ADVERTISEMENT

ಬಿಆರ್‌ಟಿ ಅಧಿಕಾರಿಗಳ ಕಾರ್ಯಾಚರಣೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 11:33 IST
Last Updated 14 ಆಗಸ್ಟ್ 2019, 11:33 IST

ಚಾಮರಾಜನಗರ: ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಎರಡು ಪ್ರಕರಣಗಳಲ್ಲಿ ಅಕ್ರಮವಾಗಿ ತೇಗ ಸಂಗ್ರಹಿಸಿಟ್ಟಿದ್ದ ವ್ಯಕ್ತಿ ಹಾಗೂ ಗಂಧದ ಮರ ಕಡಿಯುತ್ತಿದ್ದ ಮತ್ತೊಬ್ಬನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.‌

ಮೂಕನಪಾಳ್ಯ ಗ್ರಾಮದ ಲಕ್ಷ್ಮಣ ನಾಯಕ ಮತ್ತು ಬಾಣವಾಡಿಯ ಸುರೇಶ್ ಬಂಧಿತರು. ಇವರಿಂದ 14 ತೇಗದ ತುಂಡುಗಳು ಹಾಗೂ 1 ಗಂಧದ ತುಂಡು ಜಪ್ತಿ ಮಾಡಲಾಗಿದೆ.

ಪುಣಜನೂರು ವಲಯದ ಹೊಗೆಸೊಪ್ಪುಕಟ್ಟೆ ಅರಣ್ಯ ಪ್ರದೇಶದಲ್ಲಿ ಸುರೇಶ್, ಸೋಮವಾರ ಸಂಜೆ ನಾಲ್ವರು ಸಹಚರರೊಡನೆ ಗಂಧದ ಮರ ಕಡಿಯುತ್ತಿದ್ದ. ಈ ಸಂದರ್ಭದಲ್ಲಿ ಗಸ್ತಿನಲ್ಲಿದ್ದ ಅರಣ್ಯ ರಕ್ಷಕರು ಸುರೇಶ್‌ನನ್ನು ಹಿಡಿದರು. ಸಹಚರರು ಪರಾರಿಯಾದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಮತ್ತೊಂದು ಪ್ರಕರಣದಲ್ಲಿ, ಖಚಿತ ಮಾಹಿತಿ ಮೇರೆಗೆಮೂಕನಪಾಳ್ಯ ಗ್ರಾಮದ ಲಕ್ಷ್ಮಣ ನಾಯಕ ಮನೆಯಲ್ಲಿ ಶೋಧ ನಡೆಸಿದ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ತೇಗದ ಮರದ ತುಂಡುಗಳನ್ನು ಪತ್ತೆ ಮಾಡಿದರು. ₹ 1.31 ಲಕ್ಷ ಮೌಲ್ಯದ 14 ತೇಗದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರ್‌ಎಫ್‌ಒ ಕಾಂತರಾಜು, ಎಆರ್‌ಗಳಾದ ಅಭಿಲಾಷ್, ಕೃಷ್ಣಮೂರ್ತಿ, ಸಿಬ್ಬಂದಿ ಮಹೇಂದ್ರ ಹಾಗೂ ಇತರರು ಕಾರ್ಯಾಚರಣೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.