ADVERTISEMENT

ಚಾಮರಾಜನಗರ | ಎಸ್‌ಎಸ್‌ಎಲ್‌ಸಿ ಫಲಿತಾಂಶ; ಗುಂಡ್ಲುಪೇಟೆ ಪ್ರಥಮ

ಕೊಳ್ಳೇಗಾಲ ತಾಲ್ಲೂಕಿಗೆ ದ್ವಿತೀಯ ಸ್ಥಾನ: ಆದರ್ಶ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಪ್ರಜಾವಾಣಿ ವಿಶೇಷ
Published 4 ಮೇ 2025, 6:02 IST
Last Updated 4 ಮೇ 2025, 6:02 IST
ಮೋನಾ ರೋತ್, ಜಿಲ್ಲಾ ಪಂಚಾಯಿತಿ ಸಿಇಒ
ಮೋನಾ ರೋತ್, ಜಿಲ್ಲಾ ಪಂಚಾಯಿತಿ ಸಿಇಒ   

ಚಾಮರಾಜನಗರ/ಗುಂಡ್ಲುಪೇಟೆ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಗುಂಡ್ಲುಪೇಟೆ ತಾಲ್ಲೂಕು ಉತ್ತಮ ಸಾಧನೆ ತೋರಿದೆ. ಸತತವಾಗಿ ಎರಡು ವರ್ಷ ಜಿಲ್ಲೆಗೆ ಮೊದಲ ಸ್ಥಾನ ಪಡೆದಿರುವ ಗುಂಡ್ಲುಪೇಟೆ ಪ್ರಸಕ್ತ ಸಾಲಿನಲ್ಲಿ ಶೇ 65.18 ಫಲಿತಾಂಶ ದಾಖಲಿಸಿದೆ.

ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 1,214 ಬಾಲಕರು, 1190 ಬಾಲಕಿಯರು ಸೇರಿ 2,404 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಅವರಲ್ಲಿ ಶೇ 57.9 ಬಾಲಕರು ಉತ್ತೀರ್ಣರಾಗಿದ್ದರೆ, ಶೇ 74.77 ಬಾಲಕಿಯರು ಪಾಸ್ ಆಗಿದ್ದು ಮೇಲುಗೈ ಸಾಧಿಸಿದ್ದಾರೆ.

ತಾಲ್ಲೂಕಿನ 20 ಸರ್ಕಾರಿ ಶಾಲೆಗಳ 1,298  ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಶೇ 66.71 ಫಲಿತಾಂಶ ಬಂದಿದೆ. 6 ಸರ್ಕಾರಿ ವಸತಿ ಶಾಲೆಗಳ 246 ವಿದ್ಯಾರ್ಥಿಗಳ ಪೈಕಿ 204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ 82.92 ಫಲಿತಾಂಶ ದಾಖಲಾಗಿದೆ. 

ADVERTISEMENT

14 ಅನುದಾನಿತ ಶಾಲೆಗಳ 579 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಶೇ 49.91 ಫಲಿತಾಂಶ ಬಂದಿದೆ. 10 ಖಾಸಗಿ ಶಾಲೆಗಳ 527 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ 69.01 ಫಲಿತಾಂಶ ಸಿಕ್ಕಿದೆ.

ಈ ಬಾರಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಶಾಲೆಯ ಫಲಿತಾಂಶ ವೃದ್ದಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಾಲೆಯ ಶಿಕ್ಷಕರು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡು ಮಕ್ಕಳಿಗೆ ತರಬೇತಿ ನೀಡಿದ್ದರು. ಶೈಕ್ಷಣಿಕವಾಗಿ ಹಿಂದುಳಿದಿದ್ದ ಮಕ್ಕಳನ್ನು ಗುರುತಿಸಿ ಹೆಚ್ಚಿನ ಅಂಕ ಪಡೆಯಲು ಪೂರಕವಾಗಿ ತರಬೇತಿ ನೀಡಲಾಗಿತ್ತು.

