ADVERTISEMENT

ಕರ್ನಾಟಕ ಬಜೆಟ್ | ಯಳಂದೂರು; ಮೇಲ್ದರ್ಜೆಗೇರಲಿದೆಯೇ ತಾಲ್ಲೂಕು ಆಸ್ಪತ್ರೆ?

ಯಳಂದೂರು ಪ್ರವಾಸೋದ್ಯಮಕ್ಕಿಲ್ಲ ನೆಲೆ; ಸ್ಥಳೀಯರ ಅಭಿಪ್ರಾಯಕ್ಕಿಲ್ಲ ಬೆಲೆ

ನಾ.ಮಂಜುನಾಥ ಸ್ವಾಮಿ
Published 18 ಫೆಬ್ರುವರಿ 2022, 19:31 IST
Last Updated 18 ಫೆಬ್ರುವರಿ 2022, 19:31 IST
ಯಳಂದೂರು ತಾಲ್ಲೂಕಿನ ಆಮೆಕೆರೆ ವ್ಯಾಪ್ತಿಯ ಕೆರೆಯಿಂದ ಕೃಷಿ ಭೂಮಿಗೆ ಹರಿಯುತ್ತಿರುವ ನೀರು
ಯಳಂದೂರು ತಾಲ್ಲೂಕಿನ ಆಮೆಕೆರೆ ವ್ಯಾಪ್ತಿಯ ಕೆರೆಯಿಂದ ಕೃಷಿ ಭೂಮಿಗೆ ಹರಿಯುತ್ತಿರುವ ನೀರು   

ಯಳಂದೂರು:ತಾಲ್ಲೂಕು ವಿಸ್ತೀರ್ಣದಲ್ಲಿ ಚಿಕ್ಕದಾದರೂ, ಜಿಲ್ಲೆಯ ಹೃದಯ ಭಾಗದಲ್ಲಿದೆ. ಅಪಾರ ಜನರು ಪಟ್ಟಣದ ಮೂಲಕ ನಿತ್ಯವೂ ಸಂಚರಿಸುತ್ತಾರೆ. ತಾಲ್ಲೂಕು ಕೇಂದ್ರವಾಗಿರುವ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಬೇಕಿದೆ.

ಪಟ್ಟಣದಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಬೇಕು ಎಂಬ ಕೂಗು ಹಲವು ವರ್ಷಗಳಿಂದಲೇ ಕೇಳಿ ಬರುತ್ತಿದೆ. ಇದಕ್ಕಾಗಿ ₹ 16 ಕೋಟಿ ಅಗತ್ಯವಿದೆ. ಜಿಲ್ಲಾ ಆರೋಗ್ಯ ಇಲಾಖೆ ಈಗಾಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಿ ಇಲಾಖೆಗೆ ಕಳುಹಿಸಿದೆ. ಸರ್ಕಾರ ಇನ್ನೂ ಹಣ ಮಂಜೂರು ಮಾಡಲು ಮನಸ್ಸು ಮಾಡಿಲ್ಲ.

ಪ್ರತಿ ವರ್ಷ ಬಜೆಟ್‌ ಸಂದರ್ಭದಲ್ಲಿ ವಿಶೇಷ ಅನುದಾನಕ್ಕಾಗಿ ಕೂಗು ಕೇಳಿ ಬರುತ್ತದೆ. ಬಜೆಟ್‌ನಲ್ಲಿ ಘೋಷಣೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ತಾಲ್ಲೂಕಿನ ಜನರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಇರುತ್ತಾರೆ. ಆದರೆ, ಈವರೆಗೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿಲ್ಲ. ಶಾಸಕ ಎನ್‌.ಮಹೇಶ್‌ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗಳಲ್ಲಿ ಈ ವಿಚಾರವನ್ನು ಪದೇ ಪದೇ ಪ್ರಸ್ತಾಪಿಸುತ್ತಿರುತ್ತಾರೆ. ಹಾಗಿದ್ದರೂ ಪ್ರಯೋಜನವಾಗಿಲ್ಲ.

