ADVERTISEMENT

ಚಾಮರಾಜನಗರ: ಹೆಣ್ಮಕ್ಕಳಿಗೆ ‘ಆಪ್ತ ಗೆಳತಿ’ ಸ್ಪಂದನೆ

ಪೊಲೀಸ್ ಇಲಾಖೆ ಆರಂಭಿಸಿರುವ ದೂರು ಪೆಟ್ಟಿಗೆಗೆ 315 ದೂರುಗಳು ದಾಖಲು

ಬಾಲಚಂದ್ರ ಎಚ್.
Published 19 ಮೇ 2025, 6:00 IST
Last Updated 19 ಮೇ 2025, 6:00 IST
ಆಪ್ತ ಗೆಳತಿ ದೂರು ಪೆಟ್ಟಿಗೆಯಲ್ಲಿ ದೂರಿನ ಪ್ರತಿ ಪಡೆಯುತ್ತಿರುವ ಸಿಬ್ಬಂದಿ
ಆಪ್ತ ಗೆಳತಿ ದೂರು ಪೆಟ್ಟಿಗೆಯಲ್ಲಿ ದೂರಿನ ಪ್ರತಿ ಪಡೆಯುತ್ತಿರುವ ಸಿಬ್ಬಂದಿ   

ಚಾಮರಾಜನಗರ: ದೂರು–1; ಶಾಲೆಗೆ ಬರುವಾಗ ವ್ಯಕ್ತಿಯೊಬ್ಬ ಹಿಂಬಾಲಿಸುತ್ತಾನೆ, ಅಂಗಡಿ ಬಳಿ ನಿಂತು ಪ್ರತಿದಿನ ತೊಂದರೆ ಕೊಡುತ್ತಾನೆ, ಆತನ ಹೆಸರು ತಿಳಿದಿಲ್ಲ; ದಯವಿಟ್ಟು ಸಹಾಯ ಮಾಡಿ..

ದೂರು–2; ಶಾಲೆಯಲ್ಲಿ ವಿಶೇಷ ತರಗತಿ ಮುಗಿಸಿ ಮನೆಗೆ ಹೋಗುವಾಗ ಪೋಲಿ ಹುಡುಗರು ಹಿಂಬಾಲಿಸುತ್ತಾರೆ, ನಿತ್ಯ ಶಾಲೆಯ ಎದುರು ಬಂದು ನಿಲ್ಲುವುದುರಿಂದ ಕಿರಿಕಿರಿಯಾಗುತ್ತಿದ್ದು ನೆರವು ನೀಡಿ..

ದೂರು–3; ನನ್ನ ಗೆಳತಿ ಶಾಲೆಗೆ ಬರುತ್ತಿಲ್ಲ; ಆಕೆಯ ಪೋಷಕರಿಗೆ ಬುದ್ದಿವಾದ ಹೇಳಿ ಮತ್ತೆ ಶಾಲೆಗೆ ಬರುವಂತೆ ಮಾಡಿ ಪ್ಲೀಸ್‌..

ADVERTISEMENT

ಹೀಗೆ, ಶಾಲೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಿರುಕುಳಕ್ಕೆ ಗುರಿಯಾಗಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದ ನೂರಾರು ಬಾಲಕಿಯರು ಜಿಲ್ಲಾ ಪೊಲೀಸ್ ಇಲಾಖೆಯ ‘ಆಪ್ತ ಗೆಳತಿ’ಯ ಬಳಿ ನೋವು ನಿವೇದಿಸಿಕೊಂಡಿದ್ದಾರೆ. ಎಲ್ಲರ ನೋವುಗಳಿಗೂ ಸ್ಪಂದಿಸಿರುವ ‘ಆಪ್ತ ಗೆಳತಿ’ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾಳೆ. ಜೊತೆಗೆ ನೊಂದ ಬಾಲೆಯರ ಮುಖದಲ್ಲಿ ನಗು ಅರಳಿಸುವಲ್ಲಿ ಯಶಸ್ವಿಯಾಗಿದ್ದಾಳೆ.