ಅತಿ ಹೆಚ್ಚು ಅಂಕ ಪಡೆದವರು: 

ಗುಂಡ್ಲುಪೇಟೆಯ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಹರ್ಷಿಣಿ 620 ಅಂಕಗಳನ್ನು ಪಡೆದಿದ್ದು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ. ಅದೇ ಶಾಲೆಯ ವಿದ್ಯಾರ್ಥಿನಿಯರಾದ ರಾಜೇಶ್ವರಿ 615, ವಿದ್ಯಾಶ್ರೀ 614, ಕ್ರೈಸ್ಟ್ ಪಬ್ಲಿಕ್ ಶಾಲೆಯ ಚೈತ್ರಶ್ರೀ 614 ಅಂಕ ಪಡೆದಿದ್ದಾರೆ. ಕ್ರೈಸ್ಟ್‌ ಪಬ್ಲಿಕ್ ಶಾಲೆ ಶೇಕಡ 100 ಫಲಿತಾಂಶ ಪಡೆದ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಗುಂಡ್ಲುಪೇಟೆ ಪ್ರಥಮ, ಕೊಳ್ಳೇಗಾಲ ದ್ವಿತೀಯ ಶೇಕಡಾವಾರು ಫಲಿತಾಂಶದಲ್ಲಿ ಜಿಲ್ಲೆ ಕುಸಿತ ಶಿಕ್ಷಣ ಗುಣಮಟ್ಟದ ಬಗ್ಗೆ ಅಸಮಾಧಾನ 

ಟೇಲರ್ ಮಗಳು ಟಾಪರ್ ವೃತ್ತಿಯಲ್ಲಿ ಟೇಲರ್ ಗಾರೆ ಕೆಲಸ ಹಾಗೂ ರೈತನ ಮಕ್ಕಳು ಹೆಚ್ಚು ಅಂಕ ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ. ಕೊಚಿಂಗ್ ಪಡೆಯದೆ ಶಾಲೆಯಲ್ಲಿ ಕಲಿತ ಪಾಠದಿಂದ ಹೆಚ್ಚು ಅಂಕ ಪಡೆದಿರುವುದು ವಿಶೇಷ. ಟೇಲರ್‌ ವೃತ್ತಿ ಮಾಡುತ್ತಿರುವ ಮಂಜು ಅವರ ಪುತ್ರಿ ಹರ್ಷಿಣಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಚಿಕ್ಕಂದಿನಿಂದಲೇ ಪ್ರತಿಭಾವಂತೆಯಾಗಿದ್ದ ಮಗಳು ಎಸ್‌ಎಸ್ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆಯುತ್ತಾಳೆ ಎಂಬ ನಿರೀಕ್ಷೆ ಇತ್ತು ಅದರಂತೆ ಸಾಧನೆ ಮಾಡಿರುವುದು ಹೆಮ್ಮೆ ತಂದಿದೆ ಎನ್ನುತ್ತಾರೆ ತಂದೆ ಮಂಜು. ಗಾರೆ ಕೆಲಸ ಮಾಡುವವರ‍ ‍ಪುತ್ರಿ ವಿದ್ಯಾಶ್ರಿ 614 ಅಂಕ ‍ಪಡೆದಿದ್ದು ಮುಂದೆ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು ಸಾಧನೆ ಮಾಡುವಾಸೆ ಆಕೆಗೆ.

ಆದರ್ಶ ವಿದ್ಯಾಲಯ ಪಾರಮ್ಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಪಾರಮ್ಯ ಮರೆದಿದ್ದಾರೆ. ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ಮೊದಲ 10 ವಿದ್ಯಾರ್ಥಿಗಳಲ್ಲಿ ಆದರ್ಶ ಶಾಲೆಗಳ ವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ. ಗುಂಡ್ಲುಪೇಟೆಯ ಆದರ್ಶ ಶಾಲೆಯ ಹರ್ಷಿಣಿ ಹಾಗೂ ರಾಜೇಶ್ವರಿ ಚಾಮರಾಜನಗರ ತಾಲ್ಲೂಕಿನ ಆದರ್ಶ ವಿದ್ಯಾಲಯದ ಪೂಜಾ ಯಶಸ್ವಿನಿ ಕೊಳ್ಳೇಗಾಲ ತಾಲ್ಲೂಕಿನ ಆದರ್ಶ ವಿದ್ಯಾಲಯದ ಗಾನವಿ ಉತ್ತಮ ಅಂಕ ಪಡೆದಿದ್ದಾರೆ.

ಫಲಿತಾಂಶ ಸುಧಾರಣೆಗೆ ಕ್ರಮ ಕಳೆದ ಎರಡು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ ಉತ್ತಮ ಸಾಧನೆ ತೋರಿಲ್ಲ. ಫಲಿತಾಂಶ ಸುಧಾರಣೆಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು. ಶಿಕ್ಷಕರಿಗೆ ತರಬೇತಿ ಆಯೋಜಿಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಲಾಗುವುದು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. –ಮೋನಾ ರೋತ್ ಜಿಲ್ಲಾ ಪಂಚಾಯಿತಿ ಸಿಇಒ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.