ADVERTISEMENT

ಚಾಮರಾಜನಗರ: ಕೊರೊನಾ ಸಮರಕ್ಕೆ ಸಜ್ಜಾಗಿದೆಯೇ ಜಿಲ್ಲಾಡಳಿತ?

ಜಿಲ್ಲಾಸ್ಪತ್ರೆ ಈಗ ಕೋವಿಡ್‌ ಆಸ್ಪತ್ರೆ, ಜಿಲ್ಲಾ ಕೇಂದ್ರದಲ್ಲಿ ಏಳು ವೆಂಟಿಲೇ‌ಟರ್‌ಗಳಷ್ಟೇ ಲಭ್ಯ

ಸೂರ್ಯನಾರಾಯಣ ವಿ
Published 3 ಏಪ್ರಿಲ್ 2020, 19:45 IST
Last Updated 3 ಏಪ್ರಿಲ್ 2020, 19:45 IST
ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್‌–19 ವಿಶೇಷ ವಾರ್ಡ್‌ನ ನೋಟ
ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್‌–19 ವಿಶೇಷ ವಾರ್ಡ್‌ನ ನೋಟ   

ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ವೈರಸ್‌ ವಿರುದ್ಧದ ಸಮರ ಸಾರಲು ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದ್ದು,ಶಂಕಿತರು ಹಾಗೂ ಸೋಂಕಿತರ ಆರೋಗ್ಯದ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಸೌಕರ್ಯ ಕಲ್ಪಿಸಲು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ.

ಜಿಲ್ಲೆಯಲ್ಲಿ ಇದುವರೆಗೆ ಸೋಂಕು ದೃಢಪಟ್ಟ ಪ್ರಕರಣ ವರದಿ ಆಗದಿರುವುದರಿಂದ ಜಿಲ್ಲಾಡಳಿತದ ಅಧಿಕಾರಿಗಳು, ಅದರಲ್ಲೂ ವಿಶೇಷವಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೊಂಚ ನಿರಾಳರಾಗಿದ್ದಾರೆ. ಆದರೆ, ರಾಜ್ಯ ಸರ್ಕಾರದ ಸೂಚನೆಯ ಅನ್ವಯ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಗಂಭೀರ ಪರಿಸ್ಥಿತಿಯಲ್ಲಿ ವೆಂಟಿಲೇಟರ್‌ಗಳ ಸಮಸ್ಯೆ ಉಂಟಾಗಬಹುದು ಎಂಬ ಆತಂಕ ಬಿಟ್ಟರೆ, ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ಕೋವಿಡ್‌– 19 ಚಿಕಿತ್ಸೆಗೆ ಬೇಕಾದ ಅಗತ್ಯ ಸಿಬ್ಬಂದಿ, ಅವರಿಗೆ ಧರಿಸಲು ಅಗತ್ಯವಿರುವ ರಕ್ಷಣಾತ್ಮಕ ಸಾಧನಗಳು (ಪಿಪಿಇಕಿಟ್‌), ಸ್ಯಾನಿಟೈಸರ್‌ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳು ಲಭ್ಯ ಇವೆ ಎಂದು ವೈದ್ಯಾಧಿಕಾರಿಗಳು ಹೇಳುತ್ತಿದ್ದಾರೆ.

ADVERTISEMENT

‘ಜಿಲ್ಲಾಸ್ಪತ್ರೆಯಲ್ಲಿ ಮೂರು ವೆಂಟಿಲೇಟರ್‌ಗಳಿವೆ. ನಗರದಲ್ಲಿರುವ ಜೆಎಸ್ಎಸ್‌ ಆಸ್ಪತ್ರೆಯದ್ದು ಸೇರಿದಂತೆ ಒಟ್ಟು ಏಳು ವೆಂಟಿಲೇಟರ್‌ಗಳಿವೆ. ಇನ್ನು 10 ವೆಂಟಿಲೇಟರ್‌ಗಳು ಅಗತ್ಯ ಇವೆ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದು, ಶೀಘ್ರದಲ್ಲಿ ಬರಲಿವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋವಿಡ್‌ ಆಸ್ಪತ್ರೆ: ಜಿಲ್ಲಾಸ್ಪತ್ರೆಯನ್ನು ಈಗ ಕೋವಿಡ್‌–19 ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಎರಡು ಬ್ಲಾಕ್‌ಗಳಿದ್ದು, ಹಳೆಯ ಬ್ಲಾಕ್‌ ಅನ್ನು ಕೋವಿಡ್‌ ಚಿಕಿತ್ಸೆಗೆ ಬಳಸಲು ತೀರ್ಮಾನಿಸಲಾಗಿದೆ. ಸದ್ಯಕ್ಕೆ 23 ಹಾಸಿಗೆಗಳ ಪ್ರತ್ಯೇಕ ವಾರ್ಡ್‌ ಅನ್ನು ಇದಕ್ಕಾಗಿ ಮೀಸಲಿಡಲಾಗಿದೆ. 50 ಹಾಸಿಗೆಗಳ ಸಾಮರ್ಥ್ಯದ ಐಸಿಯು ಸ್ಥಾಪನೆ ಪ್ರಕ್ರಿಯೆ ನಡೆಯುತ್ತಿದೆ.

