ADVERTISEMENT

ಚಾಮರಾಜನಗರ | ಸಮಾಜಕ್ಕಾಗಿ ಮಡಿದವರಿಗೆ ಗೌರವ ಸಮರ್ಪಣೆ: ನ್ಯಾಯಾಧೀಶೆ ಜಿ.ಪ್ರಭಾವತಿ

ಪೊಲೀಸ್ ಹುತಾತ್ಮರ ದಿನಾಚರಣೆ: ‌ನಮನ ಸಲ್ಲಿಸಿದ ಜಿಲ್ಲಾ ನ್ಯಾಯಾಧೀಶೆ ಜಿ.ಪ್ರಭಾವತಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 8:49 IST
Last Updated 22 ಅಕ್ಟೋಬರ್ 2025, 8:49 IST
ಚಾಮನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶೆ ಜಿ.ಪ್ರಭಾವತಿ ಗೌರವ ಸಲ್ಲಿಸಿದರು
ಚಾಮನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶೆ ಜಿ.ಪ್ರಭಾವತಿ ಗೌರವ ಸಲ್ಲಿಸಿದರು   

ಚಾಮರಾಜನಗರ: ಕರ್ತವ್ಯ ನಿರ್ವಹಿಸುವ ವೇಳೆ ಹುತಾತ್ಮರಾದ ಪೊಲೀಸರಿಗೆ ಗೌರವ ಸಲ್ಲಿಸುವ ಸಲುವಾಗಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಪೊಲೀಸ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ನೂತನವಾಗಿ ನಿರ್ಮಾಣ ಮಾಡಲಾಗಿರುವ ರಾಜ್ಯದ ಅತಿ ಎತ್ತರದ (27ಅಡಿ) ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶೆ ಜಿ.ಪ್ರಭಾವತಿ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿದರು.

ಬಳಿಕ  ಮಾತನಾಡಿ ‘ಸಮಾಜಕ್ಕಾಗಿ ಮಡಿದವರನ್ನು ಸ್ಮರಿಸುವ ಸಮಾಜದ ಕರ್ತವ್ಯವಾಗಿದೆ. ಅರಣ್ಯ ಸಂಪತ್ತನ್ನು ರಕ್ಷಣೆ ಮಾಡುವುದು ಅರಣ್ಯ ಪಾಲಕರ ಕರ್ತವ್ಯವಾದರೆ, ನಾಡಿನ ಜನರ ರಕ್ಷಣೆಗೆ ಟೊಂಕಕಟ್ಟಿ ನಿಂತಿರುವ ಪೊಲೀಸರ ಸೇವೆ ಅವಿಸ್ಮರಣೀಯ ಹಾಗೂ ಶ್ಲಾಘನೀಯ’ ಎಂದರು.

ADVERTISEMENT

ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸಹಬಾಳ್ವೆ ನೆಲೆಸಲು ಪೊಲೀಸರ ಪಾತ್ರ ಬಹಳ ಮುಖ್ಯವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಸಾರ್ವಜನಿಕರು ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಪೊಲೀಸರ ಕರ್ತವ್ಯ ದಕ್ಷತೆ ಹಾಗೂ ಪ್ರಾಮಾಣಿಕತೆ ಕಾರಣವಾಗಿದೆ ಎಂದರು.

ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಕಾನೂನುಗಳನ್ನು ಪಾಲನೆ ಮಾಡುವುದರ ಬಗ್ಗೆ ಶಿಕ್ಷಕರು ತಿಳಿ ಹೇಳಬೇಕು. ಸಮಾಜದ ಹಾಗೂ ಪೊಲೀಸರ ಕರ್ತವ್ಯಗಳ ಬಗ್ಗೆ ತಿಳಿಸಬೇಕು. ಮಕ್ಕಳಿಗೆ ಬಾಲ್ಯದಲ್ಲಿಯೇ ಸಾಮಾಜಿಕ ಪ್ರಜ್ಞೆ ಮೂಡಿದರೆ, ಹಕ್ಕು ಹಾಗೂ ಕರ್ತವ್ಯಗಳ ಅರಿವಾದರೆ ದೇಶಕ್ಕೆ ಉತ್ತಮ ನಾಯಕರಾಗಿ ರೂಪುಗೊಳ್ಳಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ನ್ಯಾಯಾಧೀಶರು ಹೇಳಿದರು.

