ADVERTISEMENT

ಚಾಮರಾಜನಗರ | 7,000 ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ ವಾಣಿಜ್ಯ, ಶಿಕ್ಷಣ, ವ್ಯಾಪಾರಿ ಕೇಂದ್ರಗಳ ಎದುರು ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 6:24 IST
Last Updated 20 ಜೂನ್ 2025, 6:24 IST
ಸಿಸಿಟಿವಿ ಕ್ಯಾಮೆರಾ
ಸಿಸಿಟಿವಿ ಕ್ಯಾಮೆರಾ    

ಚಾಮರಾಜನಗರ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಾಗೂ ಅಪರಾಧ ಕೃತ್ಯಗಳನ್ನು ಬೇಧಿಸಲು ಜಿಲ್ಲಾ ಪೊಲೀಸ್ ಇಲಾಖೆ ‘ಸಾರ್ವಜನಿಕ ಸುರಕ್ಷಾ ಕಾಯ್ದೆ’ಯನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡಿದೆ.

ನಾಗರಿಕರಿಗೆ ಸಾರ್ವಜನಿಕ ಸುರಕ್ಷಾ ಕಾಯ್ದೆಯ ಕುರಿತು ಅರಿವು ಮೂಡಿಸುವುದರ ಜೊತೆಗೆ ಜನರ ಸಹಭಾಗಿತ್ವದೊಂದಿಗೆ ಜಿಲ್ಲೆಯಾದ್ಯಂತ 7,227 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳನ್ನು ತಗ್ಗಿಸುವ ಹಾಗೂ ಪ್ರಕರಣಗಳನ್ನು ತ್ವರಿತವಾಗಿ ಬೇಧಿಸಲು ಇಲಾಖೆ ಒತ್ತು ನೀಡಿದೆ.

ಜಿಲ್ಲೆಯ ವ್ಯಾಪ್ತಿಗೊಳಪಡುವ 15 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಪ್ರಮುಖ ವಾಣಿಜ್ಯ ಮಳಿಗೆಗಳು, ಶಿಕ್ಷಣ ಸಂಸ್ಥೆ, ಮುಖ್ಯ ರಸ್ತೆ, ಜನನಿಬಿಡ ಸ್ಥಳ, ಬ್ಯಾಂಕ್‌, ಬಸ್ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿದೆ. ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ ಎಂಬ ನಿಖರ ಮಾಹಿತಿ ಅರಿಯಲು ಜಿಯೋ ಟ್ಯಾಗಿಂಗ್ ಮಾಡಿದೆ.

ADVERTISEMENT

ಏನಿದು ಜಿಯೋ ಟ್ಯಾಗಿಂಗ್: ಮೊಬೈಲ್ ಕಂಪಾನಿಯನ್‌ ಫಾರ್ ಕ್ರೈಮ್ ಅಂಡ್ ಕ್ರಿಮಿನಲ್ ಟ್ರಾಕಿಂಗ್ ಸಿಸ್ಟಂ (ಎಂಸಿಸಿಟಿಎನ್‌ಎಸ್‌) ಆ್ಯಪ್ ಮೂಲಕ ಸಿಸಿಟಿವಿ ಕ್ಯಾಮೆರಾಗಳ ಜಿಯೋ ಟ್ಯಾಗಿಂಗ್ ಮಾಡಲಾಗಿದೆ. ಈ ವ್ಯವಸ್ಥೆ ಬಳಸಿಕೊಂಡು ಅಪರಾಧ ಕೃತ್ಯಗಳು ನಡೆದ ಸ್ಥಳದಲ್ಲಿರುವ ಹಾಗೂ ಸುತ್ತಮುತ್ತಲಿನ ಜಾಗಗಳಲ್ಲಿ ಯಾವೆಲ್ಲ ಸಿಸಿಟಿವಿ ಕ್ಯಾಮೆರಾಗಳು ಇವೆ ಎಂಬ ನಿಖರ ಮಾಹಿತಿ ಪಡೆಯಬಹುದು.