ಇದುವರೆಗೆ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಪ್ರತ್ಯೇಕ ವಾರ್ಡ್‌ನಲ್ಲಿ 10 ಜನರನ್ನು ಇರಿಸಲಾಗಿತ್ತು. ಈ ಪೈಕಿ ಎಂಟು ಜನರ ಗಂಟಲ ದ್ರವ ಹಾಗೂ ರಕ್ತದ ಮಾದರಿಗಳ ಪರೀಕ್ಷೆಯಲ್ಲಿ ಸೋಂಕು ಇಲ್ಲ ಎಂಬುದು ಖಚಿತವಾಗಿರುವುದರಿಂದ ಅಂಬೇಡ್ಕರ್‌ ಭವನದಲ್ಲಿ ಸ್ಥಾಪಿಸಲಾಗಿರುವ ವಿಶೇಷ ನಿಗಾ ಘಟಕಕ್ಕೆ (ಕ್ವಾರಂಟೈನ್‌) ಅವರನ್ನು ಸ್ಥಳಾಂತರಿಸಲಾಗಿದೆ.ಇದರ ಜೊತೆಗೆ ಯಡಪುರದಲ್ಲಿರುವ ವೈದ್ಯಕೀಯ ಕಾಲೇಜಿನಲ್ಲೂ ಮೇಲ್ವಿಚಾರಣಾ ಪ್ರತ್ಯೇಕ ನಿಗಾ ವ್ಯವಸ್ಥೆ ಕೇಂದ್ರ (ಎಸ್‌ಐಸಿ) ತೆರೆಯಲಾಗಿದೆ. ಜ್ವರ ತಪಾಸಣೆಗಾಗಿ ಜ್ವರ ಕೇಂದ್ರವನ್ನೂ ತೆರೆಯಲಾಗಿದೆ.

ತರಬೇತಿ: ‘ಆಸ್ಪತ್ರೆಯ ಎಲ್ಲ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಯನ್ನು ಕೊರೊನಾ ವೈರಸ್‌ ತಡೆ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಮೂರು ಪಾಳಿಗಳಲ್ಲಿ ದಿನದ 24 ಗಂಟೆಗಳ ಕಾಲವೂ ಪ್ರತ್ಯೇಕ ವಾರ್ಡ್‌, ಹೊರ ರೋಗಿಗಳ ವಿಭಾಗ, ವಿಶೇಷ ನಿಗಾ ಘಟಕಗಳಲ್ಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಜಿಲ್ಲಾ ಸರ್ಜನ್‌ ಕೃಷ್ಣ ಪ‍್ರಸಾದ್‌ ತಿಳಿಸಿದರು.

‘ಪ್ರತ್ಯೇಕ ವಾರ್ಡ್‌ನಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬೇಕು, ಚಿಕಿತ್ಸೆ ಹೇಗೆ ನೀಡಬೇಕು, ರಕ್ಷಣಾ ಸಾಧನಗಳ ಬಳಕೆ ಹೇಗೆ ಎಂಬುದರ ಬಗ್ಗೆ ಎಲ್ಲ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಸದ್ಯಕ್ಕೆ 23 ಹಾಸಿಗೆಗಳ ಪ್ರತ್ಯೇಕ ವಾರ್ಡ್‌ ಇದೆ. ಜಿಲ್ಲಾಸ್ಪತ್ರೆಯಲ್ಲಿ ಮೂರು ವೆಂಟಿಲೇಟರ್‌ಗಳ ಸೌಲಭ್ಯ ಇದೆ. ಈಗಿನ ಪರಿಸ್ಥಿತಿಯಲ್ಲಿ ರಕ್ಷಣಾ ಸಲಕರಣೆಗಳು, ಸ್ಯಾನಿಟೈಸರ್‌, ಮುಖಗವುಸು ಸೇರಿದಂತೆ ಅಗತ್ಯ ವಸ್ತುಗಳಿಗೆ ಕೊರತೆ ಇಲ್ಲ’ ಎಂದರು.

1,000 ಹಾಸಿಗೆ ಸಿದ್ಧಪಡಿಸಲು ಸೂಚನೆ

ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಗಂಭೀರವಾದರೆ, ಅದನ್ನು ಎದುರಿಸುವುದಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 1,000 ಹಾಸಿಗೆಗಳನ್ನು ಸಿದ್ಧಪಡಿಸಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಅದರಂತೆ, ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಆಸ್ಪತ್ರೆಗಳು ಮಾತ್ರವಲ್ಲದೇ, ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಜೆಎಸ್‌ಎಸ್‌ ಆಸ್ಪತ್ರೆ, ಬಸವರಾಜೇಂದ್ರ ಆಸ್ಪತ್ರೆ, ಕಾಮಗೆರೆಯ ಹೋಲಿಕ್ರಾಸ್‌ ಆಸ್ಪತ್ರೆಗಳಲ್ಲೂ ಎಸ್‌ಐಸಿಗಳನ್ನು ಆರಂಭಿಸಲಾಗಿದೆ.

‘ಮೊದಲಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಸೌಕರ್ಯಗಳನ್ನು ಬಳಸಿಕೊಂಡು, ನಂತರ ಅಗತ್ಯಬಿದ್ದರೆ ಖಾಸಗಿ ಆಸ್ಪತ್ರೆಗಳ ನೆರವು ಪಡೆಯಲು ಯೋಜಿಸಲಾಗುತ್ತಿದೆ. ಸದ್ಯಕ್ಕೆ ನಮ್ಮಲ್ಲಿ ಯಾವುದೇ ಕೋವಿಡ್‌–19 ಪ್ರಕರಣ ವರದಿಯಾಗಿಲ್ಲ. ಹಾಗಾಗಿ, ಯಾರೂ ಆತಂಕ ಪಡಬೇಕಾಗಿಲ್ಲ. ಹಾಗಿದ್ದರೂ ಮುನ್ನೆಚ್ಚರಿಕೆಗಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.