ADVERTISEMENT

ಚಾಮರಾಜನಗರ: ಹೆಚ್ಚಿದ ಬೀದಿನಾಯಿಗಳ ಹಾವಳಿ

ನಗರಸಭೆಗೆ ತಲೆನೋವಾಗಿರುವ ಸುಪ್ರೀಂ ನಿರ್ದೇಶನ

ರವಿ ಎನ್‌
Published 9 ಡಿಸೆಂಬರ್ 2018, 16:42 IST
Last Updated 9 ಡಿಸೆಂಬರ್ 2018, 16:42 IST
ಬೀದಿನಾಯಿಗಳ ಗುಂಪು
ಬೀದಿನಾಯಿಗಳ ಗುಂಪು   

ಚಾಮರಾಜನಗರ: ಇಲ್ಲಿನ ನಗರಸಭೆಯ ವ್ಯಾಪ್ತಿಯ ಬಹುತೇಕ ರಸ್ತೆಗಳು, ಬಡಾವಣೆಗಳು ಹಾಗೂ ಉದ್ಯಾನಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನರು ಓಡಾಡುವುದಕ್ಕೆ ಭಯ ಪಡುವ ವಾತಾ‌ವರಣ ನಿರ್ಮಾಣವಾಗಿದೆ.

ಸಂಜೆ ಹಾಗೂ ರಾತ್ರಿ ಹೊತ್ತಿನಲ್ಲಿ ರಸ್ತೆಗಳು ಹಾಗೂ ಇತರೆಡೆಗಳಲ್ಲಿ ನಾಯಿಗಳು ಹಿಂಡು ಹಿಂಡಾಗಿ ಕಂಡು ಬರುತ್ತಿವೆ. 15ರಿಂದ 20ರಷ್ಟು ಸಂಖ್ಯೆಯಲ್ಲಿರುವ ನಾಯಿಗಳು ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ.

‘ಕೆಲ ನಾಯಿಗಳು ಬೈಕ್‌, ಕಾರುಗಳ ಹಿಂದೆ ಓಡಿ ಬರುತ್ತವೆ. ಇದರಿಂದ ನಾವು ಆತಂಕ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ವಾಹನ ಸವಾರರು.

ADVERTISEMENT

ಉದ್ಯಾನದಲ್ಲೂ ಇರುತ್ತವೆ: ‘ವಾಯು ವಿಹಾರ ಹಾಗೂ ಆಟವಾಡಲು ಚಿಕ್ಕಮಕ್ಕಳು, ವಯೋವೃದ್ಧರು ಉದ್ಯಾನಗಳಿಗೆ ಬರುತ್ತಾರೆ. ಈ ಸಂದರ್ಭದಲ್ಲಿ ಗೇಟ್‌ ಬಳಿಯೇ ನಾಯಿಗಳು ಇರುತ್ತವೆ. ಇದರಿಂದ ಚಿಣ್ಣರು ಭಯಪಡುತ್ತಾರೆ. ವಯೋವೃದ್ಧರು ಅವುಗಳನ್ನು ಓಡಿಸಲು ಬಂದರೆ ಅವರನ್ನೇ ಕಚ್ಚಲು ಬರುತ್ತವೆ. ಇದರಿಂದ ಜನರಿಗೆ ಹೆಚ್ಚು ತೊಂದರೆಯಾಗಿದೆ. ಕೆಲ ಮಹಿಳೆಯರು ವಾಯು ವಿಹಾರ ಮಾಡಲು ಹಿಂದೇಟು ಹಾಕುವಂತಾಗಿದೆ’ ಎಂದು ಹೇಳುತ್ತಾರೆ ಹೌಸಿಂಗ್‌ ಬೋರ್ಡ್‌ನಲ್ಲಿ ವಾಸವಿರುವ ಗೃಹಿಣಿ ರತ್ನಮ್ಮ.

ರಾತ್ರಿ ವೇಳೆ ಕೂಗಾಟ: ರಾತ್ರಿ ಸಮಯದಲ್ಲಿಬೀದಿನಾಯಿಗಳು ಕೂಗಾಟ ಆರಂಭಿಸುತ್ತವೆ. ಇದರಿಂದನಿವಾಸಿಗಳ ನಿದ್ದೆಗೂ ಭಂಗ ಬರುತ್ತಿದೆ. ನಾಯಿಗಳ ಹಾವಳಿ ತಪ್ಪಿಸುವಂತೆ ನಗರಸಭೆಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಆರೋಪಿಸುತ್ತಾರೆ.

