುತ್ತಿದ್ದು ಆತಂಕ ಎದುರಾಗಿದೆ. ಜೇನು, ಚಿಟ್ಟೆ ಮತ್ತಿತರ ಕೀಟಗಳನ್ನು ಪೋಷಿಸುವ ಬೆಜ್ಜೆ, ಮತ್ತಿ, ದೊಳ್ಳಿ, ಚೌವೆ, ನೇರಳೆ, ಕರ್ವಾಡಿ, ಬೆಂಡೆ, ಹೊನ್ನೆ, ಅರಳೆ, ಕೆಸಿಲು, ಕೆಂಡೆ, ಜಾಲ, ಬೂರಗ ತಳಿಗಳ ಸಂತತಿ ಕುಸಿಯುತ್ತಿದೆ. ಕುಮಾವು, ಕಾಂಧೂಪ, ಕಕ್ಕೆ, ಬೈಸೆ, ಹೆಬ್ಬಿದಿರು ಹಾಗೂ ಐದಾರು ಜಾತಿಯ ಹುಲ್ಲುಗಳನ್ನು ಉಳಿಸುವತ್ತ ಗಮನ ಹರಿಸಬೇಕು ಎಂದು ವಿವೇಕಾನಂದ ಸ್ವಯಂ ಸೇವಾ ಸಂಸ್ಥೆಯ ಮಲ್ಲೇಶಪ್ಪ ಹೇಳುತ್ತಾರೆ.

ಅರಣ್ಯಗೆ ಹೊಂದಿಕೊಂಡಿರುವ ರಸ್ತೆ ಬದಿಯಲ್ಲಿ ಅಡ್ಡಾಡುತ್ತಿರುವ ಕಾಡೆಮ್ಮೆ
ದಟ್ಟ ಕಾನನದಲ್ಲಿ ಕಾಣಿಸಿಕೊಂಡ ಹುಲಿ

ಕಾಡು ಸ್ವಚ್ಛ ಮಾಡುವ ಹುಲಿ

ಕಾನನದಲ್ಲಿ ಸಹಜವಾಗಿ ಮೃತಪಡುವ ಜೀವಿಗಳನ್ನು ಹುಲಿ ಭಕ್ಷಿಸುತ್ತವೆ. ಚಿರತೆಗಳು ಬೇಟೆಯಾದಿ ಜೀವಿಗಳನ್ನು ವೃಕ್ಷಗಳಲ್ಲಿ ಇಟ್ಟುಕೊಂಡು ಹಸಿವು ನೀಗಿಸಿಕೊಳ್ಳುತ್ತದೆ. ಅಳಿದುಳಿದ ಕೊಳೆತ ಪದಾರ್ಥಗಳನ್ನು ಪಕ್ಷಿ ಪ್ರಾಣಿಗಳು ಸೇವಿಸಿ ವನ್ಯ ಪ್ರದೇಶವನ್ನು ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗುತ್ತವೆ. ಇಂತಹ ಖಗ ಮೃಗಗಳ ಜೀವಜಾಲವನ್ನು ರಕ್ಷಿಸಬೇಕು ಎನ್ನುತ್ತಾರೆ ಪರಿಸರ ಪ್ರಿಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.