ADVERTISEMENT

ಸದ್ಯ ಯಳಂದೂರಿನಲ್ಲಿ 30 ಹಾಸಿಗೆಗಳ ಆಸ್ಪತ್ರೆ ಇದೆ. ಆಸ್ಪತ್ರೆ ಮೇಲ್ದರ್ಜೆಗೇರಿಸಿದರೆ ಸಂತೇಮರಹಳ್ಳಿ, ಕೊಳ್ಳೇಗಾಲ, ಚಾಮರಾಜನಗರಕ್ಕೆ ತೆರಳುವುದು ತಪ್ಪಲಿದೆ. ಇದರೊಂದಿಗೆ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆಯಿದೆ. ಬಹುತೇಕ ಸಂದರ್ಭಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಜನರು ಮೈಸೂರು ಅಥವಾ ಬೆಂಗಳೂರಿಗೆ ಹೋಗಬೇಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಾರಿಯ ಬಜೆಟ್‌ನಲ್ಲಾದರೂ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಅನುದಾನ ಘೋಷಣೆ ಮಾಡಬೇಕು ಎಂಬುದು ಪಟ್ಟಣಿಗರ ಒತ್ತಾಯ.

ಏತ ನೀರಾವರಿ:ಆಮೆಕೆರೆ ಸಮೀಪದ ಹೊಸಹಳ್ಳಿ ಕೆರೆಗೆ ಏತ ನೀರಾವರಿ ಮೂಲಕ ಕಬಿನಿ ನಾಲೆಯಿಂದ ನೀರನ್ನುಹರಿಸುವ ಯೋಜನೆ 15 ವರ್ಷದಿಂದ ನನೆಗುದಿಗೆ ಬಿದ್ದಿದೆ. ಕಾಡಂಚಿನ ಪ್ರದೇಶದ ಅಂತರ್ಜಲಮಟ್ಟದ ಕೊರತೆ ನೀಗಲು, ಈ ಭಾಗದ ಕೃಷಿಕರು ಯೋಜನೆಯ ಅನುಷ್ಠಾನಕ್ಕೆ ಕಾದಿದ್ದಾರೆ.

ಸರ್ಕಾರ ಯೋಜನೆಗೆ ನೆರವಾದಲ್ಲಿ ಅನ್ನದಾತರಿಗೆ ನೆಮ್ಮದಿ ಸಿಗಲಿದೆ. ಅಗರ ಮತ್ತು ಕಸಬಾ ಹೋಬಳಿಯ ಕೆರೆಗಳ ಹೂಳು ತೆಗೆಸಿ, ನೀರು ನಿಲ್ಲುವಂತೆ ಮಾಡಬೇಕು. ತಾಲ್ಲೂಕಿನ ಜೀವ ನದಿ ಸುವರ್ಣಾವತಿ ನದಿಯಲ್ಲಿ ವರ್ಷ ಪೂರ್ತಿ ನೀರು ಹರಿಸಿ, ಕೊಳವೆ ಬಾವಿ, ಕೆರೆ-ಕಟ್ಟೆಗಳ ಅಂತರ್ಜಲ ಹೆಚ್ಚಿಸುವ ಯೋಜನೆಗೆ ಚಾಲನೆ ಸಿಗಬೇಕು ಎಂಬುದು ಹಲವು ದಶಕಗಳ ಜನರ ಕನಸುಈಡೇರುವುದೇ ಎಂಬುದನ್ನು ಕಾದು ನೋಡಬೇಕಿದೆ.

ಧಾರ್ಮಿಕ ತಾಣ ಮೂಲೆಗುಂಪು:ತಾಲ್ಲೂಕಿನ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು ಎನ್ನುವ ಬೇಡಿಕೆಪ್ರತಿ ಸಲ ಕೇಳಿ ಬರುತ್ತಲೇ ಇದೆ. ಪರಿಸರ ಪ್ರಿಯರು, ಸಂಘ-ಸಂಸ್ಥೆಗಳ ಸದಸ್ಯರುಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳು ಮೌನವಹಿಸಿದ್ದು, ಅಭಿವೃದ್ಧಿ ನಿಂತ ನೀರಾಗಿದೆ. ಪ್ರವಾಸಿ ತಾಣವನ್ನು ಅಭಿವೃದ್ಧಿ ಪಡಿಸಿದರೆ, ಯುವ ಜನರಿಗೆ ಉದ್ಯೋಗ ಅವಕಾಶ ಲಭ್ಯವಾಗಲಿದೆ.ಹೋಟೆಲ್,ಹೋಂ ಸ್ಟೇ ನಿರ್ಮಾಣ ಆಗಲಿದೆ. ಇದರಿಂದ ತುಸು ವರಮಾನವೂ ಕೈಸೇರಲಿದೆ. ಆದರೆ, ಈ ಬಗ್ಗೆಅಧಿಕಾರಿಗಳು ಯಾರ ಅಭಿಪ್ರಾಯ ಸಂಗ್ರಹಿಸುತ್ತಿಲ್ಲ. ಕಾಲಕಾಲಕ್ಕೆ ಹಳೆಯಕಡತಗಳನ್ನು ಬಜೆಟ್ ಸಂದರ್ಭದಲ್ಲಿ ಬೆಂಗಳೂರಿಗೆ ಕಳುಹಿಸಿ ಕೈತೊಳೆದುಕೊಳ್ಳುತ್ತಾರೆಎಂಬುದು ಜನರ ದೂರು.

