ADVERTISEMENT

ಆತ್ಮಹತ್ಯೆ ಮಾಡಿಕೊಂಡಿದ್ದ ಅಭಿಮಾನಿ ಕುಟುಂಬಕ್ಕೆ ಆರ್ಥಿಕ ಬಲ ತುಂಬಿದ ಬಿಎಸ್‌ವೈ 

ಗುಂಡ್ಲುಪೇಟೆ: ಯಡಿಯೂರಪ್ಪ ನೋಡಲು ಜನ ಸಾಗರ, ಕುಟುಂಬದ ಕಷ್ಟನೋಡಿ ಮರುಗಿದ ನಾಯಕ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 3:24 IST
Last Updated 31 ಜುಲೈ 2021, 3:24 IST
ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ ರವಿಯ ತಾಯಿ ಹಾಗೂ ಸಹೋದರಿಯರನ್ನು ಯಡಿಯೂರಪ್ಪ ಅವರು ಭೇಟಿ ಮಾಡಿ ಧೈರ್ಯ ತುಂಬಿದರು
ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ ರವಿಯ ತಾಯಿ ಹಾಗೂ ಸಹೋದರಿಯರನ್ನು ಯಡಿಯೂರಪ್ಪ ಅವರು ಭೇಟಿ ಮಾಡಿ ಧೈರ್ಯ ತುಂಬಿದರು   

ಗುಂಡ್ಲುಪೇಟೆ: ತಾವು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ತಾಲ್ಲೂಕಿನ ಬೊಮ್ಮಲಾಪುರದ ಅಭಿಮಾನಿ ರವಿಯ ಮನೆಗೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಗ ವಿಜಯೇಂದ್ರ ಅವರೊಂದಿಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಮೂಲಕ ಗುಂಡ್ಲುಪೇಟೆಗೆ ಬಂದ ಯಡಿಯೂರಪ್ಪ ಅವರು ಅಲ್ಲಿಂದ ರಸ್ತೆ ಮಾರ್ಗವಾಗಿ ಬೊಮ್ಮಲಾಪುರಕ್ಕೆ ತೆರಳಿದರು.

ರವಿಯ ಮನೆಯ ಒಳಗೆ ಹೋಗಿ ಅವರ ತಾಯಿ ರೇವಮ್ಮ ಹಾಗೂ ಇಬ್ಬರು ಸಹೋದರಿಯರನ್ನು ಮಾತನಾಡಿಸಿದರು. ಮಗನ ಸಾವಿನ ದುಃಖದಿಂದ ಹೊರಬರದ ರೇವಮ್ಮ ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ರವಿಯ ಇಬ್ಬರು ಸಹೋದರಿಯರು ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ADVERTISEMENT

ಸ್ಥಳೀಯ ಶಾಸಕ ನಿರಂಜನ ಕುಮಾರ್‌ ಅವರು ಹಾಗೂ ಸ್ಥಳೀಯ ಮುಖಂಡರಿಂದ ರವಿ ಅವರ ಮನೆಯ ಸ್ಥಿತಿಗತಿ ಬಗ್ಗೆ ಮಾಹಿತಿ ತಿಳಿದುಕೊಂಡರು. ರವಿಯ ಭಾವಚಿತ್ರವನ್ನು ಕೈಯಲ್ಲಿ ಹಿಡಿದು ನೋಡಿದರು.‘ರವಿ ಇಂತಹ ನಿರ್ಧಾರ ಕೈಗೊಳ್ಳಬಾರದಿತ್ತು. ಯಾವುದೇ ಕಾರಣಕ್ಕೂ ಹೆದರಬೇಡಿ, ನಿಮ್ಮ ಜೊತೆ ನಾನಿದ್ದೇನೆ’ ಎಂದು ಧೈರ್ಯ ತುಂಬಿದರು.

‘ಈಗ ₹5 ಲಕ್ಷ ಕೊಡುತ್ತೇನೆ. ಮುಂದೆ ಇನ್ನೂ ₹5 ಲಕ್ಷ ಕಳುಹಿಸುತ್ತೇನೆ. ಅದನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಇವರಿಗೆ ಬಡ್ಡಿ ಬರುವಂತೆ ಮಾಡಿ ಕೊಡು’ ಎಂದು ನಿರಂಜನ ಕುಮಾರ್‌ ಅವರಿಗೆ ಯಡಿಯೂರಪ್ಪ ಅವರು ಸೂಚಿಸಿದರು. ಬಳಿಕ ಲಕೋಟೆಯಲ್ಲಿದ್ದ ₹ 5ಲಕ್ಷ ಹಣವನ್ನು ರವಿಯ ತಾಯಿಗೆ ನೀಡಿ ಸಂತೈಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ‘ನಾನು ರಾಜೀನಾಮೆ ನೀಡಿದ್ದರಿಂದ ಬೇಸರಗೊಂಡು ನನ್ನ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದು ದುಃಖದ ಸಂಗತಿ. ಅತಿಯಾದ ಪ್ರೀತಿ ವಿಶ್ವಾಸ ಇಂತಹ ಘಟನೆಗೆ ಕಾರಣವಾಗಿದೆ. ಈ ರೀತಿಯ ನಿರ್ಧಾರವನ್ನು ಯಾರೂ ತೆಗೆದುಕೊಳ್ಳಬಾರದರು. ರವಿಯ ಮನೆಯಲ್ಲಿ ತಾಯಿ ಮತ್ತು ಇಬ್ಬರು ಸಹೋದರಿಯರಿದ್ದಾರೆ. ಇಬ್ಬರಿಗೂ ಮದುವೆಯಾಗಿಲ್ಲ. ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವಾಗುವುದು ಕರ್ತವ್ಯ ಎಂದು ಇಲ್ಲಿಗೆ ಬಂದಿದ್ದೇನೆ’ ಎಂದರು.