ಮಾಂಸಕ್ಕಾಗಿ ಮುಗಿಬೀಳುತ್ತವೆ: ‘ನಗರದ 12ನೇ ವಾರ್ಡ್‌ನ ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣ, ಹಿಂಭಾಗದ ಬಡಾವಣೆ, ಎದುರಿನ ಮುಖ್ಯರಸ್ತೆ, ಬೀದಿಗಳಲ್ಲಿ, ರಸ್ತೆಮಾರ್ಗದ ಬದಿಗಳಲ್ಲಿ ಮಾಂಸದ ಅಂಗಡಿಗಳು ಇವೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿನಾಯಿಗಳು ಕಾಣಿಸುತ್ತವೆ. ಅಂಗಡಿಯವರುಕಸದ ತೊಟ್ಟಿಯಲ್ಲಿ ಮಾಂಸದ ತ್ಯಾಜ್ಯ ಹಾಕುವುದರಿಂದ ನಾಯಿಗಳು ಅದನ್ನು ತಿನ್ನಲು ಬರುತ್ತವೆ. ಈ ಸಂದರ್ಭದಲ್ಲಿ ಅವುಗಳ ನಡುವೆ ಜಗಳ ಏರ್ಪಟ್ಟು ಕಿರುಚಾಟ ಆರಂಭಿಸುತ್ತವೆ’ ಎಂದು ಸಮಸ್ಯೆಯನ್ನು ಬಿಚ್ಚಿಡುತ್ತಾರೆ ವಾರ್ಡ್‌ ಸದಸ್ಯ ಸೈಯದ್‌ ಅಬ್ರಾರ್‌ ಅಹಮದ್‌.

‘ನಗರದ ಎಲ್ಲ ಬಡಾವಣೆ, ಉದ್ಯಾನ ಹಾಗೂ ನಗರ ಸಮೀಪದ ಕರಿವರದರಾಜ ಬೆಟ್ಟಕ್ಕೆ ಹೋಗುವ ದಾರಿಯಲ್ಲೂ ಬೀದಿನಾಯಿಗಳ ಉಪಟಳವಿದೆ. ಸಾರ್ವಜನಿಕರು ನೆಮ್ಮದಿಯಿಂದ ನಡೆದು ಹೋಗಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ತಿಳಿಸಿದರು.

‘ಸಂತಾನ ಹರಣ ಚಿಕಿತ್ಸೆ ಮಾಡುವುದರಿಂದ ಬೀದಿನಾಯಿಗಳ ಹಾವಳಿ ನಿಯಂತ್ರಣ ಮಾಡಬಹುದು. ಆದರೆ, ಈ ಕಾರ್ಯಕ್ಕೆ ನಗರಸಭೆ ಮುಂದಾಗುತ್ತಿಲ್ಲ. ಈ ಹಿಂದೆ ಬೀದಿನಾಯಿಗಳನ್ನು ನಿಯತ್ರಿಸುವಂತೆ ಮನವಿ ಕೂಡ ಮಾಡಲಾಗಿತ್ತು. ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು‘ಪ್ರಜಾವಾಣಿ’ಗೆ ತಿಳಿಸಿದರು.

₹ 850ರಿಂದ 1,500 ಖರ್ಚು: ‘ಒಂದು ನಾಯಿ ಹಿಡಿಯಲು₹850ರಿಂದ 1,500 ವೆಚ್ಚವಾಗುತ್ತದೆ. ಇದನ್ನು ನಗರಸಭೆ ಆಡಳಿತವೇ ಭರಿಸಬೇಕು. ಬೀದಿನಾಯಿಗಳ ಉಪಟಳ ಇದೆ ಎಂದುಯಾರಾದರೂ ದೂರು ನೀಡಿದರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಪಶುಸಂಗೋಪನೆ ಇಲಾಖೆಯವರು ಎನ್‌ಜಿಒ ಅವರಿಗೆ ಈ ಬಗ್ಗೆ ತರಬೇತಿ ನೀಡುತ್ತಾರೆ. ಬಳಿಕ ಟೆಂಡರ್‌ ಕರೆದು ನಾಯಿಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ಎಂದು ನಗರಸಭೆ ಆಯುಕ್ತ ಎನ್.ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.