ADVERTISEMENT

ಬಿಜೆಪಿಗೆ ಅಧಿಕಾರ ನಿಚ್ಚಳ, ಆಶಾ ಅಧ್ಯಕ್ಷೆ?

ಚಾಮರಾಜನಗರ ನಗರಸಭೆ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ, ಕಮಲ ಪಾಳಯಕ್ಕೆ ಪ್ರಕಾಶ್‌ ಬೆಂಬಲ?

ಸೂರ್ಯನಾರಾಯಣ ವಿ
Published 31 ಅಕ್ಟೋಬರ್ 2020, 19:30 IST
Last Updated 31 ಅಕ್ಟೋಬರ್ 2020, 19:30 IST
ಚಾಮರಾಜನಗರ ನಗರಸಭಾ ಕಚೇರಿ
ಚಾಮರಾಜನಗರ ನಗರಸಭಾ ಕಚೇರಿ   

ಚಾಮರಾಜನಗರ: ಇಲ್ಲಿನ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಲಿದ್ದು, ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ.

31 ಸದಸ್ಯ ಬಲದ ನಗರಸಭೆಯಲ್ಲಿ 15 ಸ್ಥಾನಗಳನ್ನು ಗಳಿಸಿರುವ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿದೆ. ಕಾಂಗ್ರೆಸ್‌ ಎಂಟು, ಎಸ್‌ಡಿಪಿಐ ಆರು, ಬಿಎಸ್‌ಪಿ 1 ಹಾಗೂ ಪಕ್ಷೇತರರು ಒಬ್ಬರು ಇದ್ದಾರೆ.

ಸರಳ ಬಹುಮತಕ್ಕೆ 16 ಸದಸ್ಯರ ಬೆಂಬಲ ಬೇಕು. ಆದರೆ, ಶಾಸಕ ಹಾಗೂ ಸಂಸದರಿಗೂ ಮತದಾನ ಹಕ್ಕು ಇರುವುದರಿಂದ 17 ಮತಗಳು ಬೇಕು.

ADVERTISEMENT

15 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ಸಂಸದರ (ವಿ.ಶ್ರೀನಿವಾಸ ಪ್ರಸಾದ್‌) ಮತ ಇದೆ. ಹಾಗಾಗಿ ಅಧಿಕಾರ ಹಿಡಿಯಲು ಇನ್ನು ಒಬ್ಬರು ಸದಸ್ಯರ ಬೆಂಬಲ ಬೇಕು. ಈ ಹಿಂದಿನಂತೆ ಕಾಂಗ್ರೆಸ್‌, ಎಸ್‌ಡಿಪಿಐ ಮೈತ್ರಿ ಮಾಡಿಕೊಂಡರೂ 14 ಸದಸ್ಯರ ಬೆಂಬಲ ಸಿಗುತ್ತದೆ. ಶಾಸಕ (ಸಿ.ಪುಟ್ಟರಂಗಶೆಟ್ಟಿ) ಅವರ ಒಂದು ಮತ ಸೇರಿದರೆ 15 ಮತಗಳಾಗುತ್ತವೆ. ಬಹುಮತ ಸಾಬೀತು ಪಡಿಸಲು ಇನ್ನು ಎರಡು ಮತಗಳು ಬೇಕು.

ಹಾಗಾಗಿ, ಬಿಜೆಪಿ ಹಾಗೂ ಕಾಂಗ್ರೆಸ್‌–ಎಸ್‌ಡಿಪಿಐ ಮೈತ್ರಿ ಅಧಿಕಾರ ಪಡೆಯಲು27ನೇ ವಾರ್ಡ್‌ನ ಸದಸ್ಯ ಪ್ರಕಾಶ್‌ ಹಾಗೂ 17ನೇ ವಾರ್ಡ್‌ನ‍ಪಕ್ಷೇತರ ಸದಸ್ಯ ಬಸವಣ್ಣ ಅವರ ಬೆಂಬಲ ನಿರ್ಣಾಯಕವಾಗಿದೆ.

ಬಿಜೆಪಿಯತ್ತ ವಾಲಿದ ಪ್ರಕಾಶ್‌: ಈ ಮಧ್ಯೆ, ಬಿಎಸ್‌ಪಿ ಸದಸ್ಯ ಪ್ರಕಾಶ್‌ ಅವರು ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಬಿಎಸ್‌ಪಿಯಿಂದ ಸ್ಪರ್ಧಿಸಿ ಗೆದ್ದಿದ್ದರೂ, ಈಗ ಅವರು ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ.

ಕೊಳ್ಳೇಗಾಲ ನಗರಸಭೆಯಲ್ಲಿ ಎನ್‌.ಮಹೇಶ್‌ ಬಣ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಏರಿದೆ. ಅದೇ ಮಾದರಿಯಲ್ಲಿ ಇಲ್ಲೂ ಪ್ರಕಾಶ್‌ ಅವರು ಬಿಜೆಪಿಗೆ ಬೆಂಬಲ ನೀಡಲಾಗಿದ್ದಾರೆ ಎಂದು ಹೇಳಲಾಗಿದೆ.