ಯಾರು ಈ ಆಪ್ತ ಗೆಳತಿ: ಲೈಂಗಿಕ ಕಿರುಕುಳ, ಮಾನಸಿಕ ದೈಹಿಕ ಹಿಂಸೆ, ರ‍್ಯಾಗಿಂಗ್ ಸೇರಿದಂತೆ ಹೆಣ್ಣುಮಕ್ಕಳ ಮೇಲಿನ ಶೋಷಣೆ ತಡೆಗಟ್ಟುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆ ಕಳೆದ ನವೆಂಬರ್‌ನಲ್ಲಿ ‘ಆಪ್ತ ಗೆಳತಿ’ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿತ್ತು. ಜಿಲ್ಲೆಯ 15 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಬರುವ ಶಾಲಾ ಕಾಲೇಜುಗಳಲ್ಲಿ ದೂರು ಪೆಟ್ಟಿಗೆಗಳನ್ನು ಇರಿಸಿ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ವೇದಿಕೆ ಕಲ್ಪಿಸಿತ್ತು.

ಯಾರೊಂದಿಗೂ ಹೇಳಿಕೊಳ್ಳಲಾಗದ ವಿಚಾರಗಳನ್ನು ಧೈರ್ಯವಾಗಿ ಬರೆದು ದೂರುಪೆಟ್ಟಿಗೆಯೊಳಗೆ ಹಾಕುವಂತೆ ತಿಳಿವಳಿಕೆ ಮೂಡಿಸಲಾಗಿತ್ತು. ಆರಂಭದಲ್ಲಿ ದೂರು ನೀಡಲು ಹಿಂಜರಿಯುತ್ತಿದ್ದ ಬಾಲಕಿಯರು ‘ಆಪ್ತ ಗೆಳತಿ’ಯ ಬಗ್ಗೆ ವಿಶ್ವಾಸ ಮೂಡುತ್ತಿದ್ದಂತೆ ಮುಕ್ತವಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಶುರುಮಾಡಿದ್ದಾರೆ. ಕಾರ್ಯಕ್ರಮ ಆರಂಭವಾಗಿ 6 ತಿಂಗಳು ಕಳೆದಿದ್ದು ಇದುವರೆಗೂ ದೂರುಪೆಟ್ಟಿಗೆಗೆ 315 ದೂರುಗಳು ಬಂದಿದ್ದು ಎಲ್ಲವೂ ಇತ್ಯರ್ಥಗೊಂಡಿವೆ ಎನ್ನುತ್ತಾರೆ ಕಾರ್ಯಕ್ರಮದ ರೂವಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ.

ಸಮಾಜದಲ್ಲಿ ಹೆಣ್ಣುಮಕ್ಕಳು ಅನುಭವಿಸುವ ಯಾತನೆ, ‌ನೋವುಗಳ ಸ್ಪಷ್ಟ ಅರಿವಿದ್ದ ಕಾರಣ ‘ಆಪ್ತ ಗೆಳತಿ’ ಕಾರ್ಯಕ್ರಮವನ್ನು ಜಾರಿಗೊಳಿಸಲಾಯಿತು. ನೊಂದ ಹೆಣ್ಣುಮಕ್ಕಳು ಠಾಣೆಗೆ ಬಂದು ದೂರು ನೀಡಲು ಹೆದರುವುದರಿಂದ ಅವರು ಇರುವ ಶಾಲಾ–ಕಾಲೇಜುಗಳಲ್ಲೇ ದೂರು ಪೆಟ್ಟಿಗೆಗಳನ್ನು ಇರಿಸಿ ಸಮಸ್ಯೆ ಹೇಳಿಕೊಳ್ಳುವಂತೆ ಮನವೊಲಿಸಲಾಯಿತು. ದೂರು ನೀಡಿದ ಹೆಣ್ಣುಮಕ್ಕಳ ವಿವರಗಳು ಎಲ್ಲೂ ಬಹಿರಂಗವಾಗದಂತೆ ನಿಗಾವಹಿಸಿ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಸಮಸ್ಯೆ ಬಗೆಹರಿಸಲಾಯಿತು ಎಂದು ಕಾರ್ಯಕ್ರಮ ಸಾಕಾರಗೊಂಡ ಬಗೆಯನ್ನು ತಿಳಿಸಿದರು ಎಸ್‌ಪಿ.

ಯಾವ ಪ್ರಕರಣದಲ್ಲೂ ದೂರು ನೀಡಿರುವ ಬಾಲಕಿಯರನ್ನು ಪೊಲೀಸರು ಸಂಪರ್ಕ ಮಾಡಿಲ್ಲ. ದೂರಿನ ಪ್ರತಿಯಲ್ಲಿದ್ದ ಪ್ರಾಥಮಿಕ ಮಾಹಿತಿಗಳ ಆಧಾರದಲ್ಲಿಯೇ ಆರೋಪಿಗಳನ್ನು ಹಿಡಿದು ಬುದ್ದಿ ಕಲಿಸಲಾಗಿದೆ. ಗಂಭೀರ ದೂರುಗಳಲ್ಲಿ ಮಾತ್ರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ. ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಮತ್ತೆ ಕೃತ್ಯ ಎಸಗದಂತೆ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಆಪ್ತ ಗೆಳತಿ ದೂರುಪೆಟ್ಟಿಗೆಗೆ ಬಂದಿರುವ ಎಲ್ಲ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು ಎಸ್‌ಪಿ ಕವಿತಾ.