ಮಾಹಿತಿಯ ಆಧಾರದಲ್ಲಿ ತುರ್ತಾಗಿ ಸ್ಥಳಕ್ಕೆ ಧಾವಿಸಿ ಸಂಬಂಧಪಟ್ಟ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಪರಾಧಿಗಳನ್ನು ಪತ್ತೆ ಹಚ್ಚಬಹುದು ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ.

ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ: ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 485, ಚಾಮರಾಜನಗರ ಪೂರ್ವ ಠಾಣೆ ವ್ಯಾಪ್ತಿಯಲ್ಲಿ 326, ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 269, ನಗರ ಠಾಣೆ 859, ಗುಂಡ್ಲುಪೇಟೆ 1019, ಹನೂರು 918, ಕೊಳ್ಳೇಗಾಲ ಗ್ರಾಮಾಂತರ 372, ಕೊಳ್ಳೇಗಾಲ ನಗರ 966, ಕುದೇರು 338, ಎಂಎಂ ಹಿಲ್ಸ್‌ 309, ಮಾಂಬಳ್ಳಿ166, ರಾಮಾಪುರ 260, ಸಂತೇಮರಹಳ್ಳಿ 298, ತೆರಕಣಾಂಬಿ 483, ಯಳಂದೂರು ಠಾಣೆ ವ್ಯಾಪ್ತಿಯಲ್ಲಿ 159 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ.

ಪೊಲೀಸ್ ಇಲಾಖೆಯಿಂದಲೂ ಚಾಮರಾಜನಗರ ಠಾಣೆ ವ್ಯಾಪ್ತಿಯಲ್ಲಿ 50, ಸಂತೇಮರಹಳ್ಳಿಯಲ್ಲಿ 4, ಕೊಳ್ಳೇಗಾಲ ನಗರದಲ್ಲಿ 06, ಚೆಕ್‌ಪೋಸ್ಟ್‌ಗಳಲ್ಲಿ 9 ಸೇರಿದಂತೆ 64 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಇವುಗಳಲ್ಲಿ ಸ್ವಯಂಚಾಲಿತವಾಗಿ ನಂಬರ್‌ಪ್ಲೇಟ್ ಗುರುತಿಸುವ ಸಾಮರ್ಥ್ಯವಿರುವ 6 ಕ್ಯಾಮೆರಾಗಳಿವೆ.

ಬಿ.ಟಿ.ಕವಿತಾ ಎಸ್‌ಪಿ

ಜಿಲ್ಲೆಯ 15 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಳವಡಿಕೆ ಜಿಯೋ ಟ್ಯಾಗಿಂಗ್ ಮೂಲಕ ನಿಖರವಾಗಿ ಸ್ಥಳ ಗುರುತಿಸುವಿಕೆ ಅಪರಾಧ ಕೃತ್ಯಗಳ ಪತ್ತೆಗೆ ನೆರವು

‘ಸಾರ್ವಜನಿಕರ ಸಹಭಾಗಿತ್ವ ಅಗತ್ಯ’ ಸಾರ್ವಜನಿಕ ಸುರಕ್ಷಾ ಕಾಯ್ದೆಯ ಬಗ್ಗೆ ವ್ಯಾಪಾರಿಗಳು ಉದ್ಯಮಿಗಳು ಶಿಕ್ಷಣ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರಿಗೆ ಅರಿವು ಮೂಡಿಸಿದ ಫಲವಾಗಿ ಜಿಲ್ಲೆಯಲ್ಲಿ 7 ಸಾವಿರಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ ಮಾಡಲು ಸಾಧ್ಯವಾಗಿದೆ. ಇದರಿಂದ ಅಪರಾಧ ಕೃತ್ಯಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತಿದ್ದು ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಾಯವಾಗುತ್ತಿದೆ. ಸಾರ್ವಜನಿಕರು ಇಲಾಖೆಯ ಜೊತೆ ಕೈಜೋಡಿಸಬೇಕು. –ಬಿ.ಟಿ.ಕವಿತಾ ಎಸ್‌ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.