ತಾವು ಎನ್‌.ಮಹೇಶ್‌ ಅವರೊಂದಿಗಿದ್ದು, ಅವರು ಹೇಳಿದಂತೆ ನಡೆದುಕೊಳ್ಳುವುದಾಗಿ ಪ್ರಕಾಶ್ ಅವರು ಈ ಹಿಂದೆ ಹೇಳಿಕೊಂಡಿದ್ದರು. ಬಿಜೆಪಿಯ ಸದಸ್ಯರು ಮಡಿಕೇರಿ, ಮಂಗಳೂರಿನತ್ತ ಪ್ರವಾಸಕ್ಕೆ ತೆರಳಿದ್ದು, ಆ ತಂಡದಲ್ಲಿ ಪ್ರಕಾಶ್‌ ಅವರೂ ಇದ್ದಾರೆ ಎನ್ನಲಾಗಿದ್ದು, ಅವರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪತ ಹಾಕುತ್ತಾರೆ ಎಂಬ ವದಂತಿಗೆ ಪುಷ್ಟಿ ನೀಡಿದೆ.

‌ಇತ್ತ ಕಾಂಗ್ರೆಸ್‌ ಕೂಡ ಎಸ್‌ಡಿಪಿಐ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಏರುವ ಪ್ರಯತ್ನವನ್ನು ಬಿಟ್ಟಿಲ್ಲ. ಭಾನುವಾರದ ಸಂಜೆಯ ಹೊತ್ತಿಗೆ ಎಲ್ಲವೂ ಖಚಿತವಾಗಿದೆ.

ಆಶಾ ಅಧ್ಯಕ್ಷೆಯಾಗುವ ಸಾಧ್ಯತೆ

ನಗರಸಭೆಯ ಅಧ್ಯಕ್ಷ ಸ್ಥಾನಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ–ಮಹಿಳೆಗೆ ಮೀಸಲಾಗಿದೆ. ಬಿಜೆಪಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆ ಒಬ್ಬರೇ ಇದ್ದು,ಬಿಜೆಪಿ ಅಧಿಕಾರಕ್ಕೆ ಬಂದರೆ 29ನೇ ವಾರ್ಡ್‌ನ ಪಿ.ಸುಧಾ ಅವರು ಉಪಾಧ್ಯಕ್ಷರಾಗುವುದು ಖಚಿತ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಯಾರು ಬೇಕಾದರೂ ಆಗಬಹುದು. ಸುಧಾ ಅವರನ್ನು ಬಿಟ್ಟು ಇನ್ನೂ ಆರು ಮಂದಿ ಸದಸ್ಯೆಯರಿದ್ದಾರೆ. ಈ ಪೈಕಿ7ನೇ ವಾರ್ಡ್‌ನ ಸಿ.ಎಂ.ಆಶಾ, 12ನೇ ವಾರ್ಡ್‌ನ ಎಚ್‌.ಎಸ್‌.ಮಮತಾ ಅವರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಆಶಾ ಅವರ ಹೆಸರು ಮುಂಚೂಣಿಯಲ್ಲಿದ್ದು, ಎಲ್ಲ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಬಿಎಸ್‌ಪಿ ಸದಸ್ಯ ಪ್ರಕಾಶ್‌ ಅವರು ಕೂಡ ಆಶಾ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. ‌‌

ಮಮತಾ ಅವರು ಬಿಜೆಪಿ ಮುಖಂಡ ಬಾಲಸುಬ್ರಹ್ಮಣ್ಯ ಅವರ ಪತ್ನಿ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಹಾಗೂ ಪಕ್ಷದ ಇತರ ಮುಖಂಡರೊಂದಿಗೆ ಬಾಲಸುಬ್ರಹ್ಮಣ್ಯ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ, ಅವರಿಗೂ ಪಕ್ಷದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.ಕೊನೆ ಕ್ಷಣದಲ್ಲಿ ಪಕ್ಷದ ನಿರ್ಧಾರ ಬದಲಾದರೂ ಅಚ್ಚರಿ ಇಲ್ಲ.

ಕಾಂಗ್ರೆಸ್‌ನಲ್ಲಿ 13ನೇ ವಾರ್ಡ್‌ನ ಕಲಾವತಿ, 14ನೇ ವಾರ್ಡ್‌ನ ಚಿನ್ನಮ್ಮ, 18ನೇ ವಾರ್ಡ್‌ನ ಎನ್‌.ಶಾಂತಿ ಅವರು ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೀಸಲಾತಿ ಪಟ್ಟಿಯಂತೆ ಉಪಾಧ್ಯಕ್ಷೆ ಸ್ಥಾನಕ್ಕೆ ಏರಲು ಅರ್ಹರಾಗಿರುವ ಸದಸ್ಯೆ ಒಬ್ಬರೇ ಇದ್ದು,16ನೇ ವಾರ್ಡ್‌ ಸದಸ್ಯೆ‌ ಚಂದ್ರಕಲಾ ಬಿ.ಎಸ್‌ ಅವರೇ ಆಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.