ಚಾಮರಾಜನಗರ: ‘ಕಾಂಗ್ರೆಸ್ ಸರ್ಕಾರ ಹೊಸಪೇಟೆಯಲ್ಲಿ ಮಾಡಲು ಹೊರಟಿರುವುದು ಸಾಧನಾ ಸಮಾವೇಶವಲ್ಲ; ವೇದನೆಯ ಸಮಾವೇಶ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದ ಅಭಿವೃದ್ಧಿ ಮರೆತಿರುವ, ಅಗತ್ಯ ವಸ್ತುಗಳ ಬೆಲೆ ಏರಿಸಿರುವ ಕಾಂಗ್ರೆಸ್ ಸರ್ಕಾರ ವಿಜಯನಗರ ಸಾಮ್ರಾಜ್ಯದ ಪುಣ್ಯ ನೆಲದಲ್ಲಿ ಸಮಾವೇಶ ಮಾಡುತ್ತಿರುವುದು ಅರ್ಥಹೀನ’ ಎಂದರು.
‘ರಾಜ್ಯದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡದ ಸರ್ಕಾರ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಡೆತನದ ಶಾಲಾ ಕಾಂಪೌಂಡ್ ಹಾಗೂ ಶೌಚಾಲಯಗಳ ನಿರ್ಮಾಣಕ್ಕೆ ₹9.90 ಕೋಟಿ ಬಿಡುಗಡೆ ಮಾಡಿದೆ’ ಎಂದು ಆರೋಪಿಸಿದರು.
‘ದೇಶ ವಿಭಜನೆಯಾದಾಗ ಭಯೋತ್ಪಾದಕರೆಲ್ಲ ಪಾಕಿಸ್ತಾನಕ್ಕೆ ಹೋದರೂ, ಅವರ ಬೆಂಬಲಿಗರು ಇಲ್ಲಿಯೇ ಉಳಿದು ಪಾಕ್ ಪರ ಹೇಳಿಕೆ ನೀಡುತ್ತಿದ್ದಾರೆ. ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಮುಂದಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಯುದ್ಧ ವಿರೋಧಿ ಹೇಳಿಕೆ ನೀಡಿ ಇಬ್ಬಗೆ ನೀತಿ ಪ್ರದರ್ಶಿಸಿದರು’ ಎಂದರು.
‘ಕಾಂಗ್ರೆಸ್ ಸಚಿವರು, ಶಾಸಕರು ಕೂಡ ಪಾಕ್ ಪರ ಹೇಳಿಕೆ ನೀಡಿದರು. ಅದನ್ನು ಎಐಸಿಸಿ ಖಂಡಿಸಲಿಲ್ಲ. ಪಾಕಿಸ್ತಾನಕ್ಕೆ ಭಾರತವನ್ನು ಎದುರಿಸುವ ಶಕ್ತಿ ಇಲ್ಲ. ಆದರೆ, ಪಾಕಿಸ್ತಾನಕ್ಕೆ ಶಕ್ತಿ ತುಂಬುವವರು ದೇಶದೊಳಗಿರುವುದು ಅಪಾಯಕಾರಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.