ADVERTISEMENT

ಜಲಾಶಯಗಳಿಂದ ನೀರು, ಹೆಚ್ಚಿದ ಕಾವೇರಿ ಮಟ್ಟ: ನದಿ ಪಾತ್ರದ ಜನರಿಗೆ ಎಚ್ಚರಿಕೆ

ಕಾವೇರಿ ನದಿ ತೀರದಲ್ಲಿ ಕಟ್ಟೆಚ್ಚರ; ಭೋರ್ಗರೆಯುತ್ತಿದೆ ಭರಚುಕ್ಕಿ ಜಲಪಾತ

ಅವಿನ್ ಪ್ರಕಾಶ್
Published 30 ಅಕ್ಟೋಬರ್ 2021, 1:01 IST
Last Updated 30 ಅಕ್ಟೋಬರ್ 2021, 1:01 IST
ಕಾವೇರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಶಿವನಸಮುದ್ರದ ಬಳಿಯ ಭರಚುಕ್ಕಿಯ ಭೋರ್ಗರೆಯುವಿಕೆ ಹೆಚ್ಚಾಗಿದೆ
ಕಾವೇರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಶಿವನಸಮುದ್ರದ ಬಳಿಯ ಭರಚುಕ್ಕಿಯ ಭೋರ್ಗರೆಯುವಿಕೆ ಹೆಚ್ಚಾಗಿದೆ   

ಕೊಳ್ಳೇಗಾಲ: ಕೆಆರ್‌ಎಸ್‌, ಕಬಿನಿ ಜಲಾಶಯದಿಂದ ನೀರನ್ನು ನದಿಗೆ ಬಿಡುತ್ತಿರುವುದರಿಂದ ತಾಲ್ಲೂಕಿನಲ್ಲಿ ಹರಿಯುವ ಕಾವೇರಿ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ನದಿ ಪಾತ್ರದ ಗ್ರಾಮಗಳ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ.

ಸತತ ಮಳೆಯಿಂದ ಕೆಆರ್‌ಎಸ್‌ ಜಲಾಶಯದ ಒಳಹರಿವು ಗಣನೀಯವಾಗಿ ಹೆಚ್ಚಿದ್ದು, ಜಲಾಶಯ ಭರ್ತಿಯಾಗಿದೆ. ಈ ಕಾರಣದಿಂದ 20 ಸಾವಿರ ಕ್ಯುಸೆಕ್‌ನಷ್ಟು ನೀರನ್ನು ಹೊರ ಬಿಡಲಾಗುತ್ತಿದೆ. ಕಬಿನಿ ಜಲಾಶಯದಿಂದಲೂ 2000 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ನದಿಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.

ತಾಲ್ಲೂಕಿನಮುಳ್ಳೂರು, ದಾಸನಪುರ, ಹಳೇ ಹಂಪಾಪುರ, ಹರಳೆ, ಸರಗೂರು, ಧನಗೆರೆ, ಸತ್ತೇಗಾಲ, ಯಡಕುರಿಯಾ ಗ್ರಾಮಗಳು ನದಿ ಪಾತ್ರದಲ್ಲಿದ್ದು, ಕಾವೇರಿ ಉಕ್ಕಿ ಹರಿದರೆ ಪ್ರವಾಹ ಸ್ಥಿತಿ ನಿರ್ಮಾಣವಾಗುತ್ತದೆ.

ADVERTISEMENT

ಸದ್ಯ ಪ್ರವಾಹದ ಸ್ಥಿತಿ ಇಲ್ಲವಾದರೂ ಜಲಾಶಯಗಳಿಂದ ಇನ್ನೂ ಹೆಚ್ಚು ನೀರು ಹರಿಸಿದರೆ, ನೆರೆ ಉಂಟಾಗುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ.

ಎರಡನೇ ಬಾರಿ ಮೈದುಂಬಿದ ಕಾವೇರಿ: ಈ ವರ್ಷದಲ್ಲಿ ಕಾವೇರಿ ತಾಲ್ಲೂಕಿನಲ್ಲಿ ಮೈದುಂಬಿ ಹರಿಯುತ್ತಿರುವುದು ಇದು ಎರಡನೇ ಬಾರಿ. ಹಿಂದೆ ಮುಂಗಾರು ಆರಂಭದ ಸಂದರ್ಭದಲ್ಲಿ ಕಬಿನಿ ಜಲಾಶಯದಿಂದ ಹೆಚ್ಚು ನೀರು ಬಿಟ್ಟಿದ್ದಾಗ, ನದಿಯಲ್ಲಿ ಹೆಚ್ಚು ನೀರು ಹರಿದಿತ್ತು.

