ಚಿರತೆಯ ಕಳೇಬರ
ಚಾಮರಾಜನಗರ: ಬಿಆರ್‌ಟಿ ಅರಣ್ಯ ವ್ಯಾಪ್ತಿಯ ಹರವೆ ಹೋಬಳಿ ತೆರಕಣಾಂಬಿ ಸಮೀಪದ ಕೊತ್ತಲವಾಡಿಯ ಕರಿಕಲ್ಲು ಕ್ವಾರಿಯಲ್ಲಿ ಚಿರತೆಯ ಅಸಹಜ ಸಾವಿನ ಪ್ರಕರಣದಲ್ಲಿ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಚಿರತೆಯ ಕಳೇಬರದ ಪಕ್ಕದಲ್ಲೇ ನಾಯಿ ಹಾಗೂ ಕುರುವಿನ ಕಳೇಬರವೂ ಪತ್ತೆಯಾಗಿದ್ದರಿಂದ, ವಿಷಪ್ರಾಶನದಿಂದ ಮೃತಪಟ್ಟಿರಬಹುದು ಎಂದು ಶಂಕೆ ಇದೆ. ಹೀಗಾಗಿ, ಅಧಿಕಾರಿಗಳು ಜಾನುವಾರ ಸಾಕಣೆದಾರನೊಬ್ಬನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಚಾಮರಾಜನಗರ ಸಿಸಿಎಫ್ ಹೀರಾಲಾಲ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಈಚೆಗಷ್ಟೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ವಿಷಪ್ರಾಶನದಿಂದ ಐದು ಹುಲಿಗಳು ಮೃತಪಟ್ಟಿದ್ದು, ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿತ್ತು. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 19 ಕೋತಿಗಳಿಗೆ ವಿಷಹಾಕಿ ಕೊಲ್ಲಲಾಗಿತ್ತು. ಈ ಘಟನೆಗಳು ಮಾಸುವ ಮುನ್ನವೇ ಚಿರತೆಯ ಅಸಹಜ ಸಾವು ಸಂಭವಿಸಿರುವುದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.