ADVERTISEMENT

ಬಗರ್‌ಹುಕುಂ: ಸಾಗುವಳಿ ಸಕ್ರಮಕ್ಕೆ ಒತ್ತಾಯ

ಅರಕಲವಾಡಿಯಿಂದ ಜಿಲ್ಲಾಡಳಿತ ಭವನದವರಗೆ ಪಾದಯಾತ್ರೆ ನಡೆಸಿದ ಬಿಎಸ್‌ಪಿ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 16:48 IST
Last Updated 24 ಫೆಬ್ರುವರಿ 2023, 16:48 IST
ಬಗರ್‌ಹುಕುಂ ಸಕ್ರಮ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಎಸ್‌ಪಿ ಕಾರ್ಯಕರ್ತರು ಶುಕ್ರವಾರ ಪಾದಯಾತ್ರೆ ನಡೆಸಿದರು
ಬಗರ್‌ಹುಕುಂ ಸಕ್ರಮ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಎಸ್‌ಪಿ ಕಾರ್ಯಕರ್ತರು ಶುಕ್ರವಾರ ಪಾದಯಾತ್ರೆ ನಡೆಸಿದರು   

ಚಾಮರಾಜನಗರ: ಬಗರ್‌ಹುಕುಂ ಸಾಗುವಳಿ ಸಕ್ರಮಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಜಿಲ್ಲಾ ಸಮಿತಿ ಹಾಗೂ ಬಹುಜನ ವಾಲೆಂಟಿಯರ್ ಫೋರ್ಸ್ (ಬಿವಿಎಫ್‌) ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶುಕ್ರವಾರ ತಾಲ್ಲೂಕಿನ ಅರಕಲವಾಡಿಯಿಂದ ನಗರದ ಜಿಲ್ಲಾಡಳಿತ ಭವನದವರೆಗೂ ಪಾದಯಾತ್ರೆ ನಡೆಸಿದರು.

ಬೆಳಿಗ್ಗೆ 10.30ಗಂಟೆಗೆ ಅರಕಲವಾಡಿಯಿಂದ ಪಾದಯಾತ್ರೆ ಹೊರಟ ಪ್ರತಿಭಟನಕಾರರು 24 ಕಿ.ಮೀ ಕ್ರಮಿಸಿ ಮಧ್ಯಾಹ್ನ 3.10ಕ್ಕೆ ಜಿಲ್ಲಾಡಳಿತ ಭವನ ತಲುಪಿದರು.

ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ಅವರು, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಎರಡು ಮೂರು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಎಲ್ಲ ರೈತರ ಜಮೀನುಗಳನ್ನು ಸಕ್ರಮಗೊಳಿಸಬೇಕು. ಜಿಲ್ಲೆಯಲ್ಲಿ ಸುಮಾರು ಜೀತ ವಿಮುಕ್ತರಿದ್ದು, ಜೀತ ಮಾಡುತ್ತಿದ್ದವರಿಗೆ ಜೀತ ಬಿಡಿಸಿ ಜೀವನಕ್ಕಾಗಿ ತಲಾ 1ರಿಂದ 2 ಎಕರೆ ಭೂಮಿ ಮಂಜೂರು ಮಾಡಿ ಸರ್ಕಾರ ಆದೇಶ ಪತ್ರ ನೀಡಿದೆ. ಆದರೆ ಈವರೆವಿಗೂ ಭೂಮಿ ತೋರಿಸಿಲ್ಲ. ಭೂಮಿಗಾಗಿ ಕಾದು ಅನೇಕ ಜೀತವಿಮುಕ್ತರು ಪ್ರಾಣ ಕಳೆದುಕೊಂಡಿದ್ದಾರೆ. ಈಗಲಾದರೂ ಬದುಕಿರುವ ಫಲಾನುಭವಿಗಳಿಗೆ ಮತ್ತು ಕುಟುಂಬಗಳಿಗೆ ಭೂಮಿ ನೀಡಬೇಕು’ ಎಂದು ಆಗ್ರಹಿಸಿದರು.

‘ದರಖಾಸ್ತು ಭೂಮಿಯನ್ನು ದುರಸ್ತಿಗೊಳಿಸಬೇಕು. ತಕ್ಷಣವೇ ಭೂ ದಾಖಲೆ ನೀಡಬೇಕು. ಪ್ರತಿ ಗ್ರಾಮಗಳ ನಿವೇಶನಗಳಿಗೆ ಈ ಸ್ವತ್ತುಗಳನ್ನು ತ್ವರಿತಗತಿಯಲ್ಲಿ ನೀಡಬೇಕು. ಸ್ಮಶಾನವಿಲ್ಲದ ಗ್ರಾಮಗಳಿಗೆ ಕೂಡಲೇ ಸ್ಮಶಾನಕ್ಕಾಗಿ ಭೂಮಿ ನೀಡಬೇಕು. ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳಿಂದ ರೈತರ ಬೆಳೆ ಹಾನಿಯಾಗುವುದರ ಜೊತೆಗೆ ರೈತರ ಪ್ರಾಣ ಹಾನಿಯಾಗುತ್ತಿದೆ. ಕಾಡುಪ್ರಾಣಿಗಳ ಹಾವಳಿ ತಡೆಯಲು ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ನಾಗಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹ.ರಾ.ಮಹೇಶ್, ಅರಕಲವಾಡಿ ನಾಗೇಂದ್ರ, ರಾಜ್ಯ ಕಾರ್ಯದರ್ಶಿ ಕಮಲ್, ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಖಜಾಂಚಿ ರಾಜೇಂದ್ರ, ತಾಲ್ಲೂಕು ಸಂಯೋಜಕ ಎಸ್.ಪಿ.ಮಹೇಶ್, ಅಧ್ಯಕ್ಷ ಅಮಚವಾಡಿ ಪ್ರಕಾಶ್, ಉಪಾಧ್ಯಕ್ಷ ರಾಜು, ಬಿವಿಎಫ್ ಜಿಲ್ಲಾ ಸಂಯೋಜಕ ರವಿಮೌರ್ಯ, ಅಧ್ಯಕ್ಷ ಚಂದ್ರಕಾಂತ್, ಗ್ರಾಮ ಪಂಚಾಯಿತಿ ಸದಸ್ಯರಾದ ದೇವಾಲಪುರ ಶಿವಣ್ಣ, ಬಾಲು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.