ಜಲಾಶಯದಿಂದ ನೀರು ಬಿಟ್ಟಿರುವ ವಿಷಯ ತಿಳಿದ ತಕ್ಷಣವೇ ಸ್ಥಳೀಯರು, ತಾಲ್ಲೂಕಿನ ಸುತ್ತ ಮುತ್ತಲಿನ ಜನರು ಕಾವೇರಿ ನದಿಯತ್ತ ಮುಖ ಮಾಡಿದ್ದಾರೆ. ತಾಲ್ಲೂಕಿನ ದಾಸನಪುರ ಗ್ರಾಮದ ಹೊಸ ಸೇತುವೆಯ ಮೇಲೆ ಹಾಗೂ ನದಿಯ ದಡದಲ್ಲಿ ನಿಂತು ಜನರು ಪರಸ್ಪರ ಜೊತೆಯಲ್ಲಿ ಖುಷಿಯಿಂದ ಸೆಲ್ಫಿ ಕ್ಲಿಕ್ಕಿಸಿ ಕೊಳ್ಳುತ್ತಿದ್ದಾರೆ.

‘ಒಂದೇ ವರ್ಷದಲ್ಲಿ ಎರಡು ಬಾರಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಆ ಕಾರಣದಿಂದ ಈ ವರ್ಷ ನಾಡಿಗೆ ಒಳ್ಳೆಯಾಗುತ್ತದೆ’ ಎಂದು ಹೇಳುತ್ತಾರೆ ದಾಸನಪುರ ಗ್ರಾಮದ ನಂಜಮ್ಮ.

ಭರಚುಕ್ಕಿಯತ್ತ ಜನ: ನದಿ ನೀರು ಹೆಚ್ಚಾದ ಕಾರಣ ಪ್ರವಾಸಿಗರು ಭರಚುಕ್ಕಿಯತ್ತ ಮುಖ ಮಾಡಿದ್ದಾರೆ. ಜಲಪಾತದಲ್ಲಿ ನೀರಿನ ಭೋರ್ಗರೆಯುವಿಕೆ ಹೆಚ್ಚಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ಸುಪ್ರಸಿದ್ದ ವೆಸ್ಲಿ ಸೇತುವೆಯ ಬಳಿ ನೀರಿನ ಸೆಳೆತ ಹೆಚ್ಚಾಗಿರುವುದರಿಂದ ಜನರು ನೀರಿಗೆ ಇಳಿಯುವುದಕ್ಕೆ ಹಾಗೂ ವೆಸ್ಲಿ ಸೇತುವೆ ಮೇಲೆ ಓಡಾಡುವುದಕ್ಕೆ ತಡೆ ಒಡ್ಡಲಾಗಿದೆ.

ನದಿ ಪಾತ್ರದ ಜನರಿಗೆ ಎಚ್ಚರಿಕೆ

ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ ನದಿ ತೀರದ 9 ಗ್ರಾಮಗಳ ನಿವಾಸಿಗಳಿಗೆ ತಾಲ್ಲೂಕು ಆಡಳಿತ ಎಚ್ಚರಿಕೆ ನೀಡಿದೆ.

ಯಾರೊಬ್ಬರು ನದಿ ತೀರಕ್ಕೆ ಹೋಗಬಾರದು. ಜಾನುವಾರುಗಳನ್ನು ಹೊಡೆದುಕೊಂಡು ಹೋಗಬೇಡಿ ಎಂದು ಆಡಳಿತ ಟಾಂಟಾಂ ಹೊಡೆಸಿದೆ.

‘ನದಿ ತೀರದ ಗ್ರಾಮಗಳಿಗೆ ಗ್ರಾಮ ಲೆಕ್ಕಿಗರನ್ನು ಈಗಾಗಲೇ ನಿಯೋಜನೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಅವರು ಗ್ರಾಮ ತೊರೆಯುವಂತಿಲ್ಲ. ನಾವು ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದೇವೆ’ ಎಂದು ತಹಶೀಲ್ದಾರ್ ಕುನಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ನದಿ ತೀರದ ಬಳಿ ಯಾರೂ ಹೋಗಬಾರದು ಎಂದು ಟಾಂಟಾಂ ಮಾಡಿದ್ದೇವೆ. ತಾಲ್ಲೂಕು ಆಡಳಿತದ ಸೂಚನೆಯನ್ನು ಪಾಲಿಸುತ್ತೇವೆ
- ಮಹದೇವ, ದಾಸನಪುರ ಗ್ರಾಮದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.