ಕಾರ್ಯ ನಿರ್ವಹಣೆ ಹೇಗೆ: ಭಾನುವಾರ ರಜಾ ದಿನವಾದ್ದರಿಂದ ಪ್ರತಿ ಶುಕ್ರವಾರ ಆಯಾ ಠಾಣಾ ವ್ಯಾಪ್ತಿಯಲ್ಲಿರುವ ಶಾಲಾ ಕಾಲೇಜುಗಳಿಗೆ ಸ್ಥಳೀಯರ ಪೊಲೀಸರು ತೆರಳಿ ದೂರು ಪೆಟ್ಟಿಗೆ ಬೀಗ ತೆಗೆದು ದೂರುಗಳ ಪ್ರತಿಯನ್ನು ಠಾಣೆಗಳಿಗೆ ತರುತ್ತಾರೆ. ಎರಡು ದಿನಗಳಲ್ಲಿ ದೂರುಗಳ ಬಗ್ಗೆ ತೆಗೆದುಕೊಂಡ ಕ್ರಮಗಳ ಕುರಿತು ಪ್ರತಿ ಸೋಮವಾರ ಕೇಂದ್ರ ಕಚೇರಿಯಲ್ಲಿ ನಡೆಯುವ ಸಭೆಗೆ ವರದಿ ಸಲ್ಲಿಸುತ್ತಾರೆ ಎಂದು ದೂರು ಪೆಟ್ಟಿಗೆ ಕಾರ್ಯ ನಿರ್ವಹಣೆಯ ಕುರಿತು ಎಸ್‌ಪಿ ಮಾಹಿತಿ ಹಂಚಿಕೊಂಡರು.

‘ಎಲ್ಲ ಸಮಸ್ಯೆ ಹೇಳಿಕೊಳ್ಳಿ’

ಆಪ್ತ ಗೆಳತಿ ದೂರು ಪೆಟ್ಟಿಗೆಗೆ ಗಂಭೀರ ಸ್ವರೂಪದ ದೂರುಗಳನ್ನೇ ನೀಡಬೇಕು ಎಂಬ ನಿಯಮವಿಲ್ಲ. ಯಾವ ಸಮಸ್ಯೆಗಳನ್ನು ಬೇಕಾದರೂ ಹೇಳಿಕೊಳ್ಳಬಹುದು. ಶಿಕ್ಷಕರು ಸರಿಯಾಗಿ ಪಾಠ ಮಾಡುವುದಿಲ್ಲ ಮಾಡಿದ ಪಾಠ ಅರ್ಥವಾಗುವುದಿಲ್ಲ ಶಾಲಾ ಅವಧಿ ಮುಗಿದರೂ ಪಾಠ ಮಾಡುತ್ತಾರೆ ಮನೆಯಲ್ಲಿ ಪೋಷಕರು ಬೈಯುತ್ತಾರೆ ಹಾಸ್ಟೆಲ್‌ನಲ್ಲಿ ಊಟ ರುಚಿಯಾಗಿರುವುದಿಲ್ಲ ಎಂಬೆಲ್ಲ ದೂರುಗಳು ಬರುತ್ತವೆ. ಹಾಗೆಯೇ ಪುಂಡರು ಹಿಂಬಾಲಿಸುತ್ತಾರೆ ಬಸ್‌ನಲ್ಲಿ ಕಿರುಕುಳ ನೀಡುತ್ತಾರೆ ಪ್ರೀತಿಸು ಎಂದು ಬಲವಂತ ಮಾಡುತ್ತಾರೆ ಮೊಬೈಲ್‌ಗೆ ಕರೆ ಮಾಡಿ ಹಿಂಸೆ ನೀಡುತ್ತಾರೆ ಎಂಬೆಲ್ಲ ಗಂಭೀರ ದೂರುಗಳು ಬಂದಿವೆ. ಕೆಲವನ್ನು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಎಲ್ಲ ದೂರುಗಳಿಗೂ ಪೊಲೀಸ್ ಇಲಾಖೆ ಸ್ಪಂದಿಸಿದೆ.

–ಬಿ.ಟಿ.ಕವಿತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.