‘ಪಿಡಬ್ಲ್ಯುಡಿ ಕಚೇರಿ ಬೇಕು’
ತಾಲ್ಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತದೆ. ಕಾಲುವೆ, ಕೊಳವೆ, ಕೆರೆ ನೀರಾವರಿ ಯೋಜನೆಗಳಿವೆ. ಆದರೆ, ಕಾಲುವೆ ನಿರ್ಮಾಣಕ್ಕೆ ಭೂಮಿ ಬಿಟ್ಟುಕೊಟ್ಟ ರೈತರಿಗೆ ಹೊಲ ಗದ್ದೆಗಳಿಗೆ ತೆರಳಲು ಸರ್ವಋತು ರಸ್ತೆಗಳಿಲ್ಲ. ಸಂಬಂಧಪಟ್ಟ ಕಚೇರಿಗಳುಕೊಳ್ಳೇಗಾಲದಲ್ಲಿವೆ. ಇದರಿಂದ ಸಮಸ್ಯೆಗಳ ನಿವಾರಣೆಗೆ ಸಾರ್ವಜನಿಕರು ಅಲೆಯಬೇಕಿದೆ. ಪಟ್ಟಣದಲ್ಲಿ ಕಬಿನಿ ಮತ್ತು ಪಿಡಬ್ಲ್ಯೂಬಿ ಕಚೇರಿಗಳನ್ನು ಸ್ಥಾಪಿಸಲುರಾಜ್ಯ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷಹೊನ್ನೂರು ಪ್ರಕಾಶ್ ಹೇಳಿದರು.

‘ಸಮಗ್ರ ಯೋಜನೆ ರೂಪಿಸಿ’
‘ಬಿಳಿಗಿರಿಬೆಟ್ಟ, ಮಾಂಬಳ್ಳಿ, ಅಗರ, ಮದ್ದೂರು, ಯಳಂದೂರು ಸುತ್ತಮುತ್ತ ಐತಿಹಾಸಿಕಸ್ಮಾರಕ, ದೇವಳ ಹಾಗೂ ಪವಿತ್ರ ಯಾತ್ರ ಸ್ಥಳಗಳಿವೆ. ನೆರೆ ರಾಜ್ಯದ ಪ್ರವಾಸಿಗರುಬರುತ್ತಾರೆ. ಆದರೆ, ಮೂಲ ಸೌಕರ್ಯಗಳ ಕೊರತೆಯಿಂದ ದೇಶ-ವಿದೇಶದ ಜನರು ಬರಲುಹಿಂದೇಟು ಹಾಕುವಂತೆ ಆಗಿದೆ. ಹಾಗಾಗಿ, ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು, ಪ್ರಾಕೃತಿಕಮತ್ತು ಚಾರಿತ್ರಿಕ ತಾಣಗಳು, ಅಣೆಕಟ್ಟೆಸುತ್ತಲ ಸೌಂದರ್ಯ ಹೆಚ್ಚಿಸಬೇಕು. ಪಟ್ಟಣದ ವಸ್ತುಸಂಗ್ರಹಾಲಯ ಹಾಗೂಬಿಳಿಗಿರಿರಂಗನ ಬೆಟ್ಟಗಳ ತಾಣಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಬೇಕು’ ಎನ್ನುತ್ತಾರೆ ಬಿಳಿಗಿರಿರಂಗನಬೆಟ್ಟ ಮಾಜಿ ಧರ್ಮದರ್ಶಿ ದೊರೆಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.