ಹುತಾತ್ಮ ಪೊಲೀಸರ ನಾಮವಾಚನ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ‘1959, ಅ.21ರಂದು ಲಡಾಕ್‌ನ ಅಕ್ಸಾಯ್ ಪ್ರದೇಶದಲ್ಲಿ ಗಡಿ ಕಾಯುತ್ತಿದ್ದ ಸೈನಿಕರ ಮೇಲೆ ಚೀನಾ ಸೈನಿಕರು ಏಕಾಏಕಿ ದಾಳಿ ನಡೆಸಿದ ಪರಿಣಾಮ ನಿಶಸ್ತ್ರರಾಗಿದ್ದ ದೇಶದ ಸೈನಿಕರು ಹುತಾತ್ಮರಾಗಬೇಕಾಕಾಯಿತು. ಸಾವು ಎದುರಿಗಿದ್ದರೂ ಎದೆಗುಂದದೆ ಹೋರಾಟ ಮಾಡಿದ ಭಾರತೀಯ ಸೈನಿಕರ ಧೈರ್ಯ, ಛಲ ಮಾದರಿ’ ಎಂದು ಸ್ಮರಿಸಿದರು.

ಹೋರಾಟದಲ್ಲಿ ದೇಶದ 10 ಸೈನಿಕರು ವೀರ ಮರಣ ಹೊಂದಿದ ಸ್ಮರಣಾರ್ಥ ಭಾರತ ಸರ್ಕಾರ 16 ಸಾವಿರ ಅಡಿ ಎತ್ತರದ ಲಡಾಕ್‌ನ ಅಕ್ಸಾಯ್ ಸ್ಥಳದಲ್ಲಿ ಹುತಾತ್ಮರ ಸ್ಮಾರಕ ನಿರ್ಮಿಸಿದೆ. ಅಂದಿನಿಂದ ಪ್ರತಿವರ್ಷ ಅ.21ರಂದು ಹುತಾತ್ಮರ ದಿನವನ್ನು ದೇಶದಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಪೊಲೀಸ್ ತುಕಡಿಗಳು ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು. ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಭಾಸ್ಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.

ಹುತಾತ್ಮರ ಸ್ಮರಣೆಗಾಗಿ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿ ಮೌನ ಆಚರಿಸಲಾಯಿತು. ಬಳಿಕ ಪೊಲೀಸ್ ಬ್ಯಾಡ್‌ನಿಂದ ‘ಅಬಾಯ್ಡ್ ವಿತ್ ಮಿ’ ಗೀತೆ ನುಡಿಸಲಾಯಿತು.

ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಸಿಬ್ಬಂದಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು

191 ಮಂದಿ ಹುತಾತ್ಮ

ಪ್ರಸಕ್ತ ವರ್ಷ ಕರ್ತವ್ಯ ನಿರ್ವಹಿಸುವ ವೇಳೆ ಕರ್ನಾಟಕದ 8 ಮಂದಿ ಪೊಲೀಸರು ಹಾಗೂ ದೇಶದಲ್ಲಿ 191 ಪೊಲೀಸರು ಹುತಾತ್ಮರಾಗಿದ್ದಾರೆ. ಜಿಲ್ಲೆಯಲ್ಲಿ ಹುತಾತ್ಮರ ದಿನವನ್ನು ವಿಶೇಷವಾಗಿ ಆಚರಿಸುವ ಸಲುವಾಗಿ ರಾಜ್ಯದಲ್ಲಿಯೇ ಅತಿ ಎತ್ತರದ ಹಾಗೂ ದೇಶದಲ್ಲಿ ಎರಡನೇ ಎತ್ತರದ ಪೊಲೀಸ್ ಸ್ಮಾರಕವನ್ನು ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ನಿರ್ಮಿಸಲಾಗಿದೆ. ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಒಡೆತನದ ಕ್ಯಾಂಪಾ ಕೋಲಾ ಬೇವರೇಜಸ್ ಕಂಪನಿ ನೆರವಿನೊಂದಿಗೆ ನೂತನ ಸ್ಮಾರಕ ನಿರ್ಮಾಣವಾಗಿದೆ ಎಂದು ಎಸ್‌ಪಿ ಬಿ.ಟಿ.ಕವಿತಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.