ತಾರತಮ್ಯ ಮಾಡಿಲ್ಲ:ಆಮ್ಲಜನಕ ಕೊರತೆಯಾಗಿ 36 ಜನರು ಮೃತಪಟ್ಟಾಗ ಜಿಲ್ಲೆಗೆ ಬಂದಿಲ್ಲ, ಅಭಿಮಾನಿ ಮೃತಪಟ್ಟಾಗ ಬಂದಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ‘ಉಸ್ತುವಾರಿ ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಇದ್ದು ಎಲ್ಲ ಕೆಲಸ ಮಾಡಿದ್ದಾರೆ. ಮೃತರಾದ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡಲು ವ್ಯವಸ್ಥೆ ಮಾಡಿದ್ದೇವೆ. ಯಾರಿಗೂ ತಾರತಮ್ಯ ಮಾಡಿಲ್ಲ’ ಎಂದು ಹೇಳಿದರು.

ಶಾಸಕರಾದ ಸಿ.ಎಸ್.ನಿರಂಜನಕುಮಾರ್, ಎನ್.ಮಹೇಶ್, ಎಸ್.ಆರ್.ವಿಶ್ವನಾಥ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ, ಮಂಡಲ ಅಧ್ಯಕ್ಷ ದೊಡ್ಡಹುಂಡಿ ಜಗದೀಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್, ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಇತರರು ಇದ್ದರು.

ಯಡಿಯೂರಪ್ಪ ನೋಡಲು ಜನಸಾಗರ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಯಡಿಯೂರಪ್ಪ ಅವರ ಮೊದಲ ಹೊರ ಜಿಲ್ಲೆ ಭೇಟಿ ಇದು. ಚಾಮರಾಜನಗರ ಭಾಗದಲ್ಲಿ ಅವರ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿದ್ದು, ಶುಕ್ರವಾರ ಅವರನ್ನು ಕಾಣಲು ಜನಸಾಗರವೇ ನೆರೆದಿತ್ತು. ತಾಲ್ಲೂಕಿನವರಲ್ಲದೇ ಚಾಮರಾಜನಗರ ತಾಲ್ಲೂಕಿನ ಜನರು ಕೂಡ ಬಂದಿದ್ದರು.

ಗುಂಡ್ಲುಪೇಟೆ ಹೆಲಿಪ್ಯಾಡ್‌ ಸುತ್ತಲೂ ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿ ಸಾವಿರಾರು ಜನರು ನೆರೆದಿದ್ದರು.

‘ಅಪ್ಪಾಜಿಗೇ ಜೈ’, ‘ರಾಜಾಹುಲಿಗೇ ಹೈ’ ಎಂದು ಜೈಕಾರ ಹಾಕಿದರು. ಅಭಿಮಾನಿಗಳ ಪ್ರೀತಿಗೆ ಯಡಿಯೂರಪ್ಪ ಕೈ ಮುಗಿದು ಕೃತಜ್ಞತೆ ತಿಳಿಸಿದರು.ಗುಂಡ್ಲುಪೇಟೆ ಪಟ್ಟಣದಿಂದ ಬೊಮ್ಮಲಾಪುರ ಗ್ರಾಮದವರೆಗೆ ಅವರು ಕಾರಿನಲ್ಲಿ ಸಂಚರಿಸುತ್ತಿದ್ದಾಗ ಗ್ರಾಮಗಳಲ್ಲಿ ಮತ್ತು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ರಸ್ತೆ ಬದಿಯಲ್ಲಿ ಸಾಲುಗಟ್ಟಿ ನಿಂತಿದ್ದರು.

ಬೊಮ್ಮಲಾಪುರ ಗ್ರಾಮದಲ್ಲಿ ಬಿಎಸ್‌ವೈ ಅವರನ್ನು ನೋಡಲು ಮಹಿಳೆಯರು, ಮಕ್ಕಳು ಕೂಡ ಸೇರಿದ್ದರು.

ಅಭಿಮಾನಿಗಳನ್ನು ಕಂಡು ಪುಳಕಿತರಾದ ಬಿಎಸ್‌ವೈ ಅವರು, ಸುದ್ದಿಗಾರರೊಂದಿಗೆ ಮಾತನಾಡುವಾಗ, ‘ನಾನು ಅಧಿಕಾರದಲ್ಲಿ ಇಲ್ಲದಿದ್ದರೂ, ಸಾಕಷ್ಟು ಜನ ನನ್ನನ್ನು ಬೆಂಬಲಿಸುತ್ತಾರೆ ಎಂಬುದಕ್ಕೆ ಇದು ಉದಾಹರಣೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.